'ಭಾರತ್ ಜೋಡೋ ಯಾತ್ರೆ' ಕಾಂಗ್ರೆಸ್ ಗೆ ಐತಿಹಾಸಿಕ ತಿರುವು ನೀಡಲಿದೆ: ಕೆ.ಸಿ.ವೇಣುಗೋಪಾಲ್

ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ನಡೆಸುತ್ತಿರುವ 'ಭಾರತ್ ಜೋಡೋ ಯಾತ್ರೆ' ದೇಶದ ರಾಜಕೀಯ ಇತಿಹಾಸದಲ್ಲಿ ತಿರುವು ನೀಡಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೆಸಿ ವೇಣುಗೋಪಾಲ್, ಸಿದ್ದರಾಮಯ್ಯ. ಡಿಕೆ ಶಿವಕುಮಾರ್ ಮತ್ತಿತರರು
ಸುದ್ದಿಗೋಷ್ಠಿಯಲ್ಲಿ ಕೆಸಿ ವೇಣುಗೋಪಾಲ್, ಸಿದ್ದರಾಮಯ್ಯ. ಡಿಕೆ ಶಿವಕುಮಾರ್ ಮತ್ತಿತರರು

ಬೆಂಗಳೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ನಡೆಸುತ್ತಿರುವ 'ಭಾರತ್ ಜೋಡೋ ಯಾತ್ರೆ' ದೇಶದ ರಾಜಕೀಯ ಇತಿಹಾಸದಲ್ಲಿ ತಿರುವು ನೀಡಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಭಾರತ ಐಕ್ಯತಾ ಯಾತ್ರೆಯ ಸಿದ್ಧತಾ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಜನಸಾಮಾನ್ಯರು ಹಾಗೂ ಅವರ ಸಮಸ್ಯೆ ಬಗ್ಗೆ ಹೆಚ್ಚು ಚಿಂತಿತರಾಗಿದ್ದು, ನಿರುದ್ಯೋಗ, ಬೆಲೆ ಏರಿಕೆ, ರೈತರ ಸಂಕಷ್ಟ, ಸಾಮಾಜಿಕ ಸಾಮರಸ್ಯದ ಬಗ್ಗೆ ಧ್ವನಿಯಾಗಿದ್ದಾರೆ. ಆರ್ಥಿಕ, ಸಾಮಾಜಿಕ ಅಸಮಾನತೆ, ರಾಜಕೀಯ ದ್ವೇಷದ ವಿಚಾರವಾಗಿ ಈ ಯಾತ್ರೆ ಮಾಡಲಾಗುತ್ತಿದೆ. ದೇಶದ ರಾಜಕೀಯ ಇತಿಹಾಸದಲ್ಲಿ ಈ ಯಾತ್ರೆ ಒಂದು ತಿರುವು ನೀಡಲಿದೆ ಎಂದರು.

ನಿರೀಕ್ಷೆ ಮೀರಿ ಲಕ್ಷಾಂತರ ಜನ ಈ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಚ್ಚರಿಯ ವಿಷಯ ಎಂದರೆ, ರಾಹುಲ್ ಗಾಂಧಿ ಜೊತೆಗೆ  ಜನ ಸಾಮಾನ್ಯರೂ ಕುಟುಂಬ ಸಮೇತವಾಗಿ ಮಕ್ಕಳಿಂದ ವೃದ್ಧರವರೆಗೂ ಉತ್ಸುಕತೆಯಿಂದ ಹೆಜ್ಜೆ ಹಾಕುತ್ತಿದ್ದಾರೆ.  ಇದು ಯಾತ್ರೆಯನ್ನು ಜನ ಒಪ್ಪಿರುವುದಕ್ಕೆ ಸಾಕ್ಷಿ. ಪಾದಯಾತ್ರೆಯಲ್ಲಿ ಭಾಗವಹಿಸದವರು ಕೂಡ ಶುಭ ಕೋರಿ ಬೆಂಬಲಿಸುತ್ತಿದ್ದಾರೆ. ಇಲ್ಲಿಯವರೆಗೂ ಈ ಯಾತ್ರೆ ಯಶಸ್ವಿಯಾಗಿದ್ದು, ರಾಜ್ಯದಲ್ಲೂ ಯಶಸ್ಸು ಸಾಧಿಸಲು ಎಲ್ಲಾ ತಯಾರಿ ಮಾಡಲಾಗಿದೆ ಎಂದು ತಿಳಿಸಿದರು. 

ಕರ್ನಾಟಕ ಪ್ರದೇಶ ಕಾಂಗ್ರೆಸ್ ಮತ್ತು ರಾಜ್ಯ ನಾಯಕರು ಭಾರತ ಐಕ್ಯತಾ ಯಾತ್ರೆಗೆ ಮಾಡಿರುವ ಎಲ್ಲಾ ಸಿದ್ಧತೆಗಳು ಎಐಸಿಸಿಗೆ ತೃಪ್ತಿ ತಂದಿದೆ.  ರಣದೀಪ್ ಸಿಂಗ್ ಸೂರ್ಜೇವಾಲ ನಿತ್ಯ ತಯಾರಿ ಕುರಿತು ಪರಿಶೀಲನೆ ನಡೆಸುತ್ತಿದ್ದು, ರಾಜ್ಯದಲ್ಲಿನ ಯಾತ್ರೆ ಅತ್ಯಂತ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ಇದೆ. ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಲ್ಲಿ ಈ ಯಾತ್ರೆ ಆರಂಭವಾಗಿದ್ದು, ತಮಿಳುನಾಡು ಹಾಗೂ ಕೇರಳ ರಾಜ್ಯದಲ್ಲಿ ಎಲ್ಲಾ ವರ್ಗದಿಂದ ಅಭೂತಪೂರ್ವ ಪ್ರತಿಕ್ರಿಯೆ ಲಭ್ಯವಾಗಿದೆ. ರಾಹುಲ್ ಗಾಂಧಿ ಅವರು ಮುಂದಾಳತ್ವ ವಹಿಸಿ ನಿತ್ಯ 25 ಕಿ.ಮೀ ಸರಾಸರಿಯಲ್ಲಿ 150 ದಿನ ಪಾದಯಾತ್ರೆ ಮಾಡುತ್ತಿದ್ದಾರೆ. ಯಾವ ನಾಯಕ ಇಂತಹ ಪಾದಯಾತ್ರೆ ಮಾಡಲು ಸಾಧ್ಯ? ಎಂದರು.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ಬಾಲಕಿ ಚಪ್ಪಲಿ ಧರಿಸಲು ನೆರವಾದ ರಾಹುಲ್ ಗಾಂಧಿ- ವಿಡಿಯೋ
 
ಯಾತ್ರೆ ಕುರಿತು ಬಿಜೆಪಿ ನಾಯಕರ ಟೀಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದೇ ಈ ಯಾತ್ರೆಯ ಯಶಸ್ಸಿಗೆ ಸಾಕ್ಷಿ. ಅವರು ಕ್ಷುಲ್ಲಕ ಕಾರಣಕ್ಕೆ ಟೀಕೆ ಮಾಡುತ್ತಿರುವುದು ಅವರ ಆತಂಕಕ್ಕೆ ಸಾಕ್ಷಿ. ರಾಹುಲ್ ಅವರು ಯಾವ ಟಿ ಶರ್ಟ್, ಚಡ್ಡಿ ಹಾಕಿದರೆ ಬಿಜೆಪಿ ಅವರಿಗೆ ಸಮಸ್ಯೆ ಏನು? ಅವರು ಈ ಯಾತ್ರೆಗೆ ಅಡ್ಡಿ ಪಡಿಸಲು ಪ್ರಯತ್ನಿಸುತ್ತಿದ್ದು, ಈ ಯಾತ್ರೆ ಜನರ ಮನಸ್ಸಿನಲ್ಲಿ ಯಶಸ್ವಿಯಾಗಿ ಮುಟ್ಟಿದೆ. ದಿನೇ ದಿನೆ ಯಾತ್ರೆಯಲ್ಲಿ ಜನರ ಭಾಗವಹಿಸುವಿಕೆ ಹೆಚ್ಚಾಗುತ್ತಿದೆ ಎಂದರು.

ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಬಗ್ಗೆ ಕೇಳಿದಾಗ, ಅಧ್ಯಕ್ಷ ಚುನಾವಣೆ ಅಧಿಸೂಚನೆ ಹೊರಡಿಸಲಾಗಿದೆ. 30ರ ವರೆಗೂ ನಾಮಪತ್ರ ಸಲ್ಲಿಕೆ ಮಾಡಬಹುದು. ಕಾಂಗ್ರೆಸ್ ಪಕ್ಷ ಮಾತ್ರ ತನ್ನ ಅಧ್ಯಕ್ಷರನ್ನು ಪ್ರಜಾಪ್ರಭುತ್ವ ಆಧಾರದ ಮೇಲೆ ಆರಿಸಲಿದೆ. ಎಲ್ಲಾ ಮಾಧ್ಯಮಗಳು ಈ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತಿವೆ. ಮಾಧ್ಯಮಗಳು ಬೇರೆ ಪಕ್ಷಗಳ ಚುನಾವಣೆ ಬಗ್ಗೆ ಚರ್ಚೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ನಮಗೆ ಹೆಮ್ಮೆ ಇದೆ. ಅ. 19ರಂದು ನೂತನ ಅಧ್ಯಕ್ಷರ ಆಯ್ಕೆ ಆಗಲಿದ್ದು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ನೂತನ ಅಧ್ಯಕ್ಷರ ನಾಯಕತ್ವದಲ್ಲಿ ಸಾಗಲಿದ್ದಾರೆ ಎಂದು ತಿಳಿಸಿದರು.

ಪೇ ಸಿಎಂ ಅಭಿಯಾನದ ಕುರಿತು ಮಾತನಾಡಿ ಈ ಅಭಿಯಾನ ಆರಂಭಿಸಿರುವುದು ಕಾಂಗ್ರೆಸ್ ಪಕ್ಷ ಅಲ್ಲ. ಇದು ಜನರ ಸಮಸ್ಯೆಗೆ ಧ್ವನಿಯಾಗಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಈ ಸರ್ಕಾರ ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರ್ಕಾರ ಎಂದು ಜನ ಹೇಳುತ್ತಿದ್ದಾರೆ. ಇದು ಬಿಜೆಪಿ ಚಿಂತೆಗೀಡು ಮಾಡಿದೆ. ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಹಲವರನ್ನು ದೇಶಾದ್ಯಂತ ಬಂಧಿಸಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com