ಲೋಕಸಭಾ ಚುನಾವಣೆ ಗೆಲುವು ಮುಖ್ಯ, ಕ್ಷೇತ್ರಗಳ ಅನುದಾನ ವಿಚಾರ ಆಮೇಲೆ ನೋಡೋಣ: ಪಕ್ಷದ ಶಾಸಕರಿಗೆ ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಮೂರು ದಿನಗಳ ಕಾಲ ಸತತ ಸಭೆಗಳನ್ನು ನಡೆಸುತ್ತಿದ್ದು, ಶಾಸಕರು ಹಾಗೂ ಸಚಿವರ ನಡುವೆ ಭಿನ್ನಾಭಿಪ್ರಾಯ ಶಮನಗೊಳಿಸಿ ಸಮನ್ವಯ ಮೂಡಿಸಲು ಪ್ರಯತ್ನಗಳ ನಡೆಸುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಮೂರು ದಿನಗಳ ಕಾಲ ಸತತ ಸಭೆಗಳನ್ನು ನಡೆಸುತ್ತಿದ್ದು, ಶಾಸಕರು ಹಾಗೂ ಸಚಿವರ ನಡುವೆ ಭಿನ್ನಾಭಿಪ್ರಾಯ ಶಮನಗೊಳಿಸಿ ಸಮನ್ವಯ ಮೂಡಿಸಲು ಪ್ರಯತ್ನಗಳ ನಡೆಸುತ್ತಿದ್ದಾರೆ.

ಸೋಮವಾರ ತುಮಕೂರು, ಯಾಗದಿಗಿ, ಚಿತ್ರದುರ್ಗ, ಬಾಗಲಕೋಟೆ, ಬಳ್ಳಾರಿ, ಧಾರವಾಡ ಜಿಲ್ಲೆಗಳ ಸಚಿವರು ಹಾಗೂ ಶಾಸಕರ ಜೊತೆಗೆ ಸಭೆಯನ್ನು ನಡೆಸಿದ ಮುಖ್ಯಮಂತ್ರಿಗಳು,  ಮಂಗಳವಾರ ರಾಯಚೂರು, ವಿಜಯಪುರ, ಕೊಪ್ಪಳ, ಬೆಳಗಾವಿ, ಹಾವೇರಿ, ಕಲಬುರಗಿ ಜಿಲ್ಲೆಗಳ ಶಾಸಕರು ಹಾಗೂ ಸಚಿವರ ಜೊತೆಗೆ ಸಭೆ ನಡೆಸಿದರು.

ಬುಧವಾರ ಕೂಡ ರಾಮನಗರ, ಹಾಸನ, ಕೊಡಗು, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಸಕರು ಹಾಗೂ ಉಸ್ತುವಾರಿ ಸಚಿವರ ಜೊತೆಗೆ ಸಭೆಯನ್ನು ನಡೆಸಿದರು. ಹೀಗೆ ಸತತವಾಗಿ ದಿನವಿಡೀ ಈ ಸಭೆಯನ್ನು ನಡೆಸುವ ಮೂಲಕ ಆಡಳಿತ ಯಂತ್ರ ಸುಗಮವಾಗಿ ಸಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ.

ಈ ಸಭೆಯಲ್ಲಿ ಹಲವು ಜಿಲ್ಲೆಗಳ ಶಾಸಕರು ತಮ್ಮ ಅಸಮಾಧಾನ, ಬೇಸರವನ್ನು ತೋಡಿಕೊಂಡಿದ್ದಾರೆ. ಅನುದಾನ ಕೊರತೆ, ಸಚಿವರ ಸ್ಪಂದನೆಯ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಶಾಸಕರು ಸಮಸ್ಯೆಗಳನ್ನು ಆಲಿಸಿರುವ ಸಿಎಂ ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ. ಸದ್ಯಕ್ಕೆ ಹೆಚ್ಚಿನ ಅನುದಾನ ನಿರೀಕ್ಷೆ ಮಾಡಬೇಡಿ, ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂಬ ಭರವಸೆಯನ್ನು ನೀಡಿದ್ದಾರೆಂದು ತಿಳಿದುಬಂದಿದೆ.

ವಿಧಾನಸಭಾ ಕ್ಷೇತ್ರಗಳಲ್ಲಿನ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಕೆಲವು ನಿರ್ಧಾರಗಳನ್ನು ಕೈಗೊಳ್ಳುವಾಗ ಆಯಾ ಕ್ಷೇತ್ರಗಳ ಶಾಸಕರೊಂದಿಗೆ ಸಮನ್ವಯ ಸಾಧಿಸಿ, ಕೆಲಸ ಮಾಡುವಂತೆ ಹಾಗೂ ಐದು ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳುವಂತೆ ಮುಖ್ಯಮಂತ್ರಿಗಳು ಸಚಿವರಿಗೆ ಸೂಚನೆ ನೀಡಿದರು. ಇದೇ ವೇಳೆ ಲೋಕಸಭೆ ಚುನಾವಣೆಯವರೆಗೆ ತಾಳ್ಮೆಯಿಂದಿರಿ, ನಂತರ ಕ್ಷೇತ್ರಗಳಿಗೆ ಅನುದಾನ ನೀಡುವ ಕೆಲಸ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು ಎಂದು ಸಭೆಯಲ್ಲಿ ಪಾಲ್ಗೊಂಡಿಡ್ಡ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಹೇಳಿದ್ದಾರೆ.

ಕುಡಿಯುವ ನೀರು ಪೂರೈಕೆ, ಜಿಲ್ಲೆಗಳಿಗೆ ಪ್ರಮುಖ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಹಣದ ಕೊರತೆಯಾಗುವುದಿಲ್ಲ, ಆದ್ಯತೆಯ ಮೇಲೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆಂತು ತಿಳಿಸಿದರು.

ಇದಷ್ಟೇ ಅಲ್ಲದೆ, ತಮ್ಮ ಕ್ಷೇತ್ರಗಳಲ್ಲಿ ಅನಾಹುತಗಳು ಸಂಭವಿಸಿದರೆ ನೇರವಾಗಿ ತಮಗೇ ಮಾಹಿತಿ ನೀಡುವಂತೆಯೂ ಶಾಸಕರಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com