ಗುಜರಾತ್ ಚುನಾವಣೆ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರುವುದಿಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ
ಗುಜರಾತ್ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಕರ್ನಾಟಕದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುರುವಾರ ಹೇಳಿದರು.
Published: 08th December 2022 01:16 PM | Last Updated: 08th December 2022 01:16 PM | A+A A-

ಸಿದ್ದರಾಮಯ್ಯ
ಮೈಸೂರು: ಗುಜರಾತ್ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಕರ್ನಾಟಕದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುರುವಾರ ಹೇಳಿದರು.
ಗುಜರಾತ್ ರಾಜ್ಯ ಚುನಾವಣಾ ಫಲಿತಾಂಶ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿನ ಚುನಾವಣಾ ಫಲಿತಾಂಶವು ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.
ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ನಿರೀಕ್ಷೆ ಇತ್ತು. ಆಮ್ ಆದ್ಮಿ ಪಕ್ಷದವರು ಸ್ಪರ್ಧೆ ಮಾಡಿ ಕಾಂಗ್ರೆಸ್ ಮತಗಳನ್ನು ತಿಂದರು. ಆ ಪಕ್ಷದವರು ಪಡೆದ ಮತಗಳೆಲ್ಲ ಕಾಂಗ್ರೆಸ್‌ನದ್ದೇ' ಎಂದು ತಿಳಿಸಿದರು.
ಇದನ್ನೂ ಓದಿ: ಸಂತ ಶಿಶುನಾಳ ಷರೀಫರ ಪರಂಪರೆ ನಮ್ಮದು: 'ಸಿದ್ರಾಮುಲ್ಲಾಖಾನ್ ಎಂದು ಮುಸ್ಲಿಮ್ ಹೆಸರು ಸೇರಿಸಿರುವ ಬಗ್ಗೆ ನನಗೇನು ಬೇಸರವಿಲ್ಲ!
ಒಂದು ರಾಜ್ಯದ ಚುನಾವಣಾ ಫಲಿತಾಂಶದ ಗಾಳಿ ಮತ್ತೊಂದು ರಾಜ್ಯಕ್ಕೆ ಬೀಸುವುದಿಲ್ಲ. ಇಲ್ಲಿನ ಬಿಜೆಪಿ ಸರ್ಕಾರ ಅತಿ ಭ್ರಷ್ಟ ಸರ್ಕಾರ. ಕಾಂಗ್ರೆಸ್ ಸಂಘಟನೆ ಇಲ್ಲಿ ಶಕ್ತಿಯುತವಾಗಿದೆ. ಗುಜರಾತ್‌ಗೆ ಹೋಲಿಸಬಾರದು. ಕರ್ನಾಟಕದಲ್ಲಿ ಸೋಲುತ್ತೇವೆ ಎಂಬುದು ಬಿಜೆಪಿಯವರಿಗೂ ಗೊತ್ತಿದೆ' ಎಂದರು.
'ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಅದೇ ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್ ಆಗಿದೆ. 'ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷ ಬಹಳ ಹಣ ಖರ್ಚು ಮಾಡಿತು. ಬಿಜೆಪಿಯವರೇ ಆ ಪಕ್ಷಕ್ಕೆ ಹಣ ನೀಡಿದ್ದಾರೆ. ಕಾಂಗ್ರೆಸ್ ಮತ ವಿಭಜನೆಗಾಗಿ ಆಮ್ ಆದ್ಮಿ ಪಕ್ಷಕ್ಕೆ ಬಿಜೆಪಿ ಹಣ ನೀಡಿದೆ' ಎಂದು ಆರೋಪಿಸಿದರು.
ಇದನ್ನೂ ಓದಿ: ‘ಸಿದ್ದು ಸಿಎಂ’ ಪ್ರಚಾರ ನಿಲ್ಲಿಸಿ, ಕಾಂಗ್ರೆಸ್ ಗೆಲುವಿನತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮುನಿಯಪ್ಪ
'ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಇಲ್ಲಿ ಬಿಜೆಪಿ ತಂತ್ರಗಾರಿಕೆ ಮಾಡಬಹುದು. ಆದರೆ, ಅದು ನಡೆಯುವುದಿಲ್ಲ. ಕರ್ನಾಟಕದ ಆಡಳಿತ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. 'ಅಷ್ಟು ದುಡ್ಡು ಖರ್ಚು ಮಾಡಿದರೂ ಆಮ್ ಆದ್ಮಿ ಪಕ್ಷ 6 ಸ್ಥಾನ ಪಡೆದಿದೆ. ಅವರಿಂದ ಮತ ವಿಭಜನೆಯಾಗಿದೆ' ಎಂದು ಆರೋಪಿಸಿದರು.
'ಕರ್ನಾಟಕದಲ್ಲಿ ಕಾಂಗ್ರೆಸ್ ಸುಮ್ಮನೆ ಇದ್ದರೂ ಗೆಲ್ಲುತ್ತದೆ. ನಾವು ಯಾವುದೇ ತಂತ್ರಗಾರಿಕೆ ಮಾಡುವುದೇ ಬೇಡ. ಮೋದಿ ಹವಾ ಎಲ್ಲೂ ಇಲ್ಲ. ಹವಾ ಇದ್ದಿದ್ದರೆ ದೆಹಲಿಯಲ್ಲೇ ಸೋಲುತ್ತಿದ್ದರೇಕೆ. ಎಲ್ಲಿ ಹೋಯಿತು ಮೋದಿ ಹವಾ?' ಎಂದು ವ್ಯಂಗ್ಯವಾಡಿದರು.