ಮಂಗಳೂರು: ಯು.ಟಿ ಖಾದರ್ ಭದ್ರಕೋಟೆ ಉಳ್ಳಾಲದಲ್ಲಿ ಹಿಂದುತ್ವವಾದಿ ಆಯ್ಕೆಗೆ ಸವಾಲು!

ಕರಾವಳಿ ಕರ್ನಾಟಕ ಬಿಜೆಪಿಯ ಭದ್ರಕೋಟೆಯಾಗಿದೆ, ಆದರೆ ಮಂಗಳೂರು ಕ್ಷೇತ್ರ (ಹಿಂದೆ ಉಳ್ಳಾಲ ಎಂದು ಕರೆಯಲಾಗುತ್ತಿತ್ತು) ವಲ್ಲ, ಈ ಭಾಗದಲ್ಲಿ ಬಿಜೆಪಿ ಗೆಲುವು ಕಠಿಣವಾಗಿದೆ.
ಯು.ಟಿ ಖಾದರ್
ಯು.ಟಿ ಖಾದರ್

ಮಂಗಳೂರು: ಕರಾವಳಿ ಕರ್ನಾಟಕ ಬಿಜೆಪಿಯ ಭದ್ರಕೋಟೆಯಾಗಿದೆ, ಆದರೆ ಮಂಗಳೂರು ಕ್ಷೇತ್ರ (ಹಿಂದೆ ಉಳ್ಳಾಲ ಎಂದು ಕರೆಯಲಾಗುತ್ತಿತ್ತು) ವಲ್ಲ, ಈ ಭಾಗದಲ್ಲಿ ಬಿಜೆಪಿ ಗೆಲುವು ಕಠಿಣವಾಗಿದೆ.

ಕಳೆದ ಮೂರು ದಶಕಗಳಲ್ಲಿ, ಅಂದರೆ1994 ರಲ್ಲಿ ಕೆ ಜಯರಾಮ ಶೆಟ್ಟಿ ಆಯ್ಕೆಯಾದಾಗ ಒಮ್ಮೆ ಮಾತ್ರ ಬಿಜೆಪಿ ಕ್ಷೇತ್ರವನ್ನು ಗೆದ್ದಿತ್ತು. 2018 ರಲ್ಲಿ ಬಿಜೆಪಿ ದಕ್ಷಿಣ ಕನ್ನಡದಲ್ಲಿ ಎಂಟು ಕ್ಷೇತ್ರಗಳಲ್ಲಿ ಏಳನ್ನು ಗೆದ್ದಿದೆ, ಆದರೆ ಮಂಗಳೂರಿನಲ್ಲ.

ಕೇರಳದ ಗಡಿ ಭಾಗದಲ್ಲಿರುವ ಮತ್ತು ಮುಸ್ಲಿಮರ ಪ್ರಾಬಲ್ಯವಿರುವ ಕ್ಷೇತ್ರ ಕಳೆದ ನಾಲ್ಕು ಚುನಾವಣೆಗಳಲ್ಲಿ ಯು.ಟಿ.ಖಾದರ್ ಅವರನ್ನು ಆಯ್ಕೆ ಮಾಡಿದೆ. ಅವರ ತಂದೆ ಯು.ಟಿ.ಫರೀದ್ ಅವರು 1972 ಮತ್ತು 2007 ರ ನಡುವೆ ನಾಲ್ಕು ಬಾರಿ ಪ್ರತಿನಿಧಿಸಿದ್ದರು. 2007 ರಲ್ಲಿ ಅವರ ನಿಧನದ ನಂತರ ನಡೆದ ಉಪಚುನಾವಣೆಯಲ್ಲಿ, ಖಾದರ್ ಕಣಕ್ಕಿಳಿದರು. ಅದಾದ ನಂತರ ಹಿಂತಿರುಗಿ ನೋಡಲಿಲ್ಲ, ನಿರಂತರವಾಗಿ ಉತ್ತಮ ಅಂತರದಿಂದ ಗೆಲುವು ಸಾಧಿಸುತ್ತಿದ್ದಾರೆ.

ಕಳೆದ ಹಲವು ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು, ಆದರೆ ಈ ಬಾರಿ ಎಸ್‌ಡಿಪಿಐ  ಕೂಡ ತನ್ನ ಅಭ್ಯರ್ಥಿ ಕಣಕ್ಕೆ ಇಳಿಸುವ ಮೂಲಕ ಸ್ಪರ್ಧೆ ಮತ್ತಷ್ಟು ರಂಗೇರಿದೆ.  ಆದರೆ, ಈ ಬಾರಿಯೂ ಖಾದರ್ ಮತ್ತಷ್ಟು ಹುಮ್ಮಸ್ಸಿನಿಂದ ಕಣಕ್ಕಿಳಿದಿದ್ದು, ಎರಡನೇ ಸ್ಥಾನಕ್ಕಾಗಿ ಬಿಜೆಪಿ ಮತ್ತು ಎಸ್‌ಡಿಪಿಐ ನಡುವೆ ಪೈಪೋಟಿ ಏರ್ಪಟ್ಟಿದೆ ಎಂದು ಹಲವು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.

ಖಾದರ್ ಆಡಳಿತ ಪಕ್ಷದಲ್ಲಿರಲಿ ಅಥವಾ, ವಿರೋಧ ಪಕ್ಷದಲ್ಲಿರಲಿ, ಕ್ಷೇತ್ರಕ್ಕೆ ಅಭಿವೃದ್ಧಿ ತರುವ ವ್ಯಕ್ತಿ ಎಂದು ಮತದಾರರಲ್ಲಿ ಜನಪ್ರಿಯರಾಗಿದ್ದಾರೆ. ಮಂಗಳೂರು-ಹರೇಕಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವ ಹರೇಕಳ ಸೇತುವೆ-ಕಮ್-ಬ್ಯಾರೇಜ್, ಹಲವಾರು ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಗೆ ಸಂಪರ್ಕ ಕಲ್ಪಿಸುವ ತೊಕ್ಕೊಟ್ಟು-ಮುಡಿಪು ರಸ್ತೆಯ ಚತುಷ್ಪಥ, ಇತರ ಅಭಿವೃದ್ಧಿಗಳು ಕ್ಷೇತ್ರದಲ್ಲಿ ದೊಡ್ಡ ಪ್ರಭಾವ ಬೀರಿವೆ.

ರಿಯಾಜ್ ಫರಂಗಿಪೇಟೆ ಅವರನ್ನು ಕಣಕ್ಕಿಳಿಸಿರುವ ಎಸ್ ಡಿಪಿಐ, ಹಿಜಾಬ್ ವಿವಾದ ಭುಗಿಲೆದ್ದಾಗ ಹಾಗೂ ‘ನಕಲಿ’ ಪ್ರಕರಣಗಳಲ್ಲಿ ಮುಸ್ಲಿಮರನ್ನು ಬಂಧಿಸಿದಾಗ ಖಾದರ್ ಸಮುದಾಯದ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಮುಸ್ಲಿಮರ ಓಲೈಕೆಗೆ ಯತ್ನಿಸುತ್ತಿದೆ.

ಇನ್ನೊಂದೆಡೆ ಕಳೆದ ಚುನಾವಣೆ ವೇಳೆ ಉಳ್ಳಾಲವನ್ನು ‘ಮಿನಿ ಪಾಕಿಸ್ತಾನ’ ಎಂದು ಬಿಂಬಿಸಲು ಯತ್ನಿಸಿದ ಬಿಜೆಪಿ ಮತ್ತು ಸಂಘಪರಿವಾರ ಈಗ ‘ಹಿಂದೂ ಶಾಸಕ’ರನ್ನು ಆಯ್ಕೆ ಮಾಡುವಂತೆ ಜನರಲ್ಲಿ ಮನವಿ ಮಾಡುತ್ತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ಖಾದರ್ ವಿರುದ್ಧ 19 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಇವರ ವಿರುದ್ಧ ಬಿಜೆಪಿ ಬಿಲ್ಲವರಾದ ಸತೀಶ್ ಕುಂಪಲ ಅವರನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಹೆಚ್ಚಿದ್ದು, ನಂತರದಲ್ಲಿ ಕ್ರೈಸ್ತರು, ಬಿಲ್ಲವರು, ಬಂಟರು ಮತ್ತು ದಲಿತರು ಇದ್ದಾರೆ.

ಖಾದರ್ ವಿರುದ್ಧ ಪ್ರಬಲ ಹಿಂದುತ್ವವಾದಿ ನಾಯಕನನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿತ್ತು ಎಂಬ ಮಾತು ಕೇಳಿಬಂದಿತ್ತು. ಆದರೆ ಮೂಲಗಳ ಪ್ರಕಾರ, ಗೆಲುವಿನ ಸಾಧ್ಯತೆಗಳು ತೀರಾ ಕಡಿಮೆ ಎಂದು ತಿಳಿದ ಕಾರಣ ಯಾವುದೇ ಜನಪ್ರಿಯ ನಾಯಕ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಾಗಿಲ್ಲ. ಖಾದರ್ ಅವರು ಜನಸಾಮಾನ್ಯರಲ್ಲಿ ಜನಪ್ರಿಯರಾಗಿದ್ದಾರೆ ಮತ್ತು ಎಲ್ಲಾ ಧರ್ಮದ ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.

ಖಾದರ್ ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಆಯೋಜಿಸುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಕ್ಕೆ ಹಾಜರಿರರುತ್ತಾರೆ,  ಅವರಿಗೆ ಸರ್ಕಾರದ ಹಣವನ್ನು ಪಡೆಯಲು ಸಹಾಯ ಮಾಡಿದ್ದಾರೆ. ಅವರು ಮತದಾರರಿಗೆ ಸುಲಭವಾಗಿ ತಲುಪುತ್ತಾರೆ.  ಸ್ವಚ್ಛ ರಾಜಕಾರಣಿ ಎಂಬ ಇಮೇಜ್ ಉಳಿಸಿಕೊಂಡಿದ್ದಾರೆ.

ಸಿದ್ದರಾಮಯ್ಯ ಮತ್ತು ಎಚ್‌ಡಿ ಕುಮಾರಸ್ವಾಮಿ ಸರ್ಕಾರದಲ್ಲಿ ಸಚಿವರಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ  ಸಚಿವರಾಗಿ ಅವರು ಮಾಡಿದ ಉತ್ತಮ ಕೆಲಸವನ್ನು ಇಲ್ಲಿನ ಜನರು ಇಂದಿಗೂ ಸ್ಮರಿಸುತ್ತಿದ್ದಾರೆ. ಈ ಎಲ್ಲ ಅಂಶಗಳು ಅವರಿಗೆ ಚುನಾವಣೆಯಲ್ಲಿ ನೆರವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com