'ಖಾನ್'ಗ್ರೆಸ್ ಹಣಿಯಲು 'ದಳ'ಪತಿ ತಂತ್ರ; ಸಾಮೂಹಿಕವಾಗಿ 'ಕೈ' ಕೊಟ್ಟು 'ತೆನೆ' ಹಿಡಿದ ಚಾಮರಾಜಪೇಟೆ ಮುಖಂಡರು

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಮಾಜಿ ಕಾರ್ಪೋರೇಟರ್ ಗೌರಮ್ಮ ಮತ್ತು ಅವರ ಪತಿ ಗೋವಿಂದರಾಜು ಸೇರಿದಂತೆ ಚಾಮರಾಜಪೇಟೆ ಕಾಂಗ್ರೆಸ್ ಮುಖಂಡರು ಸಾಮೂಹಿಕವಾಗಿ ಜಾತ್ಯಾತೀತ ಜನತಾದಳ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಜೆಡಿಎಸ್ ಸೇರ್ಪಡೆಯಾದ ಕಾಂಗ್ರೆಸ್ ಮುಖಂಡರು
ಜೆಡಿಎಸ್ ಸೇರ್ಪಡೆಯಾದ ಕಾಂಗ್ರೆಸ್ ಮುಖಂಡರು

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಮಾಜಿ ಕಾರ್ಪೋರೇಟರ್ ಗೌರಮ್ಮ ಮತ್ತು ಅವರ ಪತಿ ಗೋವಿಂದರಾಜು ಸೇರಿದಂತೆ ಚಾಮರಾಜಪೇಟೆ ಕಾಂಗ್ರೆಸ್ ಮುಖಂಡರು ಸಾಮೂಹಿಕವಾಗಿ ಜಾತ್ಯಾತೀತ ಜನತಾದಳ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಹೌದು.. ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಶುರುವಾಗಿದ್ದು, ಪ್ರಮುಖವಾಗಿ ಈ ಹಿಂದೆ ಧರ್ಮದಂಗಲ್ ಕೇಂದ್ರಬಿಂದುವಾಗಿದ್ದ ಚಾಮರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಸಾಮೂಹಿಕವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 

ಚಾಮರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದರಾಜು, ಮಾಜಿ ಉಪಮೇಯರ್​ ಶ್ರೀರಾಮೇಗೌಡ, BBMP ಮಾಜಿ ಸದಸ್ಯೆ ಗೌರಮ್ಮ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಶೇಖರ್​, ದೊರೆ ಸೇರಿದಂತೆ ಹಲವರು JDS​ ಪಕ್ಷಕ್ಕೆ ಸೇರ್ಪಡೆಯಾದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರಿದರು.

ಈ ಬಾರಿ ಚುನಾವಣೆಯಲ್ಲಿ ಜಮೀರ್ ಅಹಮ್ಮದ್ ಖಾನ್ (BZ Zameer Ahmed Khan )ಅವರನ್ನು ಹಣಿಯಲು ದಳಪತಿಗಳು ಭರ್ಜರಿ ಪ್ಲ್ಯಾನ್ ಮಾಡಿದ್ದು, ಇದಕ್ಕಾಗಿ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್​ನ ಪ್ರಮುಖ ನಾಯಕರುಗಳಿಗೆ ಗಾಳ ಹಾಕಿದ್ದಾರೆ. ಇದರ ಮೊದಲ ಭಾಗ ಎಂಬಂತೆ ಇಂದು ಚಾಮರಾಜಪೇಟೆ ಕಾಂಗ್ರೆಸ್ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಈ ವೇಳೆ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ, 'ಚಾಮರಾಜಪೇಟೆ ಹಿಂದೆ ಯಾವ ತರ ಇತ್ತು. ಬಳಿಕ ದೇವೇಗೌಡರು ಯಾವ ತರ ಅಡಿಪಾಯ ಹಾಕಿದರು. ಅದಕ್ಕೆಲ್ಲ ಒಂದು ಇತಿಹಾಸ ಇದೆ. ಈಗ ಮತ್ತೊಮ್ಮೆ ಜೆಡಿಎಸ್ ಗೆಲ್ಲಬೇಕು. ಹಣ ಹಂಚುವುದು ದೊಡ್ಡದಲ್ಲ. ಆದರೆ ಆ ಹಣ ಹೇಗೆ ಸಂಗ್ರಹ ಆಗಿದೆ ಎಂದು ಗಮನಿಸಬೇಕು. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆಲ್ಲುವ ಮೊದಲ ಕ್ಷೇತ್ರ ಆಗಲಿದೆ. ಗುಜರಾತ್ ಚುನಾವಣೆ ಫಲಿತಾಂಶ ಬಳಿಕ ಕಾಂಗ್ರೆಸ್ ‌ಮತ್ತು ಬಿಜೆಪಿ ಯಾವ ತಂತ್ರ ಮಾಡುತ್ತಿದ್ದಾರೆ ಎಂದು ಕಳೆದ ಎರಡು ಮೂರು ದಿನಳಿಂದ ತೋರಿಸುತ್ತಿದ್ದಾರೆ. ಜೆಡಿಎಸ್ ಪಕ್ಷ ಇದೆ ಎನ್ನುವುದನ್ನೇ ಮರೆತಿದ್ದಾರೆ. ಆದರೂ ನನಗೆ ಬೇಸರ ಇಲ್ಲ. ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕಿಂತ ಜೆಡಿಎಸ್ ಗ್ರಾಫ್ ಮೇಲೆ ಏಳುತ್ತಿದೆ. ಪಂಚರತ್ನ ಕಾರ್ಯಕ್ರಮದ ಮೂಲಕ ಅದು ಗೊತ್ತಾಗಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಜನರಿಗೆ ರಕ್ಷಣೆ ಇಲ್ಲ ಎಂಬುದು ಜನರಿಗೆ ಗೊತ್ತಾಗಿದೆ. ಇಂದು ಬಿಜೆಪಿ, ಕಾಂಗ್ರೆಸ್ ಆಂತರಿಕ ಸಮೀಕ್ಷೆ ನಡೆಸುತ್ತಿವೆ. ಪ್ರತಿ ಎರಡು ತಿಂಗಳಿಗೆ ಒಂದು ಕಾರ್ಯತಂತ್ರ ಮಾಡುತ್ತವೆ. ಚಾಮರಾಜಪೇಟೆ ಚುನಾವಣೆಯಲ್ಲಿ ನಾವು ಗೆಲ್ಲುವುದರಲ್ಲಿ ಅನುಮಾನವಿಲ್ಲ. 2023ರಲ್ಲಿ ನಮ್ಮ ಸರ್ಕಾರ ಬರುವುದು ಶತಃಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2013, 2018ರಲ್ಲಿ ಜಮೀರ್ ಪರ ನಿಂತಿದ್ದೆ.. ಆದರೆ!: ಗೋವಿಂದರಾಜು
ಚಾಮರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದರಾಜು ಜೆಡಿಎಸ್​ ಸೇರ್ಪಡೆಯಾಗಿ ಬಳಿಕ ಮಾತನಾಡಿದ ಅವರು, 20 ವರ್ಷಗಳಿಂದ ಚಾಮರಾಜಪೇಟೆಯಲ್ಲಿ ಅಭಿವೃದ್ಧಿ ಆಗಿಲ್ಲ. ಅದಕ್ಕೆ ಸಾಮೂಹಿಕವಾಗಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದೇವೆ. 2013, 2018ರಲ್ಲಿ ಜಮೀರ್ ಅಹಮ್ಮದ್ ಖಾನ್ ಜೊತೆ ನಿಂತಿದ್ದೆ. ಆದರೆ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಹಾಗಾಗಿ ಇಂದು ಜೆಡಿಎಸ್ ಸೇರ್ಪಡೆ ಆಗಿದ್ದೇನೆ. ಕಾರ್ಯಕರ್ತನಾಗಿ ನಾನು ನನ್ನ ಕೆಲಸ ಮಾಡುತ್ತೇನೆ. ನಾನು ಟಿಕೆಟ್ ಆಕಾಂಕ್ಷಿ ಖಂಡಿತ ಅಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ಇದೇ ಗೋವಿಂದರಾಜು ಈ ಹಿಂದೆ ಆರ್ ಟಿಐ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣದಲ್ಲಿ ಖುಲಾಸೆಯಾಗಿ ಇತ್ತೀಚೆಗಷ್ಟೇ ಪ್ರಕರಣದಿಂದ ಮುಕ್ತರಾಗಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com