'ಮೊಟ್ಟೆ ಹೊಡೆದವ ನಮ್ಮವನಲ್ಲ': ಬಿಜೆಪಿ- ಕಾಂಗ್ರೆಸ್ ಕೆಸರೆರಚಾಟ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಕೋಳಿ ಮೊಟ್ಟೆ ಹೊಡೆದವರು ನಮ್ಮ ಪಕ್ಷದ ಕಾರ್ಯಕರ್ತರಲ್ಲ ಎಂದು ಬಿಜೆಪಿ ಹಾಗೂ ಕಾಂಗ್ರೆಸ್‌ ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸುತ್ತಿದ್ದು, ಇದು ಉಭಯ ಪಕ್ಷಗಳ ನಡುವಿನ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ
ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ

ಕೊಡಗು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಕೋಳಿ ಮೊಟ್ಟೆ ಹೊಡೆದವರು ನಮ್ಮ ಪಕ್ಷದ ಕಾರ್ಯಕರ್ತರಲ್ಲ ಎಂದು ಬಿಜೆಪಿ ಹಾಗೂ ಕಾಂಗ್ರೆಸ್‌ ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸುತ್ತಿದ್ದು, ಇದು ಉಭಯ ಪಕ್ಷಗಳ ನಡುವಿನ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.

ಇದೇ ವಿಚಾರವಾಗಿ ಬಿಜೆಪಿ ವಿರುದ್ಧ ಕಿಡಿಕಾರಿದ್ದ ಕಾಂಗ್ರೆಸ್ ಮೊಟ್ಟೆ ಹೊಡೆದಾತ ಬಿಜೆಪಿ ಕಾರ್ಯಕರ್ತ. ಆತ ಶಾಸಕ ಅಪ್ಪಚ್ಚು ರಂಜನ್ ಜೊತೆ ಫೋಟೋ ತೆಗೆಸಿಕೊಂಡಿದ್ದಾನೆ. ಆ ಫೋಟೋ ಕೂಡ ವೈರಲ್ ಆಗಿದೆ. ಹೀಗಾಗಿ ಇದು ಬಿಜೆಪಿ ಕೃತ್ಯ ಎಂದು ಟೀಕಿಸಿತ್ತು.

ಈ ಕುರಿತು ಮಾತನಾಡಿರುವ ಯುವ ಕಾಂಗ್ರೆಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ಮಿಥುನ್‌ಗೌಡ ಅವರು, ‘ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಕೋಳಿಮೊಟ್ಟೆ ಹೊಡೆದವರು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರಿಗೆ ಆಪ್ತರಾಗಿದ್ದಾರೆ. ಮೊಟ್ಟೆ ಹೊಡೆದಿದ್ದಾರೆ ಎನ್ನಲಾದ ಸಂಪತ್ ಎಂಬುವವರು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರ ಜತೆ ಕೇಸರಿ ಶಾಲು ಹಾಕಿಕೊಂಡು ಫೋಟೊ ತೆಗೆಸಿಕೊಂಡಿದ್ದಾರೆ. ಆತ ಕಾಂಗ್ರೆಸ್ ಕಾರ್ಯಕರ್ತ ಅಲ್ಲ’ ಎಂದು ಟೀಕಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಅಪ್ಪಚ್ಚು ರಂಜನ್, 'ಮೊಟ್ಟೆ ಹೊಡೆದಿದ್ದಾರೆ ಎನ್ನಲಾದ ಸಂಪತ್ ಎಂಬ ವ್ಯಕ್ತಿಯು ನನ್ನೊಡನೆ ಫೋಟೊ ತೆಗೆಸಿಕೊಂಡಿದ್ದು, ಆತ ಬಿಜೆಪಿ ಕಾರ್ಯಕರ್ತ ಎಂದು ಕಾಂಗ್ರೆಸ್ ಹೇಳಿದೆ. ಆದರೆ, ಇದು ಸತ್ಯಕ್ಕೆ ದೂರ. ನನ್ನೊಡನೆ ಅನೇಕ ಕಾಂಗ್ರೆಸ್‌ ಕಾರ್ಯಕರ್ತರೂ ಚಿತ್ರ ತೆಗೆಸಿಕೊಂಡಿದ್ದಾರೆ. ಹಾಗೆಂದು, ಅವರೆಲ್ಲ ನಮ್ಮ ಪಕ್ಷದ ಕಾರ್ಯಕರ್ತರು ಆಗಲು ಸಾಧ್ಯವಿಲ್ಲ. ಆತ ಕಾಂಗ್ರೆಸ್‌ ಬಾವುಟ, ಶಾಲು ಹಾಕಿಕೊಂಡು ನಿಂತಿರುವ ಚಿತ್ರವೂ ನನ್ನ ಬಳಿ ಇದೆ. ನನ್ನ ಪಕ್ಷದ ಸದಸ್ಯತ್ವವನ್ನೂ ಆತ ಪಡೆದಿಲ್ಲ. ಒಂದು ವೇಳೆ ಸದಸ್ಯತ್ವ ಪಡೆದಿದ್ದರೆ ಕೂಡಲೇ ಆತನನ್ನು ಪಕ್ಷದಿಂದ ಉಚ್ಛಾಟಿಸಲಾಗುವುದು ಎಂದು ಹೇಳಿದ್ದಾರೆ.

ನಾನು ಕಾಂಗ್ರೆಸ್ ಕಾರ್ಯಕರ್ತ, ಅಪ್ಪಚ್ಚು ರಂಜನ್ ಜೊತೆ ಫೋಟೋ ನಾನೇ ತೆಗೆಸಿಕೊಂಡಿದ್ದು: ಆರೋಪಿ ಸಂಪತ್
ಇನ್ನು ಎಲ್ಲ ವಿವಾದಗಳ ನಡುವೆಯೇ ಸ್ವತಃ ಮೊಟ್ಟೆ ಎಸೆದ ಆರೋಪಿ ಸಂಪತ್ ಎಂಬಾತ ಹೇಳಿಕೆ ನೀಡಿದ್ದು, 'ನಾನು ಕಾಂಗ್ರೆಸ್ ಕಾರ್ಯಕರ್ತನೆ, ಕಾಂಗ್ರೆಸ್​ನಲ್ಲಿ ಹಿಂದೂಗಳಿಲ್ವಾ? ವಿಪಕ್ಷ ನಾಯಕ ಸಿದ್ದರಾಮಯ್ಯ ಹಿಂದೂಗಳೂ ದನದ ಮಾಂಸ ತಿಂತಾರೆ ಅಂದಿದ್ದು ತಪ್ಪಲ್ವಾ? ಹಿಂದೂ ವಿರೋಧಿ ಹೇಳಿಕೆಯಿಂದ ನೋವಾಗಿತ್ತು. ಹೀಗಾಗಿ ಮೊಟ್ಟೆ ಹೊಡೆದೆ ಎಂದು ಹೇಳಿಕೆ ನೀಡಿದ್ದಾನೆ.

'ನಾನು ಸೋಮವಾರ ಪೇಟೆ ನಿವಾಸಿ, ನನ್ನ ವೈಯುಕ್ತಿಕ ಕೆಲಸದ ನಿಮಿತ್ತ ಹೋಗುತ್ತಿದ್ದೆ. ಆಗ ಸಿದ್ದರಾಮಯ್ಯ ಆಗಮನದ ವಿಚಾರ ತಿಳಿಯಿತು. ಈ ಹಿಂದೆ ಸಿದ್ದರಾಮಯ್ಯ ಅವರು ಕೊಡಗಿನವರ ವಿರುದ್ಧ ಮತ್ತು ಹಿಂದೂಗಳ ವಿರುದ್ಧ ಹೇಳಿಕೆ ನೀಡಿದ್ದರು. ಧನದ ಮಾಂಸ ತಿನ್ನುತ್ತಾರೆ ಎಂದು ಹೇಳಿದ್ದರು. ಇದು ನನಗೆ ನೋವುಂಟು ಮಾಡಿತ್ತು. ನಾನು ಕಾಂಗ್ರೆಸ್ ಕಾರ್ಯಕರ್ತನೆ, ಕಾಂಗ್ರೆಸ್​ನಲ್ಲಿ ಹಿಂದೂಗಳಿಲ್ವಾ? ವಿಪಕ್ಷ ನಾಯಕ ಸಿದ್ದರಾಮಯ್ಯ ಹಿಂದೂಗಳೂ ದನದ ಮಾಂಸ ತಿಂತಾರೆ ಅಂದಿದ್ದು ತಪ್ಪಲ್ವಾ? ಹಿಂದೂ ವಿರೋಧಿ ಹೇಳಿಕೆಯಿಂದ ನೋವಾಗಿತ್ತು. ಹೀಗಾಗಿ ಮೊಟ್ಟೆ ಹೊಡೆದೆ ಎಂದಿದ್ದಾರೆ.

ಅಲ್ಲದೆ ಶಾಸಕ ಅಪ್ಪಚ್ಚು ರಂಜನ್ ಜೊತೆಗಿನ ಫೋಟೋ ಕುರಿತು ಹೇಳಿಕೆ ನೀಡಿರುವ ಆತ ಆ ಫೋಟೋ ನಾನೇ ತೆಗೆಸಿಕೊಂಡಿದ್ದು. ಕಾರ್ಯಕ್ರಮ ನಿಮಿತ್ತ ಅಪ್ಪಚ್ಚು ರಂಜನ್ ಆಗಮಿಸಿದ್ದ ವೇಳೆ ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದೆ. ನಾನು ಕಾಂಗ್ರೆಸ್ ಕಾರ್ಯಕರ್ತ. ಈ ಹಿಂದೆ ಜೆಡಿಎಸ್ ನಲ್ಲಿದ್ದೆ. ಇದೀಗ ಕಾಂಗ್ರೆಸ್ ನ ಸಕ್ರಿಯ ಕಾರ್ಯಕರ್ತನಾಗಿದ್ದೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com