

ಮಂಡ್ಯ: 2019ರಲ್ಲಿ ನಡೆದ ಕೆ ಆರ್ ಪೇಟೆ ಉಪ ಚುನಾವಣೆಯ ನೇತೃತ್ವ ವಹಿಸಿಕೊಂಡು ಮಂಡ್ಯ ಜಿಲ್ಲೆಯಲ್ಲೇ ಮೊದಲ ಬಾರಿಗೆ ಬಿಜೆಪಿ ಗೆಲ್ಲಿಸಿದ ಖ್ಯಾತಿಗೆ ಪಾತ್ರವಾಗಿದ್ದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು, ಪಕ್ಷ ಸೂಚಿಸುವ ಕ್ಷೇತ್ರದಲ್ಲಿ ಪ್ರಚಾರ ಮಾಡುವುದಾಗಿ ಶುಕ್ರವಾರ ಹೇಳಿದ್ದಾರೆ.
ಇಂದು ಕೆ.ಆರ್.ಪೇಟೆ ತಾಲೂಕಿನ ಅಗ್ರಹಾರ ಬಾಚಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ಕಳೆದ ಬಾರಿಯಂತೆ ಈ ಬಾರಿಯೂ ಕೆ ಆರ್ ಪೇಟೆಯನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸೋದಾಗಿ ಹೇಳಿದರು.
ಇದೇ ವೇಳೆ ಟಿಕೆಟ್ ವಂಚಿತ ಬಂಡಾಯ ನಾಯಕರ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ ಅವರು, ಟಿಕೆಟ್ ಸಿಗದೆ ಅಸಮಾಧಾನಗೊಂಡವರ ಜತೆ ನಮ್ಮ ನಾಯಕರು ಚರ್ಚೆ ನಡೆಸಿ ಸಮಾಧಾನ ಮಾಡುತ್ತಾರೆ. ಕೇಂದ್ರದ ನಾಯಕರು ಟಿಕೆಟ್ ಹಂಚಿಕೆ ಮಾಡಿದ್ದಾರೆ. ಹತ್ತಾರಿ ಬಾರಿ ಯೋಚಿಸಿಯೇ ಟಿಕೆಟ್ ಹಂಚಿಕೆ ಮಾಡಿದ್ದಾರೆ ಎಂದರು.