ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗಾಗಿ ಅದ್ದೂರಿ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರಿಗಾಗಿ ಕರ್ನಾಟಕದಲ್ಲಿ ಅದ್ದೂರಿ ಸಮಾರಂಭ ಏರ್ಪಡಿಸಲು ಬಯಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಮತ್ತು ಖರ್ಗೆ
ಡಿಕೆ ಶಿವಕುಮಾರ್ ಮತ್ತು ಖರ್ಗೆ
Updated on

ಬೆಂಗಳೂರು: ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರಿಗಾಗಿ ಕರ್ನಾಟಕದಲ್ಲಿ ಅದ್ದೂರಿ ಸಮಾರಂಭ ಏರ್ಪಡಿಸಲು ಬಯಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದು ಕರ್ನಾಟಕಕ್ಕೆ ತುಂಬಾ ಖುಷಿ ತಂದಿದೆ. ನಾವು ಇಂದು ಸಭೆ ನಡೆಸಿದ್ದೇವೆ ಮತ್ತು ಅವರನ್ನು ಮೊದಲು ಕರ್ನಾಟಕಕ್ಕೆ ಬರಲು ಆಹ್ವಾನಿಸಿದ್ದೇವೆ ಎಂದು ಹೇಳಿದರು.

ಅಂತೆಯೇ ಅವರಿಗಾಗಿ ನಾವು ಭವ್ಯವಾದ ಸ್ವಾಗತವನ್ನು ಆಯೋಜಿಸಲು ಬಯಸುತ್ತೇವೆ. ಅವರ ಆಗಮನದಿಂದ ಪಕ್ಷವನ್ನು ಹುರಿದುಂಬಿಸಲಾಗುವುದು. ದೇಶವು ಹೊಸ ಮುಖವನ್ನು ಹುಡುಕುತ್ತಿದೆ. ಅವರ ಜೊತೆ ನಾವಿದ್ದೇವೆ ಎಂದು ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಪಕ್ಷಕ್ಕಾಗಿ 50 ವರ್ಷ ಸೇವೆ ಸಲ್ಲಿಸಿದ್ದಾರೆ. ಪಕ್ಷ ವಹಿಸಿದ ಎಲ್ಲಾ ಹುದ್ದೆಗಳನ್ನು ಜವಾಬ್ದಾರಿಯಾಗಿ ನಿಭಾಯಿಸಿದ್ದಾರೆ. ಪಕ್ಷನಿಷ್ಠೆ, ತ್ಯಾಗ, ಹೋರಾಟದ ಛಲ ಇದ್ದರೆ ಒಳ್ಳೆ ಅವಕಾಶ ಸಿಗುತ್ತೆ. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರೇ ಸಾಕ್ಷಿ ಎಂದು ಡಿ.ಕೆ.ಶಿವಕುಮಾರ್​ ಹೇಳಿದರು.

ಅಖಿಲ ಭಾರತ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅ 17ರಂದು ಮತದಾನ ನಡೆದಿತ್ತು. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಅಧ್ಯಕ್ಷ ಗಾದಿಗೆ ಸ್ಪರ್ಧಿಸಿದ್ದರು. ಸದ್ಯ ಎಐಸಿಸಿ ನೂತನ ಅಧ್ಯಕ್ಷರಾಗಿ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಪಟ್ಟಗಿಟ್ಟಿಸಿಕೊಂಡಿದ್ದಾರೆ. 7,897 ಮತಗಳನ್ನ ಮಲ್ಲಿಕಾರ್ಜುನ ಖರ್ಗೆ ಪಡೆದಿದ್ದು, 1,072 ಮತಗಳನ್ನ ಪಡೆದ ‘ಕೈ’ ನಾಯಕ ಶಶಿ ತರೂರ್ ಪಡೆದುಕೊಂಡಿದ್ದಾರೆ.

24 ವರ್ಷದ ಬಳಿಕ ಗಾಂಧಿಯೇತರ ನಾಯಕನಿಗೆ ಅಧ್ಯಕ್ಷ ಪಟ್ಟ ಒದಗಿದೆ. 9,385 ಮತಗಳು ಚಲಾವಣೆಯಾಗಿದ್ದು, 416 ಮತಗಳು ಅಮಾನ್ಯವಾಗಿವೆ. 1975ರಲ್ಲಿ ಎಸ್​.ನಿಜಲಿಂಗಪ್ಪ ಎಐಸಿಸಿ ಅಧ್ಯಕ್ಷರಾಗಿದ್ದರು. ಬಳಿಕ ಖರ್ಗೆಗೆ​​ ಅಧ್ಯಕ್ಷ ಪಟ್ಟ ಒಲಿದಿದ್ದು, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿದ ಎರಡನೇ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಆಗಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com