ಪ್ರಧಾನಿ ಮೋದಿಯವರು ಶೇ.40 ಕಮಿಷನ್ ಆರೋಪ ಕುರಿತು ಉತ್ತರಿಸಲಿ: ಕರ್ನಾಟಕ ಕಾಂಗ್ರೆಸ್

ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಜೆಪಿ ವಿರುದ್ಧ ಕೇಳಿಬಂದಿರುವ ಶೇ.40 ಕಮಿಷನ್ ಆರೋಪ ಕುರಿತು ಉತ್ತರಿಸಲಿ ಎಂದು ಕಾಂಗ್ರೆಸ್ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಜೆಪಿ ವಿರುದ್ಧ ಕೇಳಿಬಂದಿರುವ ಶೇ.40 ಕಮಿಷನ್ ಆರೋಪ ಕುರಿತು ಉತ್ತರಿಸಲಿ ಎಂದು ಕಾಂಗ್ರೆಸ್ ಹೇಳಿದೆ.

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಪ್ರಧಾನಿ ಮೋದಿಗೆ ಪಕ್ಷದ ವತಿಯಿಂದ ಪತ್ರ ಬರೆದು, ಬಿಜೆಪಿ ಸರ್ಕಾರದ ಲೋಪಗಳ ಬಗ್ಗೆ ವಿವರಣೆ ನೀಡಿದ್ದೇವೆ. ಈ ವಿಚಾರವಾಗಿ ಮೋದಿಯವರು ಜನರಿಗೆ ಉತ್ತರ ನೀಡಬೇಕೆಂದು ಆಗ್ರಹಿಸಿದ್ದಾರೆ.

 ಶೇ.40 ಕಮಿಷನ್ ವಿಚಾರಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮಾಡಿರುವ ಆರೋಪಕ್ಕೆ ಮೋದಿಯವರು ಉತ್ತರ ನೀಡಬೇಕೆಂದು ಶಿವಕುಮಾರ್ ಕೇಳಿದ್ದಾರೆ.

ಮೋದಿ ಕಾಂಗ್ರೆಸ್ ಅನ್ನು ಶೇ.10 ಕಮಿಷನ್ ಸರ್ಕಾರ ಎಂದು ಕರೆಯುತ್ತಾರೆ. ನಮ್ಮ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಈಗ ಕೆಂಪಣ್ಣ ಪತ್ರ ಬರೆದು ಆರೋಪ ಮಾಡಿ ಒಂದು ವರ್ಷ ನಾಲ್ಕು ತಿಂಗಳು ಕಳೆದರೂ ಸುಮ್ಮನಿರುವುದೇಕೆ?’’ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಮೋದಿಯವರ ರಾಜ್ಯ ಭೇಟಿಯನ್ನು ಚುನಾವಣಾ ಸ್ಟಂಟ್ ಎಂದು ಕರೆದ ಸಿದ್ದರಾಮಯ್ಯ ಅವರು, ವಾಲ್ಮೀಕಿ ಪ್ರತಿಮೆ ನಮ್ಮ ಸರ್ಕಾರ ಮಾಡಿದ್ದು. ಆದರೆ ಮೋದಿ ಇದೀಗ ಹೂವಿನ ಹಾರ ಹಾಕಲು ಬರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ವಾಲ್ಮೀಕಿ, ಕನಕದಾಸರ ಪ್ರತಿಮೆ ಮಾಡಿದವರು ನಾವು.ಹೂವಿನ ಹಾರ ಹಾಕಿದಾಕ್ಷಣ ಕನಕದಾಸ ಪರ ಇದ್ದಾರಾ ಇವರು? ಇವೆಲ್ಲವೂ ಪೊಲಿಟಿಕಲ್ ಗಿಮಿಕ್. ಕೆಂಪೇಗೌಡರ ಜಯಂತಿ ಮಾಡಿದವರು ಯಾರು..? ಕೆಂಪೇಗೌಡರ ಪ್ರಾಧಿಕಾರ ಮಾಡಿದವರು ಯಾರು? ಏರ್ ಪೋರ್ಟ್ ಗೆ ಕೆಂಪೇಗೌಡ ಎರ್ ಪೋರ್ಟ್ ಅಂತ ಹೆಸರು ಇಟ್ಟವರು ಯಾರು..? ಇದೆಲ್ಲವೂ ಮಾಡಿದ್ದು ನಮ್ಮ ಸರ್ಕಾರ’’ ಎಂದರು.

“ಕೆಂಪೇಗೌಡ ಪ್ರತಿಮೆ ಮಾಡಬೇಕು ಎಂದು ನಾವು ಆಗಲೇ ತೀರ್ಮಾನ ಮಾಡಿದ್ದೆವು. ಏರ್ ಪೋರ್ಟ್ ಗೆ ಹೆಸರು ಇಟ್ಟ ಮೇಲೆ, ಪ್ರತಿಮೆ ಮಾಡಬೇಕು ಎಂದು ತೀರ್ಮಾನ ಮಾಡಿದ್ದೆವು. 2015-16ರಲ್ಲಿ ಸಿಎಂ ಆಗಿದ್ದ ಕನಕ ಗುರುಪೀಠ ಸ್ಥಾಪಿಸಿದ್ದೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶಂಕುಸ್ಥಾಪನೆ ಸಮಾರಂಭಕ್ಕೂ ಬಂದಿರಲಿಲ್ಲಎಂದು ಹೇಳಿದರು.

ಎಸ್‍ಸಿ/ಎಸ್‍ಟಿ ಸಮುದಾಯಗಳ ಮೀಸಲು ಹೆಚ್ಚಳದ ಕುರಿತು ರಾಜ್ಯದಲ್ಲಿ ಎಲ್ಲ ಪಕ್ಷಗಳೂ ಸೇರಿ ಸರ್ವಾನುಮತದ ತೀರ್ಮಾನ ತೆಗೆದುಕೊಂಡಿದ್ದೇವೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಸೂಕ್ತ ಕ್ರಮಕ್ಕಾಗಿ ಕಳಿಸಿದೆ. ಇದನ್ನು ಸಂವಿಧಾನದ 9ನೇ ಶೆಡ್ಯೂಲಿಗೆ ಕೂಡಲೆ ಸೇರಿಸಬೇಕು. ಆದರೆ, ಈ ಕುರಿತು ಕೇಂದ್ರದ ನಿಲುವು ಏನು? ನಮ್ಮ ಸರ್ಕಾರವಿದ್ದಾಗ 2013 ರಿಂದ 2018 ರ ವರೆಗೆ ಹಲವಾರು ಜಾತಿಗಳನ್ನು ಪ.ಜಾತಿ/ಪ.ಪಂಗಡಕ್ಕೆ ಸೇರಿಸಬೇಕೆಂದು ಶಿಫಾರಸ್ಸು ಮಾಡಿದ್ದೆವು. ಅವುಗಳ ಕುರಿತು ನಿಮ್ಮ ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಎಂದು ಪ್ರಶ್ನಿಸಿದರು.

ನೀವು ಮಹರ್ಷಿ ವಾಲ್ಮೀಕಿ, ನಾಡಪ್ರಭು ಕೆಂಪೇಗೌಡರು, ದಾಸಶ್ರೇಷ್ಠರಾದ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ನೀವು ರಾಜ್ಯಕ್ಕೆ ಬರುತ್ತಿದ್ದೀರಿ. ಇವರೆಲ್ಲಾ ಕನ್ನಡ ಮಣ್ಣಿನ ಸಾಂಸ್ಕೃತಿಕ ನಾಯಕರು. ವಿಗ್ರಹಗಳಿಗೆ ಮಾಲಾರ್ಪಣೆ ಮಾಡುತ್ತಾ ಅವರ ವಿಚಾರಗಳನ್ನು ಕೊಲ್ಲುವ ಸಂಪ್ರದಾಯವನ್ನು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಬೆದರಿಕೆ ಮೂಲಕ ಆಚರಣೆಗೆ ತರುತ್ತಿವೆ. ನೀವೀಗ ಮಾಲಾರ್ಪಣೆ ಮಾಡುವ ಎಲ್ಲಾ ಮಹನೀಯರ ಬಗ್ಗೆ ನಿಜವಾದ ಗೌರವ, ಶ್ರದ್ಧೆ ಇದ್ದರೆ ಇವರನ್ನೆಲ್ಲಾ ರಾಷ್ಟ್ರೀಯ ಸಾಂಸ್ಕೃತಿಕ ನಾಯಕರು ಎಂದು ಘೋಷಿಸಿ. ಇವರ ಪ್ರತಿಮೆಗಳನ್ನು ಪಾರ್ಲಿಮೆಂಟಿನ ಮುಂದೆ ಸ್ಥಾಪಿಸುವ ಭರವಸೆಯನ್ನು ಜನರಿಗೆ ನೀಡಿ ಎಂದಿದ್ದಾರೆ.

ಇದೇ ವೇಳೆ ಜಗತ್ತಿಗೆ ರಾಮಾಯಣದಂಥಹ ಶ್ರೇಷ್ಠ ಗ್ರಂಥವನ್ನು ನೀಡಿ ಶ್ರೀರಾಮನಂತಹ ವ್ಯಕ್ತಿತ್ವವನ್ನು ಪರಿಚಯಿಸಿದ ಮಹರ್ಷಿ ವಾಲ್ಮೀಕಿಯವರ ಮಂದಿರವನ್ನು ಅಯೋಧ್ಯೆಯಲ್ಲಿ ಸ್ಥಾಪಿಸುವಂತೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com