‘ಉಪನಗರ ರೈಲು ಯೋಜನೆ ರೂಪಿಸಿದ್ದು ನಾನು; ಮೋದಿಯದ್ದು ಪುಕ್ಕಟೆ ಪ್ರಚಾರ’

: ಬೇರೊಬ್ಬರು ಮಾಡಿದ ಕೆಲಸವನ್ನು ತಮ್ಮದೆಂದು ಬಿಂಬಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಟೀಕಾಪ್ರಹಾರ ಮಾಡಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ಬೆಂಗಳೂರು: ಬೇರೊಬ್ಬರು ಮಾಡಿದ ಕೆಲಸವನ್ನು ತಮ್ಮದೆಂದು ಬಿಂಬಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಟೀಕಾಪ್ರಹಾರ ಮಾಡಿದ್ದಾರೆ.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮೋದಿ ಅವರು ಬೆಂಗಳೂರಿನಲ್ಲಿ ಚಾಲನೆ ಮಾಡಿದ ಯೋಜನೆಗಳು ಶುರುವಾಗಿದ್ದು ಬಿಜೆಪಿ ಸರಕಾರದಿಂದ ಅಲ್ಲ. ಆದರೆ, ನಾನೇ ಆರಂಭ ಮಾಡುತ್ತಿದ್ದೇನೆ ಎಂದು ಅವರು ಭಾಷಣ ಮಾಡಿದ್ದಾರೆ. ಇದು ನರೇಂದ್ರ ಮೋದಿ ಅವರ ಚಾಳಿ ಎಂದು ಹರಿಹಾಯ್ದರು.

ರಾಜ್ಯಕ್ಕೆ ಎರಡು ದಿನ ಪ್ರಧಾನ ಮಂತ್ರಿಗಳು ಬಂದಿದ್ದರು. ಅವರ ಆಗಮನದ ಹಿನ್ನೆಲೆಯಲ್ಲಿ ಪ್ರೊಗ್ರೆಸ್ ರಿಪೋರ್ಟ್ ಅನ್ನು ಕೊಡಲಾಗಿದೆ. 33 ಸಾವಿರ ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿದರು ಎಂದು ಹೇಳುತ್ತಿದ್ದಾರೆ. ಮೋದಿ ಅವರು ತಾವೇ ರೂಪಿಸಿದ ಹೊಸ ಯೋಜನೆಗಳಿಗೆ ಚಾಲನೆ ನೀಡಿದರೋ ಅಥವಾ ಹಿಂದಿನ ಸರಕಾರಗಳು ರೂಪಿಸಿದ್ದ ಯೋಜನೆಗಳಿಗೆ ಚಾಲನೆ ನೀಡಿದರೋ ಎಂಬುದನ್ನು ಬಿಜೆಪಿ ನಾಯಕರು ಜನರಿಗೆ ತಿಳಿಸಬೇಕು ಎಂದು ಅವರು ಹೇಳಿದರು.

ಬೆಂಗಳೂರು ತಮ್ಮಿಂದಲೇ ಬೆಳಕು ಕಾಣುತ್ತಿದೆ ಇದೆ ಅನ್ನುವ ಹಾಗಿತ್ತು ಮೋದಿ ಅವರ ಭಾಷಣ. ಉಪನಗರ ರೈಲು ಬಗ್ಗೆ ಪ್ರಧಾನಿಗಳು ಮಾತನಾಡಿದ್ದಾರೆ. 2018ರಲ್ಲಿ ಅಧಿಕಾರಕ್ಕೆ ಬರುವವರೆಗೆ ಈ ಯೋಜನೆ ಧೂಳು ಕುಡಿಯುತ್ತಿತ್ತು. ನಾನು 14 ತಿಂಗಳು ಸಿಎಂ ಆಗಿದ್ದಾಗ ರೇಲ್ವೆ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೆ. ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರೂ ಸಹಕಾರ ನೀಡಿದ್ದರು.

23000 ಕೋಟಿ ರೂಪಾಯಿ ಮೊತ್ತದ ಯೋಜನೆಯನ್ನು ಸಿದ್ಧಪಡಿಸಿ, 2018ರಲ್ಲಿ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ದೆಹಲಿಗೆ ಹೋಗಿದ್ದೆ. ತಕ್ಷಣ ಅಡಿಗಲ್ಲು ಹಾಕಿ ಎಂದು ನಾನು ಅಂದಿನ ರೇಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಮಾಡಿದೆ. ಆ ನಂತರ ಕೃಷ್ಣಾ ಕಚೇರಿಯಲ್ಲಿ ಅಂದಿನ ರೇಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನೇ ಆಹ್ವಾನಿಸಿ ಚರ್ಚೆ ಮಾಡಿದ್ದೆ. ಮಾಧ್ಯಮಗಳಲ್ಲೂ ಈ ವಿಷಯ ವರದಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ಆಗ, ಲೋಕಸಭೆ ಚುನಾವಣೆಗೂ ಮುನ್ನ ಉಪನಗರ ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡುತ್ತೇನೆ ಅಂದಿದ್ದೆ ನಾನು. 2019ರಲ್ಲಿಯೇ ಈ ಬಗ್ಗೆ ಖುದ್ದು ಮಾಧ್ಯಮಗಳ ಮುಂದೆ ಹೇಳಿದ್ದೆ. ಆದರೆ ಬಿಜೆಪಿಯವರು ಬೇಕೆಂದೇ ಅಡಿಗಲ್ಲು ಹಾಕಲು ಒಪ್ಪಿಗೆ ನೀಡಲಿಲ್ಲ. ಅವರ ಬದಲು ಕಾಂಗ್ರೆಸ್ ಜತೆ ಸರಕಾರ ಮಾಡಿದೆ ಎನ್ನುವ ಸಿಟ್ಟು ಅವರಿಗಿತ್ತು. ಆ ನಂತರ ಆಪರೇಶನ್ ಕಮಲದ ಮೂಲಕ ನನ್ನ ನೇತೃತ್ವದ ಮೈತ್ರಿ ಸರಕಾರವನ್ನು ತೆಗೆದು ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲಾಯಿತು. ಆಮೇಲೆ ಮೂರು ವರ್ಷ ಉಪನಗರ ರೈಲು ಯೋಜನೆಯನ್ನು ಬಾಕಿ ಇಟ್ಟರು ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು.

ಆಗಲೇ ಕಾಲಮಿತಿಯಲ್ಲಿ ಉಪನಗರ ರೈಲು ಯೋಜನೆ ಮುಗಿಸಲು ನಾನು ಸಂಪುಟದ ಒಪ್ಪಿಗೆ ತೆಗೆದುಕೊಂಡಿದ್ದೆ. ಅದಕ್ಕೆ ಕೇಂದ್ರ ಸರಕಾರ 19 ಷರತ್ತುಗಳನ್ನು ವಿಧಿಸಿತ್ತು. ಆ ಷರತ್ತುಗಳನ್ನು ನನ್ನ ಸರ್ಕಾರ ಪೂರೈಸಿತ್ತು. ಆದರೆ, ಈಗ ಚುನಾವಣೆ ಬರುತ್ತಿದೆ ಎನ್ನುವ ಕಾರಣಕ್ಕೆ ಬಂದು ಯೋಜನೆಗೆ ಚಾಲನೆ ಕೊಟ್ಟಿದ್ದು ಕೇವಲ ಚುನಾವಣೆ ಗಿಮಿಕ್ ಅಷ್ಟೇ ಎಂದು ಅವರು ಕಟುವಾಗಿ ಟೀಕಿಸಿದರು.

ನಲವತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಕೇವಲ ನಲವತ್ತು ತಿಂಗಳಲ್ಲಿ ಕಾರ್ಯಗತ ಮಾಡುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ. ಈಗ ಇದು ಅರು ವರ್ಷದ ಕಾರ್ಯಕ್ರಮ ಆಗಿದೆ. ನಾನು ಸಿಎಂ ಆದಾಗ ಎಸ್ ಟಿ ಆರ್ ಆರ್ ಯೋಜನೆ ಕೈಗೊಂಡೆ. ಹೀಗೆ ಅನೇಕ ಯೋಜನೆಗಳಿಗೆ ಚಾಲನೆ ನೀಡಿದೆ. ನಾನು ಚಾಲನೆ ಕೊಟ್ಟ ಹಲವಾರು ಯೋಜನೆಗಳಿಗೆ ಬಿಜೆಪಿಯವರು ಇವತ್ತು ಪ್ರಚಾರ ಮಾಡಿಕೊಂಡಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ರಾಜ್ಯ ಬಿಜೆಪಿ ನಾಯಕರಿಗೆ ಮುಖ ಇಲ್ಲ

ಪ್ರಧಾನಮಂತ್ರಿಗಳು ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾದಾಗ ಬರಲಿಲ್ಲ, ಯಾವುದೇ ಸಂಕಷ್ಟದ ಸಮಯದಲ್ಲೂ ಮೋದಿ ಬರಲಿಲ್ಲ. ಪ್ರತಿಯೊಂದು ವಿಷಯದಲ್ಲೂ ರಾಜ್ಯದ ಬಗ್ಗೆ ಮೋದಿ ಅವರು ಮಲತಾಯಿ ಧೋರಣೆ ನೀತಿ ಅನುಸರಿಸಿದರು. ಹೀಗಾಗಿ ರಾಜ್ಯ ಬಿಜೆಪಿ ನಾಯಕರಿಗೆ ಜನರ ಮುಂದೆ ಹೋಗಲು ಮುಖ ಇಲ್ಲ. ಹಾಗಾಗಿ ಮೋದಿಯವರನ್ನು ಮುಂದೆ ಇಟ್ಟುಕೊಂಡ ಹೋಗುತ್ತಿದ್ದಾರೆ ಎಂದು ಎಚ್ ಡಿ ಕುಮಾರಸ್ವಾಮಿ ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com