ಸಿದ್ದರಾಮೋತ್ಸವಕ್ಕೆ ಎಷ್ಟು ಖರ್ಚು ಮಾಡಿದ್ರಿ ಮೊದಲು ಹೇಳಿ?: ಕಾಂಗ್ರೆಸ್ ಗೆ ತಿವಿದ ಈಶ್ವರಪ್ಪ

ಬಿಜೆಪಿ ಪಕ್ಷದ ಜನೋತ್ಸವ ಕುರಿತು ಕಿಡಿಕಾರುತ್ತಿರುವ ಕಾಂಗ್ರೆಸ್ ಮೊದಲು ಸಿದ್ದರಾಮೋತ್ಸವಕ್ಕೆ ಎಷ್ಟು ಖರ್ಚು ಮಾಡಿದೆ ಎಂಬುದನ್ನು ತಿಳಿಸಲಿ ಎಂದು ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಕೆ.ಎಸ್ ಈಶ್ವರಪ್ಪ
ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ: ಬಿಜೆಪಿ ಪಕ್ಷದ ಜನೋತ್ಸವ ಕುರಿತು ಕಿಡಿಕಾರುತ್ತಿರುವ ಕಾಂಗ್ರೆಸ್ ಮೊದಲು ಸಿದ್ದರಾಮೋತ್ಸವಕ್ಕೆ ಎಷ್ಟು ಖರ್ಚು ಮಾಡಿದೆ ಎಂಬುದನ್ನು ತಿಳಿಸಲಿ ಎಂದು ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.

ದೊಡ್ಡ ಬಳ್ಳಾಪುರದಲ್ಲಿ ನಿನ್ನೆ ನಡೆದ ಜನಸ್ಪಂದನ ಕಾರ್ಯಕ್ರಮದ ವಿರುದ್ಧ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಕಿಡಿಕಾರುತ್ತಿದ್ದು, ಇದೇ ವಿಚಾರವಾಗಿ ತಿರುಗೇಟು ನೀಡಿರುವ ಕೆಎಸ್ ಈಶ್ವರಪ್ಪ ಸಿದ್ದರಾಮೋತ್ಸವಕ್ಕೆ ಎಷ್ಟು ಖರ್ಚು ಮಾಡಿದ್ರಿ ಮೊದಲು ಹೇಳಿ ಕಿಡಿಕಾರಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ ಅವರು, '75 ಕೋಟಿ ರೂ. ಸಂಗ್ರಹ ಮಾಡಿ ಸಿದ್ದರಾಮೋತ್ಸವ ಮಾಡಿದಿರಲ್ಲಾ, ಅದು ರಾಜಕೀಯ ಪ್ರೇರಿತ. ಕಾರ್ಯಕ್ರಮಕ್ಕೆ ಯಾರು ಯಾರು ದುಡ್ಡು ಕೊಟ್ಟರು, ಆ ದುಡ್ಡು ಎಷ್ಟು ಖರ್ಚು ಮಾಡಿದಿರಿ, ಬಸ್ಸಿಗೆ ಎಷ್ಟು ಕೊಟ್ಟಿರಿ, ಜನರಿಗೆ ಎಷ್ಟು ಕೊಟ್ಟಿರಿ, ಅದರ ಲೆಕ್ಕ ಮೊದಲು ಕೊಡಿ” ಎಂದು ಸವಾಲು ಹಾಕಿದರು.

'ಒಂದು ಕಾರ್ಯಕ್ರಮ ಮಾಡಿ ಕಾಂಗ್ರೆಸ್ ಸರ್ಕಾರವೇ ಬಂತು ಅಂತಾ ಬೀಗಿಕೊಂಡಿದ್ದರು. ಬಿಜೆಪಿ ಇಂತಹ ನೂರು ಕಾರ್ಯಕ್ರಮ ಮಾಡಿದೆ. ಪ್ರಧಾನಿ ಮೋದಿ ಅವರು ಮಂಗಳೂರಿಗೆ ಬಂದಾಗ ಜ‌ನಸಾಗರವೇ ಸೇರಿತ್ತು. ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ‌ ಕಾರ್ಯಕ್ರಮ ಆಗುತ್ತಿದೆ. ಬಹಳ ದೊಡ್ಡ ಕಾರ್ಯಕ್ರಮ ಆಗುತ್ತಿದೆ. ಚುನಾವಣೆಯವರೆಗೂ ಇಂತಹ ಕಾರ್ಯಕ್ರಮ ನಡೆಸುತ್ತಿರುತ್ತೇವೆ. ಇಂತಹ ಕಾರ್ಯಕ್ರಮ ನೋಡಿ ಕಾಂಗ್ರೆಸ್ ನವರಿಗೆ ಸಮಾಧಾನ ಆಗುತ್ತಿಲ್ಲ. ಇದಕ್ಕೆ ನಾವೇನೂ ಮಾಡುವುದಕ್ಕೆ ಆಗುವುದಿಲ್ಲ ಎಂದರು.

ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಗಣಪತಿ ವಿಸರ್ಜನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಿವಮೊಗ್ಗ ಇನ್ನು ಮುಂದೆ ಎಲ್ಲಾ ವಿಚಾರದಲ್ಲೂ ಶಾಂತಿಯಿಂದ ಇರುತ್ತದೆ. ಯಾರೋ ಕೆಲವು ಕಿಡಿಗೇಡಿಗಳು ಶಿವಮೊಗ್ಗದಲ್ಲಿ ಗೊಂದಲ‌ ಉಂಟು ಮಾಡುವ ಪ್ರಯತ್ನ ನಡೆಸಿದ್ದರು. ಸರ್ಕಾರ ಅಂತಹವರಿಗೆ ಸರಿಯಾದ ಬುದ್ದಿ ಕಲಿಸಿದೆ. ಅವರು ಸಹ ಬುದ್ದಿ ಕಲಿತಿದ್ದಾರೆ ಅಂತಾ ನಾನು ಭಾವಿಸುತ್ತೇನೆ, ಅವರ ಹಿರಿಯರು ಸಹ ಬುದ್ದಿ ಹೇಳಿರಬಹುದು. ಶಿವಮೊಗ್ಗ ನಗರದ ಇತಿಹಾಸದಲ್ಲಿ ನಿನ್ನೆ ನಡೆದ ಹಿಂದೂ ಮಹಾ ಸಭಾ ಗಣಪತಿ ಉತ್ಸವದ ವೈಭವದಿಂದ ನಡೆದಿದೆ. ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.ನನ್ನ ಜೀವನದಲ್ಲಿ ಇಷ್ಟೊಂದು ಸಂಭ್ರಮ ನೋಡಿದ್ದು ಇದೇ ಮೊದಲು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com