ಕರ್ನಾಟಕದ ಗೆಲುವು ಕೇಂದ್ರದಲ್ಲಿ ಬಿಜೆಪಿ ಸೋಲಿಗೆ ನಾಂದಿ ಹಾಡಿದೆ: ಕಾಂಗ್ರೆಸ್

ತಮ್ಮ ಹಿತಾಸಕ್ತಿಗಳನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿದಿರುವ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದೆ. ಅದೇ ರೀತಿಯಲ್ಲಿಯೇ ಕೇಂದ್ರದಲ್ಲೂ ಬದಲಾವಣೆ ತರಬೇಕಿದೆ ಎಂದು ರಾಜ್ಯ ವಿಧಾನ ಪರಿಷತ್‌ ಮಾಜಿ ಸಭಾಪತಿ ಹಾಗೂ ಕಾಂಗ್ರೆಸ್‌ ಮುಖಂಡ ವಿ.ಆರ್‌.ಸುದರ್ಶನ್‌ ಅವರು ಗುರುವಾರ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ತಮ್ಮ ಹಿತಾಸಕ್ತಿಗಳನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿದಿರುವ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದೆ. ಅದೇ ರೀತಿಯಲ್ಲಿಯೇ ಕೇಂದ್ರದಲ್ಲೂ ಬದಲಾವಣೆ ತರಬೇಕಿದೆ ಎಂದು ರಾಜ್ಯ ವಿಧಾನ ಪರಿಷತ್‌ ಮಾಜಿ ಸಭಾಪತಿ ಹಾಗೂ ಕಾಂಗ್ರೆಸ್‌ ಮುಖಂಡ ವಿ.ಆರ್‌.ಸುದರ್ಶನ್‌ ಅವರು ಗುರುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಬಿಜೆಪಿ ಸರ್ಕಾರವನ್ನು ಉರುಳಿಸಲು ಮೈತ್ರಿಕೂಟ ಆರಂಭವಾಗಿದೆ. ರಾಹುಲ್ ಗಾಂಧಿ ಅವರು ಲೋಕಸಭೆಗೆ ಮರಳಿರುವುದನ್ನು ದೇಶಾದ್ಯಂತ ಜನರು ಸಂಭ್ರಮಿಸಿದ್ದಾರೆ. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನೀಡಿದ್ದ ಎಲ್ಲ ಐದು ಗ್ಯಾರಂಟಿಗಳನ್ನು ರಾಜ್ಯ ಸರ್ಕಾರ ಪೂರ್ಣಗೊಳಿಸುತ್ತಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಕನಿಷ್ಠ 20 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿ ತರುವಂತೆ ಬಿಜೆಪಿಗೆ ಸವಾಲು ಹಾಕಿದ ಅವರು, ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರ ಆಯ್ಕೆ ವಿಚಾರ ಕುರಿತು ಲೇವಡಿ ಮಾಡಿದರು.

ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದು ಮೂರು ತಿಂಗಳು ಕಳೆದಿದ್ದು, ವಿರೋಧ ಪಕ್ಷದ ನಾಯಕನ ಆಯ್ಕೆ ಇನ್ನೂ ಆಗಿಲ್ಲ. ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಜವಾಬ್ದಾರಿ ಮತ್ತು ಬುದ್ಧಿವಂತಿಕೆಯಿಂದಿರಬೇಕು. ಪ್ರಜಾಪ್ರಭುತ್ವದಲ್ಲಿ ಸಾಂವಿಧಾನಿಕ ಅಗತ್ಯವಾಗಿರುವ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಬೇಕು. ರಾಜ್ಯದ ಜನರಿಗೆ ಅದನ್ನು ಪ್ರಶ್ನಿಸುವ ಎಲ್ಲ ಹಕ್ಕಿದೆ. ಪ್ರತಿ ತಂಡಕ್ಕೂ ನಾಯಕರಿರಬೇಕು. ಸದನ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಲು ನಾಯಕರ ಅಗತ್ಯವಿರುತ್ತದೆ. ಮುಖ್ಯಮಂತ್ರಿ ನೇಮಕ ವಿಳಂಬವಾದಾಗ ಬಿಜೆಪಿ ಗದ್ದಲ ಎಬ್ಬಿಸಿತ್ತು. ಆದರೆ, ವಿಪಕ್ಷ ನಾಯಕನ ಆಯ್ಕೆ ಮಾಡಲು ಇದೀಗ ಹರಸಾಹಸ ಪಡುತ್ತಿದೆ ಎಂದು ವ್ಯಂಗ್ಯವಾಡಿದರು.

ಬಳಿಕ ಜೆಡಿಎಸ್ ವಿರುದ್ಧವೂ ಕಿಡಿ ಕಾರಿದ ಅವರು, ಪ್ರಾದೇಶಿಕ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು, ಬಿಜೆಪಿಯೊಂದಿಗೆ ಕೈಜೋಡಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com