

ಮೈಸೂರು: ನಮ್ಮ ಸರ್ಕಾರ 100 ದಿನ ಪೂರೈಸಿರುವುದು ನಮಗೆ ಇದೇನು ಸವಾಲು ಎನಿಸಲಿಲ್ಲ. ಗ್ಯಾರಂಟಿ ವಿಚಾರದಲ್ಲಿ ನಮಗೆ ಬದ್ಧತೆ ಇತ್ತು. ಹೀಗಾಗಿ ಅವುಗಳ ಜಾರಿ ಕಠಿಣ ಅನಿಸಲಿಲ್ಲ. ಮಾತು ಕೊಟ್ಟಂತೆ ಗ್ಯಾರಂಟಿಗಳ ಜಾರಿ ಮಾಡುತ್ತಿದ್ದೇವೆ. ಖುದ್ದು ಪಿಎಂ ಕೂಡ ಗ್ಯಾರಂಟಿಗಳ ಬಗ್ಗೆ ಆರೋಪ ಮಾಡುತ್ತಿದ್ದರು. ಆದರೆ, ಸರ್ಕಾರ ರಾಜ್ಯ ಯಾವ ದಿವಾಳಿಯೂ ಆಗಿಲ್ಲ. ಎಲ್ಲವನ್ನೂ ವ್ಯವಸ್ಥಿತವಾಗಿ ಜಾರಿ ಮಾಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇಂದು ದೇವಿಗೆ ವಿಶೇಷ ಪೂಜೆ, ಹರಕೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗೃಹಲಕ್ಷ್ಮಿಗೆ ವಾರ್ಷಿಕ 32 ಸಾವಿರ ಕೋಟಿ ರೂಪಾಯಿ ಖರ್ಚಾಗುತ್ತದೆ. ದೇಶದ ಇತಿಹಾಸದಲ್ಲೇ ಒಂದು ಯೋಜನೆ ಇಷ್ಟು ದೊಡ್ಡ ಪ್ರಮಾಣದ ಹಣ ಖರ್ಚು ಮಾಡುತ್ತಿರುವುದು ಇದೇ ಮೊದಲು, ನಮ್ಮ ಪಕ್ಷಕ್ಕೆ ರಾಜಕೀಯ ಇಚ್ಛಾಶಕ್ತಿಯಿದೆ ಎಂದರು.
ಬಿಜೆಪಿಗೆ ನೈತಿಕತೆ ಏನಿದೆ: ಸರ್ಕಾರ 100 ದಿನಗಳ ಆಡಳಿತ ಪೂರೈಸಿರುವ ಸಂದರ್ಭದಲ್ಲಿ ಬಿಜೆಪಿ ಚಾರ್ಜ್ ಶೀಟ್ ಹೊರತರುತ್ತಿರುವ ಬಗ್ಗೆ ಕೇಳಿದಾಗ ಬಿಜೆಪಿಯವರಿಗೆ ಚಾರ್ಜ್ ಶೀಟ್ ತರಲು ಯಾವ ನೈತಿಕತೆ ಇದೆ, ಕಳೆದ ನಾಲ್ಕು ವರ್ಷಗಳ ಆಡಳಿತದಲ್ಲಿ ಬಿಜೆಪಿಯವರು ಏನೂ ಮಾಡದೆ ಭ್ರಷ್ಟಾಚಾರ, ಹಗರಣಗಳಲ್ಲಿ ಮುಳುಗಿ ಹೋಗಿರುವವರು ನಮ್ಮ ಮೇಲೆ ಏನು ಆರೋಪ ಮಾಡುತ್ತಾರೆ, ಬಿಜೆಪಿ ಆಡಳಿತದಲ್ಲಿ ಮಾಡಿರುವ ಭ್ರಷ್ಟಾಚಾರ, ಹಗರಣಗಳ ಬಗ್ಗೆ ತನಿಖೆ ಮಾಡಲು ನ್ಯಾಯಾಂಗ ಸಮಿತಿ ರಚಿಸಿರುವ ಬಗ್ಗೆ ಅವರು ನಮಗೆ ಮೊದಲು ಉತ್ತರ ಕೊಡಲಿ ಎಂದು ತಿರುಗೇಟು ನೀಡಿದರು.
ನಾವು ಟಾರ್ಗೆಟ್ ಮಾಡಿಲ್ಲ: ನಾವು ಅಧಿಕಾರಕ್ಕೆ ಬರುವ ಮೊದಲೇ ಎಲ್ಲಾ ಹಗರಣಗಳ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಮೊದಲೇ ಹೇಳಿದ್ದೆವು, ನಾವು ಬಿಜೆಪಿಯವರನ್ನು ಟಾರ್ಗೆಟ್ ಮಾಡುತ್ತಿಲ್ಲ. ಎಸ್ ಐ ಹಗರಣ, 40 ಪರ್ಸೆಂಟ್ ಕಮಿಷನ್ ಆರೋಪ, ಕೋವಿಡ್ ಹಗರಣ ಬಗ್ಗೆ ತನಿಖೆ ಮಾಡಿಸುತ್ತಿದ್ದೇವೆ ಎಂದು ಸಿಎಂ ಹೇಳಿದರು.