ಹಾಸನ ಟಿಕೆಟ್ ಫೈಟ್ ಗೆ ಹೊಸ ಟ್ವಿಸ್ಟ್: ವರಿಷ್ಠರು ಒಪ್ಪಿದರೆ ಹಾಸನದಿಂದಲೇ ಸ್ಪರ್ಧೆ; ಒಂದೇ ಏಟಿಗೆ 2 ಹಕ್ಕಿ ಹೊಡೆಯಲು ಮುಂದಾದ ರೇವಣ್ಣ

ಪಕ್ಷ ತೀರ್ಮಾನಿಸಿದರೆ  ಹಾಸನ  ಸಹಿತ ಯಾವುದೇ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು  ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ  ಹೇಳುವ ಮೂಲಕ ಟಿಕೆಟ್‌ ಪೈಪೋಟಿಗೆ  ಹೊಸ ಟ್ವಿಸ್ಟ್‌ ಕೊಟ್ಟಿದ್ದಾರೆ.
ಎಚ್.ಡಿ ರೇವಣ್ಣ
ಎಚ್.ಡಿ ರೇವಣ್ಣ

ಹಾಸನ: ಪಕ್ಷ ತೀರ್ಮಾನಿಸಿದರೆ ಹಾಸನ  ಸಹಿತ ಯಾವುದೇ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ  ಹೇಳುವ ಮೂಲಕ ಟಿಕೆಟ್‌ ಪೈಪೋಟಿಗೆ ಹೊಸ ಟ್ವಿಸ್ಟ್‌ ಕೊಟ್ಟಿದ್ದಾರೆ.

ಹಾಸನ ಟಿಕೆಟ್ ವಿಚಾರವಾಗಿ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ ಕುಟುಂಬದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಈ ಬಾರಿ ಹಾಸನ ಟಿಕೆಟ್​ ಭವಾನಿ ರೇವಣ್ಣ ಅವರಿಗೆ ಕೊಡಬೇಕೆಂದು ರೇವಣ್ಣ ಕಟುಂಬ ಪಟ್ಟು ಹಿಡಿದಿದೆ. ಆದ್ರೆ, ಇದಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್​ಡಿ ಕುಮಾರಸ್ವಾಮಿ ಒಪ್ಪುತ್ತಿಲ್ಲ. ಇದರಿಂದ ಕುಟುಂಬದಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಇದರ ಮಧ್ಯೆ ಹೆಚ್​ಡಿ ರೇವಣ್ಣ ಅವರು ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಕ್ಕೆ ನಾನು ರೆಡಿ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇದರೊಂದಿಗೆ ಭವಾನಿಗೆ ಟಿಕೆಟ್​ ಸಿಗಲಿಲ್ಲ ಅಂದ್ರೆ ಹಾಸನ ಕ್ಷೇತ್ರದಿಂದ ತಾವು ಸ್ಪರ್ಧಿಸುವ ಆಸೆ ಹೊರಹಾಕಿದ್ದಾರೆ.

ಹಾಸನ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಹೆಚ್‌.ಡಿ.ರೇವಣ್ಣ ಸ್ಪರ್ಧಿಸಿ ಗೆಲ್ಲಲಿ. 50,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುತ್ತೇನೆ. ಒಂದು ಮತ ಕಡಿಮೆಯಾದ್ರೂ ಮತ್ತೆ ಚುನಾವಣೆಗೆ ಹೋಗುತ್ತೇನೆಂದು ಎಂದು ಬಿಜೆಪಿ ಶಾಸಕ ಪ್ರೀತಂಗೌಡ ಸವಾಲು ಹಾಕಿದ್ದರು. ಈ ಸವಾಲನ್ನು ಸ್ವೀಕರಿಸಿರುವ ರೇವಣ್ಣ, ಪಕ್ಷ ಹೇಳಿದ್ರೆ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಕ್ಕೆ ನಾನು ರೆಡಿ. ಶಾಸಕ ಪ್ರೀತಂಗೌಡ ಸವಾಲು ಸ್ವೀಕರಿಸಿದ್ದೇನೆ. ಸ್ಪರ್ಧೆಗೆ ಸಿದ್ಧನಿದ್ದೇನೆ. ಪಕ್ಷ ಹೇಳಿದ್ರೆ ಪ್ರೀತಂಗೌಡ ಸವಾಲು ಸ್ವೀಕರಿಸಲು ಸಿದ್ಧನಿದ್ದೇನೆ ಎಂದು ಘೋಷಣೆ ಮಾಡಿದರು.

ಕೆಲವರ ಸವಾಲು ಸ್ವೀಕರಿಸಬೇಕಲ್ಲಾವೇ. ಕುಮಾರಸ್ವಾಮಿರವರೇ ನಮ್ಮ ನಾಯಕರು, ಅವರು ಹೇಳಿದಂತೆ ಕೇಳುತ್ತೇವೆ. ಹಾಸನ ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರ ಗೆಲ್ಲಬೇಕೆಂಬುವುದು ನಮ್ಮ ಗುರಿ ಎಂದು ಹೇಳುವ ಮೂಲಕ ಹಾಸನ ಹಾಗೂ ಹೊಳೆನರಸೀಪುರದಲ್ಲಿ ಸ್ಪರ್ಧಿಸಿ ಗೊಂದಲ ನಿವಾರಣೆಗೆ ತಂತ್ರ ಹೆಣೆದಿದ್ದಾರೆ ಎನ್ನಲಾಗಿದೆ.

ಎಚ್​ ಡಿ ರೇವಣ್ಣ ಅವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಮುಂದಾಗಿದ್ದಾರೆ. ರಾಜಕೀಯ ವೈರಿ ಪ್ರೀತಂಗೌಡ ಅವರನ್ನು ಸೋಲಿಸಲೇಬೇಕೆಂದು ರೇವಣ್ಣ ಹಠಕ್ಕೆ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಕುಟುಂಬಕ್ಕೆ ಟಿಕೆಟ್ ಸಿಕ್ಕರೆ ಮಾತ್ರ ಪ್ರೀತಂ ಸೋಲಿಸಲು ಸುಲಭ ಎನ್ನುವುದು ರೇವಣ್ಣ ಅಭಿಪ್ರಾಯವಾಗಿದೆ. ಇದರಿಂದ ಭವಾನಿ ರೇವಣ್ಣಗೆ ಟಿಕೆಟ್​ ಬೇಕೆಂದು ಪಟ್ಟು ಹಿಡಿದಿದ್ದಾರೆ. ಆದ್ರೆ, ಇದಕ್ಕೆ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕಾಗಿಯೇ ರೇವಣ್ಣ ಹಾಸನದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಟಿಕೆಟ್ ಕುಟುಂಬಕ್ಕೆ ಸಿಕ್ಕಂತೆ ಆಗುತ್ತೆ. ಪ್ರೀತಂಗೌಡ ಅವರನ್ನು ಸೋಲಿಸಲು ಸುಲಭವಾಗುತ್ತೆ ಎನ್ನುವ ಪ್ಲಾನ್​ನಲ್ಲಿ ರೇವಣ್ಣ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com