

ಮೈಸೂರು: ಮೀಸಲಾತಿ ವಿಚಾರದಲ್ಲಿ ಬಿಜೆಪಿಯ ಮೋಸದಾಟ ಬಯಲಾಗಿದೆ. ಇದು ಡಬಲ್ ಇಂಜಿನ್ ಸರ್ಕಾರದ ದ್ರೋಹವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲ ಅವರು ಬುಧವಾರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುರ್ಜೆವಾಲ ಅವರು, ಮೀಸಲಾತಿ ವಿಚಾರದಲ್ಲಿ ಬಿಜೆಪಿ ಎಲ್ಲಾ ಸಮುದಾಯದವರನ್ನು ವಂಚಿಸುತ್ತಿದೆ ಎಂದು ಕಾಂಗ್ರೆಸ್ ಸದಾ ಹೇಳುತಿತ್ತು. ಒಕ್ಕಲಿಗ ಮತ್ತು ಲಿಂಗಾಯತರಿಗೆ ಲಾಲಿಪಾಪ್ ಕೊಟ್ಟಂತೆ ಆಗಿದೆ. ಚುನಾವಣೆವರೆಗೂ ಈ ರೀತಿ ಸುಳ್ಳು ಭರವಸೆ ಕೊಡುವುದಾಗಿತ್ತು. ಇದೀಗ ಸುಪ್ರೀಂಕೋರ್ಟ್‌ನಲ್ಲಿ ಅವರ ಮೋಸದಾಟ ಬಯಲಾಗಿದೆ ಎಂದು ಹೇಳಿದರು.
ಮೀಸಲಾತಿ ಪರಿಷ್ಕರಣೆ ಹೆಸರಿನಲ್ಲಿ ಬಿಜೆಪಿ ವಂಚನೆ ಮಾಡುತ್ತಿದೆ. ಮೀಸಲಾತಿ ಪರಿಷ್ಕರಣೆ ಸಂಬಂಧ ಅಫಿಡವಿಟ್ ಸಲ್ಲಿಸಲು ವಿಫಲವಾಗಿದೆ. ಸುಪ್ರೀಂಕೋರ್ಟ್ಗೆ ಅಫಿಡೆವಿಟ್ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಏಕೆ ಸಾಧ್ಯವಾಗಲಿಲ್ಲ. ಮೀಸಲಾತಿ ವಿಚಾರದಲ್ಲಿ ಸಿಎಂ ಬೊಮ್ಮಾಯಿ ಏಕೆ ಮೋಸದಾಟ ಆಡಿದ್ದಾರೆ ಎಂದು ಪ್ರಶ್ನಿಸಿದರು.
40 ಪರ್ಸೆಂಟ್ ಬಿಜೆಪಿ ಸರ್ಕಾರ ಈ ಬಾರಿ 40 ಸ್ಥಾನಗಳಿಗೆ ಕುಸಿಯಲಿದೆ ಎಂದು ಕಾಂಗ್ರೆಸ್ ನಾಯಕ ವಾಗ್ದಾಳಿ ನಡೆಸಿದರು.
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸುರ್ಜೆವಾಲ ಅವರು 9 ಪ್ರಶ್ನೆಗಳನ್ನು ಕೇಳಿದ್ದಾರೆ.