ಮಾರ್ಚ್ 1 ರಿಂದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ: 150 ರೋಡ್ ಶೋ, 8,000 ಕಿ.ಮೀ ದೂರ ಕ್ರಮಿಸುವ ನಿರೀಕ್ಷೆ

224 ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಕೋಟಿ ಜನರನ್ನು ತಲುಪುವ ಗುರಿಯೊಂದಿಗೆ ಬಿಜೆಪಿ ಮಾರ್ಚ್ 1 ರಿಂದ ರಾಜ್ಯಾದ್ಯಂತ ನಾಲ್ಕು ವಿವಿಧ ದಿಕ್ಕುಗಳಿಂದ ವಿಜಯ ಸಂಕಲ್ಪ ಯಾತ್ರೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. 
ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಬಸ್
ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಬಸ್

ಬೆಂಗಳೂರು: 224 ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಕೋಟಿ ಜನರನ್ನು ತಲುಪುವ ಗುರಿಯೊಂದಿಗೆ ಬಿಜೆಪಿ ಮಾರ್ಚ್ 1 ರಿಂದ ರಾಜ್ಯಾದ್ಯಂತ ನಾಲ್ಕು ವಿವಿಧ ದಿಕ್ಕುಗಳಿಂದ ವಿಜಯ ಸಂಕಲ್ಪ ಯಾತ್ರೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. 

ಈ ಯಾತ್ರೆಯಲ್ಲಿ ರಾಜ್ಯ ಮತ್ತು ಕೇಂದ್ರದ ಹಿರಿಯ ನಾಯಕರ ನೇತೃತ್ವದಲ್ಲಿ ತಲಾ ನಾಲ್ಕು ತಂಡಗಳು 150 ಕ್ಕೂ ಹೆಚ್ಚು ರೋಡ್ ಶೋ 8,000 ಕಿ.ಮೀ. ದೂರ ಕ್ರಮಿಸುವ ನಿರೀಕ್ಷೆಯಿದೆ.  ಮಾರ್ಚ್ 20 ರಂದು ಯಾತ್ರೆ ಮುಕ್ತಾಯವಾಗಲಿದ್ದು, ಮಾರ್ಚ್ 25 ರಂದು ದಾವಣಗೆರೆಯಲ್ಲಿ ನಡೆಯಲಿರುವ ಮೆಗಾ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ  10 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ನೀರಾವರಿ ಸಚಿವ ಗೋವಿಂದ ಕಾರಜೋಳ ಮತ್ತು ಕಂದಾಯ ಸಚಿವ ಆರ್.ಅಶೋಕ ಚಾಮರಾಜನಗರ, ಬೆಳಗಾವಿ, ಬೀದರ್ ಮತ್ತು ಬೆಂಗಳೂರಿನಿಂದ ಪ್ರತಿ ತಂಡವನ್ನು ಮುನ್ನಡೆಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

30 ಅಡಿ ಎತ್ತರ ಮತ್ತು ಎಂಟು ಅಡಿ ಅಗಲದ ನಾಲ್ಕು ಬಸ್‌ಗಳನ್ನು ಯಾತ್ರೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಎಸಿ ಬಸ್‌ಗಳ ಮೇಲ್ಭಾಗದಲ್ಲಿ ನಾಯಕರು ನಿಂತು ಭಾಷಣ ಮಾಡುವ ಸ್ಥಳವೂ ಇರುತ್ತದೆ. ಮೊಬೈಲ್ ಚಾರ್ಜ್ ಮಾಡಲು ಸ್ಥಳ, ಹೋಮ್ ಥಿಯೇಟರ್, ಆಡಿಯೊ ಸಿಸ್ಟಮ್ಸ್, ಕ್ಯಾಮೆರಾಗಳು, ಎಲ್ಇಡಿ ಡಿಸ್ಪ್ಲೇ ಮತ್ತು ವೈಫೈ ಸೌಲಭ್ಯ ಮತ್ತು ಪವರ್ ಬ್ಯಾಕ್ ಆಪ್ ಆಗಿ ಜನರೇಟರ್ ಇರುತ್ತದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್,  ಯಾತ್ರೆ  20 ದಿನಗಳಲ್ಲಿ 31 ಜಿಲ್ಲೆಗಳಲ್ಲಿ ಸಂಚರಿಸಲಿದೆ.  150 ಸ್ಥಾನಗಳಲ್ಲಿ ಗೆಲುವು ನಮ್ಮ ಗುರಿಯಾಗಿದ್ದು, ಅದನ್ನು ಸಾಧಿಸುತ್ತೇವೆ ಎಂದು ಹೇಳಿದರು. ಯಾತ್ರೆ ವೇಳೆ ಪ್ರತಿ ತಂಡವು ತಮ್ಮ ಪ್ರದೇಶದ ಮಠಗಳು, ದೇವಾಲಯಗಳು ಮತ್ತು ಇತರ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲಿದೆ. ಈ ಸಂದರ್ಭದಲ್ಲಿ ಬೇರೆ ಪಕ್ಷಗಳ ನಾಯಕರು ಕೂಡ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com