ಕೋಲಾರದಲ್ಲಿ ಸಿದ್ದರಾಮಯ್ಯಗಾಗಿ ವಾಸ್ತು ಪ್ರಕಾರ ಮನೆ, ಕಚೇರಿಗಾಗಿ ಹುಡುಕಾಟ!

ರಾಜ್ಯ ವಿಧಾನಸಭೆ ಚುನಾವಣೆ 2023ರಲ್ಲಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗಾಗಿ ಕಾಂಗ್ರೆಸ್ ಮುಖಂಡರು ಕೋಲಾರದಲ್ಲಿ ವಾಸ್ತು ಇರುವ ಮನೆ ಹಾಗೂ ಕಚೇರಿಗಾಗಿ ಹುಡುಕಾಟ ಆರಂಭಿಸಿದ್ದಾರೆಂದು ತಿಳಿದುಬಂದಿದೆ.
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಕೋಲಾರ: ರಾಜ್ಯ ವಿಧಾನಸಭೆ ಚುನಾವಣೆ 2023ರಲ್ಲಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗಾಗಿ ಕಾಂಗ್ರೆಸ್ ಮುಖಂಡರು ಕೋಲಾರದಲ್ಲಿ ವಾಸ್ತು ಇರುವ ಮನೆ ಹಾಗೂ ಕಚೇರಿಗಾಗಿ ಹುಡುಕಾಟ ಆರಂಭಿಸಿದ್ದಾರೆಂದು ತಿಳಿದುಬಂದಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಎಂಎಲ್‌ಸಿ ಅನಿಲ್ ಕುಮಾರ್ ಅವರು, ಸಿ ಬೈರೇಗೌಡ ನಗರ, ಜಯನಗರ ಮತ್ತು ಇತರ ಸ್ಥಳಗಳಲ್ಲಿ ನಾವು ಕೆಲವು ಮನೆಗಳನ್ನು ಗುರುತಿಸಿದ್ದೇವೆ, ಆದರೆ ಇಲ್ಲಿಯವರೆಗೆ ಯಾವುದನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಹೇಳಿದ್ದಾರೆ.

ಮನೆ ಹಾಗೂ ಕಚೇರಿಯ ಆಯ್ಕೆಯಲ್ಲಿ ಕೆಲ ಷರತ್ತುಗಳನ್ನು ವಿಧಿಸಲಾಗಿದೆ. ಮನೆಯು ಬೆಂಗಳೂರು-ಚೆನ್ನೈ ಹೆದ್ದಾರಿ ಪಕ್ಕದಲ್ಲಿಯೇ ಇರಬೇಕು ಎಂದು ಸೂಚಿಸಲಾಗಿದೆ. ಇದರಿಂದ ಜನರಿಗೆ ತಲುಪಲು ಅನುಕೂಲವಾಗಲಿದೆ. ಅಲ್ಲದೆ, ತಮ್ಮನ್ನು ಭೇಟಿ ಮಾಡಲು ಬರುವ ನಾಯಕರ ವಾಹನ ನಿಲುಗಡೆಗೆ ಸ್ಥಳಾವಕಾಶ, ಮನೆ ನಿರ್ಮಿಸಿಕೊಡಬೇಕು ಎಂಬುದು ಹಾಗೂ ವಾಸ್ತು ಅಂಶವನ್ನು ಗಮನದಲ್ಲಿಟ್ಟುಕೊಂಡು ಹುಡುಕಾಟ ನಡೆಸುವಂತೆ ಸೂಚಿಸಿದ್ದಾರೆಂದು ತಿಳಿಸಿದ್ದಾರೆ.

ನಾಯಕರ ಜತೆ ಸಭೆ ನಡೆಸಲು ಮನೆಯೂ ವಿಶಾಲವಾಗಿರಬೇಕು, ಬಾಡಿಗೆ ವಿಚಾರದಲ್ಲಿ ಯಾವುದೇ ನಿರ್ಬಂಧಗಳಿಲ್ಲ. ಇಲ್ಲಿಯವರೆಗೆ ನೋಡಿದ ಮನೆಗಳ ಬಾಡಿಗೆ 25 ಸಾವಿರ ರೂ.ಗಳಷ್ಟಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಹೆಚ್ಚಿನ ಮನೆಗಳನ್ನು ಪಟ್ಟಿ ಮಾಡಲಾಗುವುದು ಮತ್ತು ಒಂದು ವಾರದೊಳಗೆ ಮನೆ ಹಾಗೂ ಕಚೇರಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದಿದ್ದಾರೆ.

ಮನೆ ಹಾಗೂ ಕಚೇರಿಗಳ ಆಯ್ಕೆ ಬಳಿಕ, ಇದರ ಚಿತ್ರಗಳನ್ನು ಸಿದ್ದರಾಮಯ್ಯ ಮತ್ತು ಕೆಲವು ಮುಖಂಡರಿಗೆ ಕಳುಹಿಸಲಾಗುವುದು. ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರು, ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಕುಟುಂಬದೊಂದಿಗೆ ಹೊಸ ಮನೆಗೆ ಪೂಜೆ ನೆರವೇರಿಸಲಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com