ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರಿನಲ್ಲಿ ಕೊಲೆಪಾತಕ ಗುಂಡಿಕೂಪಗಳು ಸರಣಿ ಸಾವುಗಳಿಗೆ ಕಾರಣ; ಅದೇ ಗುಂಡಿಗಳು ಕೆಲವರಿಗೆ ಕಲ್ಪವೃಕ್ಷ; ಎಚ್.ಡಿ ಕುಮಾರಸ್ವಾಮಿ

ನಾಡಪ್ರಭು ಶ್ರೀ ಕೆಂಪೇಗೌಡರು ಕಟ್ಟಿದ ವಿಶ್ವಮಾನ್ಯ ನಗರ ಬೆಂಗಳೂರಿಗೆ ಪಿಂಚಣಿದಾರರೂರು, ಉದ್ಯಾನ ನಗರ,  ಸಿಲಿಕಾನ್ ವ್ಯಾಲಿ ಎಂದೆಲ್ಲ ಹೆಸರುಗಳಿದ್ದವು.
Published on

ಬೆಂಗಳೂರು: ನಾಡಪ್ರಭು ಶ್ರೀ ಕೆಂಪೇಗೌಡರು ಕಟ್ಟಿದ ವಿಶ್ವಮಾನ್ಯ ನಗರ ಬೆಂಗಳೂರಿಗೆ ಪಿಂಚಣಿದಾರರೂರು, ಉದ್ಯಾನ ನಗರ,  ಸಿಲಿಕಾನ್ ವ್ಯಾಲಿ ಎಂದೆಲ್ಲ ಹೆಸರುಗಳಿದ್ದವು.  ಈಗ ಅವು ಗುಂಡಿಗಳೂರು, ಅಧ್ವಾನ ನಗರ, ಗುಂಡಿಗಳ ವ್ಯಾಲಿ ಎಂದಾಗಿದೆ. ಕಾಮಗಾರಿಗಳಲ್ಲಿ ಪರ್ಸಂಟೇಜ್ ವ್ಯವಸ್ಥೆಯೇ ಇಂಥ ಕುಖ್ಯಾತಿಗೆ ಕಾರಣ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಸಂಬಂಧ  ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಹೆಚ್.ಡಿ.ಕುಮಾರಸ್ವಾಮಿ, ರಸ್ತೆಗುಂಡಿಗಳು ಸಾವಿನ ಗುಂಡಿಗಳಾಗಿವೆ. ನಗರದ ಲುಲೂ ಮಾಲ್ ಎದುರಿನ ರಸ್ತೆಯಲ್ಲಿ ಗುಂಡಿಗೆ ಇನ್ನೊಂದು ಜೀವ ಬಲಿಯಾಗಿದ ಮೇಲೆ ಎಚ್ಚೆತ್ತುಕೊಳ್ಳುವ ನಾಟಕ ನಡೆದಿದೆ. ಶಾಶ್ವತ ಪರಿಹಾರ ಎಲ್ಲಿ? ಬೆಂಗಳೂರಿನಲ್ಲಿ ಕೊಲೆಪಾತಕ ಗುಂಡಿಕೂಪಗಳು ಸರಣಿ ಸಾವುಗಳಿಗೆ ಕಾರಣವಾಗಿದ್ದರೆ, ಅದೇ ಗುಂಡಿಗಳು ಕೆಲವರಿಗೆ ಕಲ್ಪವೃಕ್ಷವಾಗಿವೆ ಎಂದು ಟೀಕಿಸಿದ್ದಾರೆ.

ಗುಂಡಿ ಬಿದ್ದ ರಸ್ತೆಗಳು ರಾಜ್ಯದ ಗೌರವವನ್ನು ಮೂರಾಬಟ್ಟೆ ಮಾಡುತ್ತಿರುವುದು ಒಂದೆಡೆ, ಇನ್ನೊಂದೆಡೆ ಸರಕಾರ ಜಾಗತಿಕ ಹೂಡಿಕೆದಾರರ ಸಮಾವೇಶ, ಜಾಗತಿಕ ತಂತ್ರಜ್ಞಾನ ಶೃಂಗ ನಡೆಸುತ್ತಿದೆ. ' ರಸ್ತೆ ಗುಂಡಿಗಳ ಶೃಂಗ' ವನ್ನೂ ನಡೆಸಿದರೆ ಇನ್ನೂ ಚೆನ್ನಾಗಿರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ರಸ್ತೆ ಗುಂಡಿಗಳ ಸರಣಿ ಸಾವುಗಳಿಗೆ ರಾಜ್ಯ ಬಿಜೆಪಿ ಸರಕಾರವೇ ನೇರ ಕಾರಣ. ಮುಗ್ಧ ಜನರು ಸಾವು ನೋವುಗಳಿಗೆ ಬಿಬಿಎಂಪಿಯೇ ಸಂಪೂರ್ಣ ಹೊಣೆ. ಸಂಬಂಧಪಟ್ಟ ಮಂತ್ರಿಗಳು, ಅಧಿಕಾರಿಗಳೇ ಇದಕ್ಕೆ ಉತ್ತರದಾಯಿಗಳು.

ಪಾಲಿಕೆ ಮಾಡಿದ ಪಾಪಕ್ಕೆ ನತದೃಷ್ಟ ಮಹಿಳೆ ಉಮಾದೇವಿ ಅವರು ಬಲಿಯಾಗಿದ್ದಾರೆ. ಅವರಿಗೆ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುವುದಲ್ಲ. ಇನ್ನಾದರೂ ಗುಂಡಿಗಳನ್ನು ಮುಚ್ಚಬೇಕು ಹಾಗೂ ರಸ್ತೆಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಮೃತ ಮಹಿಳೆ ಶ್ರೀಮತಿ ಉಮಾದೇವಿ ಅವರ  ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ರಾಜ್ಯ ಸರಕಾರ ಅವರಿಗೆ ಸುಕ್ತ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com