ಬರ ಸಂಕಷ್ಟ: ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಸರ್ಕಾರ, ಬಿಜೆಪಿ ವಾಗ್ದಾಳಿ

ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ 2000 ರೂ.ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಅವರು ಗುರುವಾರ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ

ಬೆಂಗಳೂರು: ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ 2000 ರೂ.ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಅವರು ಗುರುವಾರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ (ಟ್ವಿಟರ್) ಪೋಸ್ಟ್ ಮಾಡಿರುವ ಅಶೋಕ್ ಅವರು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನುಡಿದಂತೆ ನಡೆದ ಸರ್ಕಾರ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪ್ರತಿ ಎಕರೆಗೆ ರೂ.2000 ಬರ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿ ಒಂದು ತಿಂಗಳು ಕಳೆದರೂ ಹಣ ಬಿಡುಗಡೆ ಮಾಡಲು ಮೀನ-ಮೇಷ ಎಣಿಸುತ್ತಿದ್ದಾರೆಂದು ಹೇಳಿದ್ದಾರೆ.

ರೈತರ ಆತ್ಮಹತ್ಯೆ ಬಗ್ಗೆ ಅನುಮಾನ ವ್ಯಕ್ತಪಡಿಸುವುದು, ಸಾಲಮನ್ನಾ ಆಸೆಗಾಗಿ ಬರಗಾಲ ಬರಲಿ ಎಂದು ರೈತರು ಬಯಸುತ್ತಿದ್ದಾರೆ ಎಂದು ರೈತರನ್ನು ಅಪಮಾನ ಮಾಡುವುದು, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಇವುಗಳಲ್ಲೆ ಕಾಂಗ್ರೆಸ್ ಸರ್ಕಾರ ಕಾಲಹರಣ ಮಾಡುತ್ತಿದೆಯೇ ಹೊರತು ರೈತರ ನೆರವಿಗೆ ಬರುವ ಉದ್ದೇಶವೇ ಇದ್ದಂತಿಲ್ಲ.

2019ರಲ್ಲಿ ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿತ್ತು. ಆಗ ಯಡಿಯೂರಪ್ಪನವರೇ ಸ್ವತಃ ಪ್ರವಾಸ ಕೈಗೊಂಡು ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ SDRF ಅನ್ವಯ ನೀಡುವ ಬೆಳೆಹಾನಿ ಪರಿಹಾರವನ್ನು ದುಪ್ಪಟ್ಟುಗೊಳಿಸಲಾಯಿತು.

ನಾನು ಕಂದಾಯ ಸಚಿವನಾಗಿದ್ದಾಗ 2022 ನೇ ಸಾಲಿನಲ್ಲಿ 13,09,421 ಹೆಕ್ಟೇರ್‌ ಬೆಳೆ ಹಾನಿಯಾಗಿತ್ತು. ಆಗ 14,62,841 ರೈತರ ಬ್ಯಾಂಕ್‌ ಖಾತೆಗೆ 2031.15 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ ನೀಡಲಾಯಿತು. ಮಳೆಯಾಶ್ರಿತ ಜಮೀನಿಗೆ ಹೆಕ್ಟೇರ್‌ಗೆ 6,800 ರೂ. ಮಾರ್ಗಸೂಚಿ ದರವಿದ್ದು, ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 6,800 ರೂ. ಸೇರಿಸಿ, ಒಟ್ಟು 13,600 ರೂ. ನೀಡಲಾಯಿತು. ನೀರಾವರಿ ಜಮೀನಿಗೆ ಹೆಕ್ಟೇರ್‌ಗೆ 13,500 ರೂ. ಮಾರ್ಗಸೂಚಿ ದರವಿದ್ದು, ಅದಕ್ಕೆ ರಾಜ್ಯ ಸರ್ಕಾರದಿಂದ 11,500 ರೂ. ಸೇರಿಸಿ ಒಟ್ಟು 25,000 ರೂ. ನೀಡಲಾಯಿತು. ಬಹುವಾರ್ಷಿಕ ಬೆಳೆ ಜಮೀನಿಗೆ 18,000 ರೂ. ಮಾರ್ಗಸೂಚಿ ದರವಿದ್ದು, ರಾಜ್ಯ ಸರ್ಕಾರದಿಂದ 10,000 ರೂ. ಸೇರಿಸಿ ಒಟ್ಟು 28,000 ರೂ. ನೀಡಲಾಯಿತು. ಆದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2 ಸಾವಿರ ರೂ. ನೀಡುವುದಾಗಿ ಘೋಷಣೆ ಮಾಡಿ ಕೈ ತೊಳೆದುಕೊಂಡಿದೆ. ಅದು ಕೂಡ ಇನ್ನೂ ರೈತರಿಗೆ ತಲುಪಿಲ್ಲ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ವಿಪಕ್ಷಗಳ ಟೀಕೆ ತಪ್ಪಿಸಿಕೊಳ್ಳಲು ತರಾತುರಿಯಲ್ಲಿ ಪರಿಹಾರ ಘೋಷಿಸಿದರೆ ವಿನಃ ಕಾಂಗ್ರೆಸ್ ಸರ್ಕಾರಕ್ಕೆ ಬರ ಪರಿಹಾರ ನೀಡುವ ಉದ್ದೇಶವೇ ಇದ್ದಂತಿಲ್ಲ ಎಂದು ತಿಳಿಸಿದ್ದಾರೆ.

ಕುಣಿಯಲಾರದವನಿಗೆ ನೆಲ ಡೊಂಕು ಎಂಬ ಗಾದೆ ಮಾತಿನಂತೆ ಸಿದ್ದರಾಮಯ್ಯ ಅವರು ತಮ್ಮ ಎಲ್ಲ ಎಡವಟ್ಟುಗಳಿಗೂ ಕೇಂದ್ರ ಸರ್ಕಾರದತ್ತ ಬೊಟ್ಟು ತೋರಿಸುವುದೇ ತಮ್ಮ ಏಕೈಕ ಕೆಲಸ ಎಂದು ಭಾವಿಸಿದಂತಿದೆ.  ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಕೇಂದ್ರದ ಅನುದಾನಕ್ಕೆ ಕಾಯದೆ ಪರಿಹಾರ ವಿತರಣೆ ಮಾಡಿತ್ತು. 2019 ರಲ್ಲಿ 9,72,517 ಹೆಕ್ಟೇರ್‌ ಬೆಳೆಹಾನಿಯಾಗಿತ್ತು. 6,71,314 ಫಲಾನುಭವಿಗಳಿಗೆ 1232.20 ಕೋಟಿ ರೂ. ಪರಿಹಾರ ನೀಡಲಾಗಿತ್ತು. 2020ರಲ್ಲಿ 19,68,247 ಹೆಕ್ಟೇರ್‌ ಬೆಳೆಹಾನಿಯಾಗಿತ್ತು. 12,00,346 ಫಲಾನುಭವಿಗಳಿಗೆ 941.70 ಕೋಟಿ ರೂ. ಪರಿಹಾರ ನೀಡಲಾಗಿತ್ತು.

2021ರಲ್ಲಿ 14,93,811 ಹೆಕ್ಟೇರ್‌ ಬೆಳೆಹಾನಿಯಾಗಿತ್ತು. 18,56,083 ಫಲಾನುಭವಿಗಳಿಗೆ 2446.10 ಕೋಟಿ ರೂ. ಪರಿಹಾರ ನೀಡಲಾಗಿತ್ತು. 2022 ರಲ್ಲಿ 13,09,421, ಹೆಕ್ಟೇರ್‌ ಬೆಳೆಹಾನಿ ಆಗಿತ್ತು. 14,62,841 ಫಲಾನುಭವಿಗಳಿಗೆ 2031.15 ಕೋಟಿ ರೂ. ಪರಿಹಾರ ನೀಡಲಾಗಿತ್ತು.

ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ರೈತರಿಗೆ ಬರ ಪರಿಹಾರ ವಿಷಯದಲ್ಲಿ ಇದೇ ರೀತಿ ಅನ್ಯಾಯವಾಗುತ್ತಿದೆ.  2013-14ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಜುಲೈ-ಆಗಸ್ಟ್‌ ಅವಧಿಯ ಮುಂಗಾರಿನ ಬರಗಾಲದಲ್ಲಿ ಪರಿಹಾರ ನೀಡಿತ್ತು. 2014 ರ ಏಪ್ರಿಲ್‌ನಿಂದ ಇನ್‌ಪುಟ್‌ ಸಬ್ಸಿಡಿ ಪಾವತಿ ಶುರುವಾಗಿತ್ತು. ಅದಕ್ಕೆ ತೆಗೆದುಕೊಂಡ ಅವಧಿ 9 ತಿಂಗಳು,

2014-15 ರ ಸಾಲಿನಲ್ಲಿ ಇದೇ ಸಿದ್ದರಾಮಯ್ಯ ಸರ್ಕಾರ 2014ರ ಜುಲೈ-ಆಗಸ್ಟ್‌ ಅವಧಿಯ ಬರಗಾಲಕ್ಕೆ ಪರಿಹಾರ ನೀಡಲು, 2015 ಮಾರ್ಚ್‌ನಿಂದ ಇನ್‌ಪುಟ್‌ ಸಬ್ಸಿಡಿ ಪಾವತಿ ಶುರು ಮಾಡಿತ್ತು. ಅಂದರೆ ಇದಕ್ಕೆ ತೆಗೆದುಕೊಂಡ ಅವಧಿ 8 ತಿಂಗಳು! ಈ ಬಾರಿಯೂ ಪರಿಹಾರ ಕೊಡುವಲ್ಲಿ ಕಾಂಗ್ರೆಸ್‌ ಸರ್ಕಾರ ಬಹಳ ತಡ ಮಾಡಿದೆ. ಜೂನ್ ತಿಂಗಳಿನಲ್ಲಿ ಆರಂಭವಾದ ಬರಕ್ಕೆ ಸಂಕ್ರಾಂತಿ ಬಂದರೂ ಇನ್ನೂ ಒಂದು ನಯಾ ಪೈಸೆ ನೆರವು ನೀಡಿಲ್ಲ.

2019-20 ನೇ ಸಾಲಿನಲ್ಲಿ ಬಿಜೆಪಿ ಸರ್ಕಾರವಿದ್ದಾಗ, 2019ರ ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ಪ್ರವಾಹ ವಿಕೋಪ ಉಂಟಾಗಿತ್ತು. ಆಗ 2019ರ ಅಕ್ಟೋಬರ್‌ನಿಂದ ಇನ್‌ಪುಟ್‌ ಸಬ್ಸಿಡಿ ಪಾವತಿ ಶುರು ಮಾಡಲಾಗಿತ್ತು. ಅಂದರೆ ತೆಗೆದುಕೊಂಡ ಅವಧಿ ಕೇವಲ 2 ತಿಂಗಳು. 2020-21 ರ ಸಾಲಿನಲ್ಲಿ, 2020ರ ಆಗಸ್ಟ್‌-ಅಕ್ಟೋಬರ್‌ನಲ್ಲಿ ಪ್ರವಾಹ ಉಂಟಾಗಿತ್ತು. ಆಗ ಅಕ್ಟೋಬರ್‌ನಿಂದಲೇ ಪರಿಹಾರ ವಿತರಣೆ ಶುರುವಾಗಿತ್ತು ತೆಗೆದುಕೊಂಡ ಅವಧಿ 2 ತಿಂಗಳು.

2021-22 ನೇ ಸಾಲಿನಲ್ಲಿ, 2021ರ ಆಗಸ್ಟ್‌ನಲ್ಲಿ ಪ್ರವಾಹವಾದಾಗ, ಸೆಪ್ಟೆಂಬರ್‌ನಿಂದಲೇ ಪರಿಹಾರ ವಿತರಣೆ ಶುರುವಾಯಿತು. ಅದಕ್ಕೆ ತೆಗೆದುಕೊಂಡ ಅವಧಿ 2 ತಿಂಗಳು. ಇದೇ ಸಾಲಿನಲ್ಲಿ, ಮತ್ತೊಮ್ಮೆ ಅಕ್ಟೋಬರ್‌-ನವೆಂಬರ್‌ ನಲ್ಲಿ ಪ್ರವಾಹ ಉಂಟಾಗಿ, ಆಗ ನವೆಂಬರ್‌ ನಿಂದಲೇ ಪರಿಹಾರ ವಿತರಣೆ ಮಾಡಲಾಯಿತು. ಅದಕ್ಕೆ ತೆಗೆದುಕೊಂಡ ಅವಧಿ 1 ತಿಂಗಳು. 2022-23 ನೇ ಸಾಲಿನಲ್ಲಿ, 2022ರ ಮೇ-ಜೂನ್‌-ಜುಲೈ ತಿಂಗಳಲ್ಲಿ ಪ್ರವಾಹವಾದಾಗ ಜುಲೈನಿಂದ ಪರಿಹಾರ ವಿತರಣೆ ಶುರು ಮಾಡಲಾಯಿತು. ಅದಕ್ಕೆ ತೆಗೆದುಕೊಂಡ ಅವಧಿ 1 ತಿಂಗಳು. ಮತ್ತೆ ಇದೇ ಸಾಲಿನಲ್ಲಿ, 2022 ರ ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ಪ್ರವಾಹ ಉಂಟಾಯಿತು. ಆಗ 2 ತಿಂಗಳಲ್ಲಿ ಪರಿಹಾರ ವಿತರಣೆ ಶುರು ಮಾಡಲಾಯಿತು.

ಈ ಎಲ್ಲ ಉದಾಹರಣೆಗಳನ್ನು ನೋಡಿದರೆ, ಒಂದಂತೂ ಸ್ಪಷ್ಟವಾಗುತ್ತದೆ. ಕಷ್ಟ ಕಾಲದಲ್ಲಿ ರೈತರ ನೆರವಿಗೆ ಬರುವುದಕ್ಕಿಂತ ರೈತರ ಕಣ್ಣೀರಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದೇ ಕಾಂಗ್ರೆಸ್ ಸರ್ಕಾರಕ್ಕೆ ಹೆಚ್ಚು ಮುಖ್ಯ ಅನ್ನಿಸುತ್ತಿದೆ. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಅಪಪ್ರಚಾರ ಮಾಡುವ ಸಿದ್ದರಾಮಯ್ಯ ಅವರು ಒಮ್ಮೆ ಅಂಕಿ-ಅಂಶಗಳ ಮೇಲೆ ಕಣ್ಣಾಡಿಸಿದರೆ ಅಂದಿನ UPA ಅಥವಾ ಇಂದಿನ I.N.D.I ಅಲಯನ್ಸ್ ನ ಬಂಡವಾಳ ಬಯಲಾಗುತ್ತದೆ.

2006 ರಿಂದ 2014ರ ಅವಧಿಯಲ್ಲಿ UPA ಸರ್ಕಾರವಿದ್ದಾಗ SDRF ನಡಿ, ಕೇಂದ್ರದ ಪಾಲು 812 ಕೋಟಿ ರೂ. ಹಾಗೂ ರಾಜ್ಯದ ಪಾಲು 271 ಕೋಟಿ ರೂ. ಸಿಕ್ಕಿತ್ತು. ಇದೇ ಅವಧಿಯಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ-NDRF ನಿಂದ ಸಿಕ್ಕಿದ್ದು 3,233 ಕೋಟಿ ರೂ.  2014 ರಿಂದ 2022 ರ ಅವಧಿಯಲ್ಲಿ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕ ಪರಿಹಾರವನ್ನು ಕರ್ನಾಟಕಕ್ಕೆ ಕೊಟ್ಟಿದೆ. ಈ ಅವಧಿಯಲ್ಲಿ SDRF ನಡಿ, ಕೇಂದ್ರದ ಪಾಲು 2,557 ಕೋಟಿ ರೂ. ಹಾಗೂ ರಾಜ್ಯದ ಪಾಲು 852 ಕೋಟಿ ರೂ. ಸಿಕ್ಕಿತ್ತು. ಇದೇ ಅವಧಿಯಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ-NDRF ನಿಂದ ಸಿಕ್ಕಿದ್ದು 11,603 ಕೋಟಿ ರೂ. ಅಂದರೆ UPA ಸರ್ಕಾರವಿದ್ದಾಗ ಕರ್ನಾಟಕಕ್ಕೆ ಸಿಕ್ಕ NDRF ಪರಿಹಾರ 3,233 ಕೋಟಿ ರೂ. ಅದೇ NDA ಸರ್ಕಾರವಿರುವಾಗ ಕರ್ನಾಟಕಕ್ಕೆ ಸಿಕ್ಕಿರುವುದು 11,603 ಕೋಟಿ ರೂ. ಆದ್ದರಿಂದ ಸಿದ್ದರಾಮಯ್ಯ ಅವರು ರೈತರ ವಿಷಯದಲ್ಲಾದರೂ ಸ್ವಲ್ಪ ರಾಜಕೀಯ ಬದಿಗಿಟ್ಟು, ಅನ್ನದಾತರ ನೆರವಿಗೆ ಬರುವತ್ತ ಗಮನ ಹರಿಸಬೇಕೆಂದು ಆಗ್ರಹಿಸುತ್ತೇನೆ. ಇನ್ನೂ ತಡ ಮಾಡಿದರೆ ರೈತರ ಕೆಂಗಣ್ಣಿಗೆ ಗುರಿಯಾಗುವುದು ಗ್ಯಾರೆಂಟಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com