ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಲು ಈ ವಾರ ದೆಹಲಿಗೆ ತೆರಳುವ ನಿರೀಕ್ಷೆ: ಸಿಎಂ ಬೊಮ್ಮಾಯಿ

ಸಚಿವ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸಲು ಈ ವಾರ ದೆಹಲಿಗೆ ಹೋಗುತ್ತೇನೆ. ವರಿಷ್ಠರ ಸೂಚನೆ ಪ್ರಕಾರ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸಲು ಈ ವಾರ ದೆಹಲಿಗೆ ಹೋಗುತ್ತೇನೆ. ವರಿಷ್ಠರ ಸೂಚನೆ ಪ್ರಕಾರ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೀಡಿದ್ದ ಹೇಳಿಕೆ ಬಗ್ಗೆ ಕೇಳಿದಾಗ, ಜನಸಂಕಲ್ಪ ಯಾತ್ರೆಯ ಮಧ್ಯೆದಲ್ಲಿ ವರಿಷ್ಠರ ಭೇಟಿಗೆ ಸಮಯ ಕೇಳಿದ್ದೇನೆ. ಅವರು ಸಮಯ ಕೊಟ್ಟ ತಕ್ಷಣವೇ ಈ ವಾರ ಹೋಗುವ ಸಾಧ್ಯತೆಗಳಿವೆ ಎಂದರು.

ಬೆಂಗಳೂರಿನ ರಾಜಾಜಿನಗರದಲ್ಲಿ ನಿನ್ನೆ ರಸ್ತೆಗುಂಡಿಗೆ ಮಹಿಳೆ ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತರ ಜೊತೆ ಮಾತನಾಡಿದ್ದೇನೆ, ಅಲ್ಲಿ ಏನೇನಾಗಿದೆ, ಏನು ಸರಿಪಡಿಸಬೇಕಿದೆ ಎಂದು ನೋಡುವಂತೆ ಹೇಳಿದ್ದೇನೆ. ಇನ್ನು ಪೊಲೀಸರಿಗೆ ಕೂಡ ಪರಿಶೀಲಿಸುವಂತೆ ಹೇಳಿದ್ದೇನೆ. ಮಹಿಳೆ ಸಾವಿನ ಬಗ್ಗೆ ವರದಿ ನೀಡುವಂತೆ ಕೂಡ ಪೊಲೀಸ್ ಆಯುಕ್ತರಿಗೆ ಹೇಳಿದ್ದೇನೆ. ಮೃತ ಮಹಿಳೆಯ ಪುತ್ರಿ ನೀಡಿರುವ ದೂರಿನ ಆಧಾರದ ಮೇಲೆ ಕ್ರಿಮಿನಲ್ ತನಿಖೆ ಮಾಡುವಂತೆ ಹೇಳಿದ್ದೇನೆ ಎಂದರು.

ಮೀಸಲಾತಿ: ಎಲ್ಲಾ ಸಮುದಾಯಗಳು ಮೀಸಲಾತಿಯನ್ನು ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಕಾನೂನಿನ ಚೌಕಟ್ಟಿನೊಳಗೆಯೇ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಬೇಕಾಗುತ್ತದೆ. ಶಾಶ್ವತ ಹಿಂದುಳಿದ ಆಯೋಗದ ಶಿಫಾರಸುಗಳ ಆಧಾರವನ್ನು ಕೂಡ ಪರಿಗಣಿಸಬೇಕಾಗುತ್ತದೆ. ಎಲ್ಲ ವರದಿಗಳ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದರು.

ಇನ್ನು ಮಾಜಿ ಸಚಿವ ಗೋಕಾಕ್ ಕ್ಷೇತ್ರದ ಪ್ರಭಾವಿ ಶಾಸಕ ರಮೇಶ್ ಜಾರಕಿಹೊಳಿ ಪಕ್ಷ ತೊರೆಯುವ ವದಂತಿ ಬಗ್ಗೆ ಕೇಳಿದಾಗ, ಹಾಗೇನಿಲ್ಲ, ಅವರ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡಲು, ಆರ್ ಡಿಪಿಆರ್ ಅಡಿ ರಸ್ತೆ ಕಾಮಗಾರಿ ಮಾಡುವ ಸಂಬಂಧ ಚರ್ಚಿಸಲು ಬಂದಿದ್ದರು ಎಂದು ಸಮಜಾಯಿಷಿ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com