ಎಲ್ಲವನ್ನೂ ಆಲಿಸಿದ ರಾಹುಲ್ ಗಾಂಧಿ, ಆದರೆ ಸಿದ್ದರಾಮಯ್ಯ ಬಣದ ಬೇಡಿಕೆಗಳಿಗೆ ಮೌನ!
ಮೊನ್ನೆ ನಡೆದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜನ್ಮದಿನಾಚರಣೆ ಕಾರ್ಯಕ್ರಮ, ಅವರ ಬೆಂಬಲಿಗರ ನಿರೀಕ್ಷೆಗಳನ್ನು ಉತ್ತೇಜಿಸಿರುವುದಷ್ಟೇ ಅಲ್ಲದೇ 2023 ರ ವಿಧಾನಸಭಾ ಚುನಾವಣೆಗೆ ಸಿದ್ಧತೆಗೂ ಚಾಲನೆ ನೀಡಿದೆ.
Published: 05th August 2022 03:08 PM | Last Updated: 05th August 2022 03:57 PM | A+A A-

ಸಿದ್ದರಾಮಯ್ಯ, ರಾಹುಲ್ ಮತ್ತು ಡಿಕೆ ಶಿವಕುಮಾರ್
ಬೆಂಗಳೂರು: ಮೊನ್ನೆ ನಡೆದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜನ್ಮದಿನಾಚರಣೆ ಕಾರ್ಯಕ್ರಮ, ಅವರ ಬೆಂಬಲಿಗರ ನಿರೀಕ್ಷೆಗಳನ್ನು ಉತ್ತೇಜಿಸಿರುವುದಷ್ಟೇ ಅಲ್ಲದೇ 2023 ರ ವಿಧಾನಸಭಾ ಚುನಾವಣೆಗೆ ಸಿದ್ಧತೆಗೂ ಚಾಲನೆ ನೀಡಿದೆ.
2023 ರಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೇರಲಿದೆ ಎಂದು ನಂಬಿರುವ ಸಿದ್ದರಾಮಯ್ಯ ಬೆಂಬಲಿಗರು, ತಮ್ಮ ನಾಯಕನಿಗೆ ಆಡಳಿತ ನಡೆಸಲು ಮತ್ತೊಂದು ಅವಕಾಶ ನೀಡಬೇಕು ಎಂದು ರಾಹುಲ್ ಗಾಂಧಿಗೆ ಮನವರಿಕೆ ಮಾಡಲು ಸಾಕಷ್ಟು ಪ್ರಯತ್ನಿಸಿ, ತಮ್ಮ ನಾಯಕ ಬಿಜೆಪಿ ಸರ್ಕಾರದ ನೀತಿಗಳನ್ನು ಬದಲಾವಣೆ ಮಾಡಬಲ್ಲರು ಎಂದು ಹೇಳಿದ್ದಾರೆ.
ಈ ನಡುವೆ ಆರ್ ವಿ ದೇಶಪಾಂಡೆ ಅವರೂ ರಾಹುಲ್ ಗಾಂಧಿ ಜೊತೆಗೆ ಪ್ರತ್ಯೇಕ ಮಾತುಕತೆ ನಡೆಸಿದ್ದು ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿ ಎಲ್ಲರ ಅಭಿಪ್ರಾಯ, ಸಲಹೆಗಳನ್ನೂ ಆಲಿಸಿದ್ದಾರೆ. ಆದರೆ ಯಾರಿಗೂ ಯಾವ ಭರವಸೆಯನ್ನೂ ನೀಡದೇ ಮೌನವಾಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ: 'ಅಣತಿಯ ಅಪ್ಪುಗೆ, ತೋರಿಕೆಯ ಒಗ್ಗಟ್ಟು! ಆಹಾ ಎಂತಹ ನಾಟಕವಯ್ಯಾ': ಬಿಜೆಪಿ ಲೇವಡಿ
ಈ ನಡುವೆ ಸಿದ್ದರಾಮಯ್ಯ ಅವರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರ ಒಗ್ಗಟ್ಟಿನ ಪ್ರದರ್ಶನವನ್ನು ಬಿಜೆಪಿ, ಜೆಡಿಎಸ್ ಗಂಭೀರವಾಗಿ ಪರಿಗಣಿಸಿದ್ದು, ಇದಕ್ಕೆ ತಕ್ಕಂತೆ ಪ್ರತಿತಂತ್ರ ಹೆಣೆಯಲು ಸಿದ್ಧತೆ ನಡೆಸಿವೆ.
ಕಾಂಗ್ರೆಸ್ ಕಾರ್ಯಕ್ರಮದ ಯಶಸ್ಸಿನ ಬೆನ್ನಲ್ಲೇ ನಮ್ಮ ಜನತಾ ಜಲಧಾರೆ ಕಾರ್ಯಕ್ರಮವೂ ಯಶಸ್ವಿಯಾಗಿತ್ತು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆವೈಎಂ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿಯ ಜನೋತ್ಸವ ಕಾರ್ಯಕ್ರಮವನ್ನು ರದ್ದುಪಡಿಸಿದ ಸಂದರ್ಭದಲ್ಲೇ ಕಾಂಗ್ರೆಸ್ ಕಾರ್ಯಕ್ರಮ ನಡೆಸಿ ಯಶಸ್ಸು ಕಂಡಿರುವುದು ಮಹತ್ವ ಪಡೆದುಕೊಂಡಿದೆ.
ಕಾಂಗ್ರೆಸ್ ನಾಯಕರು 2012 ರ ಇತಿಹಾಸ ಪುನಾರಾವರ್ತನೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಅಂದು ಎಐಸಿಸಿ ಅಧ್ಯಕ್ಷ್ಯೆ ಸೋನಿಯಾ ಗಾಂಧಿ ಸಿದ್ದಗಂಗಾ ಮಠದಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿತ್ತು. ಆದರೆ ಆಗ ಕಾಂಗ್ರೆಸ್ ನಲ್ಲಿ ಒಗ್ಗಟ್ಟು ಇತ್ತು. ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ದೊಡ್ಡ ನಾಯಕರು ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದು ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆ ಸಮಯದಲ್ಲಿ ಆಂತರಿಕ ಕಲಹ ಉಂಟಾಗುವ ಸಾಧ್ಯತೆಗಳಿವೆ.