

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಾಡುತ್ತಿರುವ ಸುಳ್ಳು ಆರೋಪಗಳು ಇಡೀ ಕುರುಬ ಸಮಾಜಕ್ಕೆ ಮತ್ತು ಹಿಂದುಳಿದ ವರ್ಗಗಳಿಗೆ ಮಾಡುತ್ತಿರುವ ಅವಮಾನವಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಸಿದ್ದರಾಮಯ್ಯ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಸಿಎಂ ಬೊಮ್ಮಾಯಿಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ ಕಾಂಗ್ರೆಸ್, ಬೊಮ್ಮಾಯಿವರು ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವುದು ಲಿಂಗಾಯತರಿಗೆ ಮಾಡುವ ಅವಮಾನವಾಗುವುದಾದರೆ, ಸಿದ್ದರಾಮಯ್ಯವರ ಮೇಲೆ ಮಾಡುತ್ತಿರುವ ಸುಳ್ಳು ಆರೋಪಗಳು ಇಡೀ ಕುರುಬ ಸಮಾಜಕ್ಕೆ, ಹಿಂದುಳಿದ ವರ್ಗಗಳಿಗೆ ಮಾಡುತ್ತಿರುವ ಅವಮಾನವಲ್ಲವೇ? ಎಂದು ಪ್ರಶ್ನಿಸಿದೆ.
ಇಂದು ಯಲಂಹಕದಲ್ಲಿ ಚುನಾವಣಾ ಪ್ರಚಾರ ಹಾಗೂ ರೋಡ್ ಶೋದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ 8 ಸಾವಿರ ಕೋಟಿ ರೂ. ಅಕ್ರಮ ಮಾಡಿದ್ದಾರೆ. ಬಿಡಿಎ, ಇಂಧನ ಹಾಗೂ ನೀರಾವರಿಯಲ್ಲಿ ಅಕ್ರಮ ಮಾಡಿದ್ದಾರೆಂದು ಆರೋಪಿಸಿದರು.
ಸಿದ್ದರಾಮಯ್ಯನವರ ಆಡಳಿತದಲ್ಲಿ ಶಿಕ್ಷಕರ ನೇಮಕಾತಿ, ಪ್ರಶ್ನೆಪತ್ರಿಕೆ ಸೋರಿಕೆ, ರೀಡೂ ಮುಂತಾದಂತಹ ಹಗರಣಗಳು ನಡೆದಿವೆ. .843 ಎಕರೆ ಭೂಮಿಯನ್ನು ಅಕ್ರಮವಾಗಿ ಸಾಹುಕಾರರಿಗೆ ಬಿಟ್ಟುಕೊಟ್ಟು 8 ಸಾವಿರ ಕೋಟಿ ರೂ. ಹಗರಣವನ್ನು ಯಾರಾದರೂ ಮಾಡಿದ್ದರೆ ಅದು ಸಿದ್ದರಾಮಯ್ಯನವರ ಸರ್ಕಾರ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತೇನೆ ಎಂದು ಬೊಮ್ಮಾಯಿ ಆರೋಪಿಸಿದ್ದರು.