ನಿವೇಶನ ಖರೀದಿಗಾಗಿ ಗೆಳೆಯನಿಂದ ರೂ.1.5 ಕೋಟಿ ಸಾಲ ಪಡೆದಿದ್ದು ನಿಜ, ಸಾಲ ಪಡೆಯುವುದು ಅಪರಾಧನಾ?: ಸಿದ್ದರಾಮಯ್ಯ

ನಿವೇಶನ ಖರೀದಿಗಾಗಿ ವಿವೇಕ್ ಎನ್ನುವ 40 ವರ್ಷಗಳ ಗೆಳೆಯನಿಂದ ರೂ.1.5 ಕೋಟಿ ಸಾಲ ಪಡೆದಿದ್ದು ನಿಜವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಆದರೆ, ಸಾಲ ಪಡೆಯುವುದು ಅಪರಾಧನಾ? ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ
ಸುದ್ದಿಗೋಷ್ಠಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ
Updated on: 

ಬೆಂಗಳೂರು: ನಿವೇಶನ ಖರೀದಿಗಾಗಿ ವಿವೇಕ್ ಎನ್ನುವ 40 ವರ್ಷಗಳ ಗೆಳೆಯನಿಂದ ರೂ.1.5 ಕೋಟಿ ಸಾಲ ಪಡೆದಿದ್ದು ನಿಜವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಆದರೆ, ಸಾಲ ಪಡೆಯುವುದು ಅಪರಾಧನಾ? ಎಂದು ಪ್ರಶ್ನಿಸಿದ್ದಾರೆ.

ಈ ಸಂಬಂಧ ಬಿಜೆಪಿ ಆರೋಪ ಬಗ್ಗೆ  ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ವಿವೇಕ್ ಅವರನ್ನು ಪಿಟಿಸಿ ಸದಸ್ಯನನ್ನಾಗಿ ಮಾಡಿದ್ದು ಕೂಡ ನಿಜ. ಅವರಿಂದ ಸಾಲ ಪಡೆದದ್ದಕ್ಕೂ ಅವರ ನೇಮಕಕ್ಕೂ ಸಂಬಂಧ ಇಲ್ಲ. ಇದನ್ನೂ ಲೋಕಾಯುಕ್ತ ತನಿಖೆಗೆ ವಹಿಸುವುದಾದರೆ ನನ್ನ ವಿರೋಧ ಇಲ್ಲ. ತನಿಖೆ ಮಾಡಲಿ. ನಾನೇನು ಸಿಎಂ ಬಸವರಾಜ ಬೊಮ್ಮಾಯಿ ಅವರ ರೀತಿ ದಾಖಲೆ ಕೊಡಿ ಎಂದು ಕೇಳಲ್ಲ ಎಂದರು.

ಉತ್ತರ ಕನ್ನಡದಲ್ಲಿ ಪರೇಶ್‌ ಮೇಸ್ತಾ ಸಾವಿಗೀಡಾದಾಗ ಬಿಜೆಪಿಯವರ ಒತ್ತಡಕ್ಕಾಗಿ ತಕ್ಷಣ ಪ್ರಕರಣವನ್ನು ಸಿಬಿಐ ಗೆ ವಹಿಸಿದ್ದೆ. ಈಗ ಸಿಬಿಐ ಬಿ ರಿಪೋರ್ಟ್‌ ನೀಡಿದರೆ ಅದಕ್ಕೆ ಸಿದ್ದರಾಮಯ್ಯ ಸರ್ಕಾರ ಸಾಕ್ಷ್ಯ ನಾಶ ಮಾಡಿದ್ದು ಕಾರಣ ಎಂದು ಹೇಳುತ್ತಿರುವುದು ನಾಚಿಕೆಗೇಡು. ಸಿಬಿಐ ಸಂಸ್ಥೆ ಗೃಹ ಸಚಿವ ಅಮಿತ್ ಶಾ ಅವರ ಅಧೀನದಲ್ಲಿದ್ದು,  ಪ್ರಕರಣದ ಸಾಕ್ಷಿ ನಾಶ ಆಗಿ, ಸರಿಯಾದ ರೀತಿ ತನಿಖೆ ಆಗಿಲ್ಲ ಎಂದರೆ ಅಮಿತ್‌ ಶಾ ಅವರು ಅಸಮರ್ಥರು ಎಂದಲ್ವ? ಈಗ  ಬಿಜೆಪಿ ನಾಯಕರು ತಮ್ಮ ಪಕ್ಷದ ನಾಯಕನನ್ನೇ ದೂರಿದಂಗೆ ಆಗಲ್ವಾ? ಎಂದು ಹೇಳಿದರು.

ಸಿಬಿಐ  ಬಿ ರಿಪೋರ್ಟ್‌ ಹಾಕಿದ್ರೆ ಸಾಕ್ಷ್ಯ ನಾಶ ಮಾಡಿದ್ರು ಎನ್ನುತ್ತಾರೆ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರಿಗೆ ಬಿ ರಿಪೋರ್ಟ್‌ ಹಾಕಿದರೆ ಕ್ಷೀನ್‌ ಚಿಟ್‌ ಕೊಟ್ಟಿದ್ದಾರೆ ಎನ್ನುತ್ತಾರೆ. ಬಿಜೆಪಿಯವರಿಗೆ ಎಷ್ಟು ನಾಲಿಗೆಗಳು ಎಂದು ಅವರು ಪ್ರಶ್ನಿಸಿದರು.

 ಸ್ಥಳೀಯ  ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿಗಾಗಿ ರಾಜೀವ್ ಗಾಂಧಿ ಸರ್ಕಾರ ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ಮಾಡಿದ್ದು. ಅದನ್ನು ಜಾರಿಗೆ ತಂದದ್ದು ಪಿ.ವಿ.ನರಸಿಂಹರಾವ್ ಸರ್ಕಾರ. ಇದನ್ನು ಬಿಜೆಪಿಯ ರಾಮಾ ಜೋಯಿಸ್ ವಿರೋಧಿಸಿದರು. ಸ್ಥಳೀಯ ಸಂಸ್ಥೆಗಳ ರಾಜಕೀಯ ಮೀಸಲಾತಿ ಅಸಂವಿಧಾನಿಕ ಎಂದು  ರಾಮಾ ಜೋಯಿಸ್ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾಗ ಬಸವರಾಜ ಬೊಮ್ಮಾಯಿ ಎಲ್ಲಿದ್ದರು? ಮುಖ್ಯಮಂತ್ರಿಗಳು ಮಾತನಾಡುವ ಮೊದಲು ಇತಿಹಾಸ ತಿಳಿದುಕೊಳ್ಳಲಿ ಎಂದರು.

ರಾಜ್ಯ ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ನ್ಯಾಯಾಂಗ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬೀಳಲು ಸಾಧ್ಯ.  ತಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಅವುಗಳನ್ನೂ ಸೇರಿಸಿ ತನಿಖೆ ಮಾಡಿಸಿದರೆ ಅಭ್ಯಂತರ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com