ಮೇಲ್ಮನೆಯಲ್ಲಿ ಗ್ಯಾರಂಟಿ ಗಲಾಟೆ; ಕಲಾಪಕ್ಕೆ ಅಡ್ಡಿ, ಬಿಜೆಪಿ ಧರಣಿ, ಹೊರಟ್ಟಿ ಸಂಧಾನ

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಜಾರಿ ವಿಧಾನ ಪರಿಷತ್ ಕಲಾಪದಲ್ಲಿ ಭಾರಿ ಗಲಾಟೆಗೆ ಕಾರಣವಾಗಿದ್ದು, ಬಿಜೆಪಿ ಧರಣಿಗೆ ಕಾರಣವಾಗಿತ್ತು.
ಮೇಲ್ಮನೆಯಲ್ಲಿ ಗ್ಯಾರಂಟಿ ಗಲಾಟೆ
ಮೇಲ್ಮನೆಯಲ್ಲಿ ಗ್ಯಾರಂಟಿ ಗಲಾಟೆ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಜಾರಿ ವಿಧಾನ ಪರಿಷತ್ ಕಲಾಪದಲ್ಲಿ ಭಾರಿ ಗಲಾಟೆಗೆ ಕಾರಣವಾಗಿದ್ದು, ಬಿಜೆಪಿ ಧರಣಿಗೆ ಕಾರಣವಾಗಿತ್ತು.

ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡುವ ಸಾಮರ್ಥ್ಯವಿಲ್ಲದೆ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ವಿನಾ ಕಾರಣ ಧರಣಿ, ಪ್ರತಿಭಟನೆ ಮಾಡುವುದು ಸರಿಯಲ್ಲ ಎನ್ನುವ ಕಂದಾಯ ಸಚಿವ ಕೃಷ್ಣಬೈರೇಗೌಡರ ಹೇಳಿಕೆಗೆ ಪ್ರತಿಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಜಟಾಪಟಿಗೆ ಇಳಿಯುತ್ತಿದ್ದಂತೆಯೇ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ, ಕೋಲಾಹಲಕ್ಕೆ ವಿಧಾನಪರಿಷತ್ ವೇದಿಕೆಯಾಯಿತು. 

ಈ ಮಧ್ಯೆ ಯಾವುದೇ ಷರತ್ತಿಲ್ಲದೆ ಗ್ಯಾರಂಟಿ ಯೋಜನೆ ಜಾರಿಗೆ ತರುವಂತೆ ಒತ್ತಾಯಿಸಿ ವಿಧಾನಸಭೆಯಲ್ಲಿ ಪ್ರತಿಪಕ್ಷ ನಡೆಸುತ್ತಿದ್ದ ಧರಣಿಯನ್ನು ಬಿಜೆಪಿ ವಾಪಸ್ ಪಡೆದುಕೊಂಡಿದ್ದರಿಂದ ಇಂದು ಸುಗಮ ಕಲಾಪ ನಡೆದಿದೆ.ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆಯೇ ಪಂಚಖಾತ್ರಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಅನುಷ್ಠಾನ ಮಾಡಲು ವಿಳಂಬ ಧೋರಣೆ ತಾಳಿದೆ ಎಂದು ಆರೋಪಿಸಿ ನಿನ್ನೆಯಿಂದ ಸದನದ ಬಾವಿಗಿಳಿದು ಧರಣಿ ನಡೆಸುತ್ತಿರುವ ಬಿಜೆಪಿ ಸದಸ್ಯರು ಇಂದೂ ಕೂಡಾ ಧರಣಿ ಮುಂದುವರೆಸಿದರು. ಇದರಿಂದ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ, ಕೋಲಾಹಲ ನಡೆದು ಕಲಾಪವನ್ನು ಕೆಲ ಕಾಲ ಮುಂದೂಡಲಾಯಿತು.ಇದಕ್ಕೂ ಮುನ್ನ ಕಲಾಪದ ಆರಂಭದಲ್ಲಿ ಸಭಾಪತಿ ಬಸವರಾಜಹೊರಟ್ಟಿ, ಧರಣಿನಿರತ ಬಿಜೆಪಿ ಸದಸ್ಯರು ತಮ್ಮ ತಮ್ಮ ಸ್ಥಳಗಳಿಗೆ ತೆರಳಿ ಪ್ರಶ್ನೋತ್ತರ ಕೈಗೊಳ್ಳಬೇಕಾಗಿದೆ. 

ನಿನ್ನೆ ಇಡೀ ದಿನದ ಕಲಾಪ ವ್ಯರ್ಥವಾಗಿದೆ. ಒಂದು ದಿನದ ಕಲಾಪ ನಡೆಯದಿದ್ದರೆ ಕೋಟ್ಯಂತರ ರೂ. ವ್ಯಯವಾಗಲಿದೆ. ಹೀಗಾಗಿ ಸಹಕರಿಸಿ ಎಂದು ವಿರೋಧ ಪಕ್ಷಗಳ ಸದಸ್ಯರಿಗೆ ಮನವಿ ಮಾಡಿದರು.ಆಗ ಮಧ್ಯ ಪ್ರವೇಶಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಹೊಸ ಸರ್ಕಾರ ಜನರ ನಿರೀಕ್ಷೆಯಂತೆ ಕೆಲಸ ಮಾಡುತ್ತಿದೆ. ಅದಕ್ಕೆ ವಿರೋಧ ಪಕ್ಷಗಳ ಸದಸ್ಯರ ಬೆಂಬಲವೂ ಬೇಕು. ಅದನ್ನು ಬಿಟ್ಟು ಪ್ರತಿಷ್ಠೆಗಳಿಗೆ ಧರಣಿ ನಡೆಸುವುದು ಶೋಭೆ ತರುವುದಿಲ್ಲ. ಜನರ ಕಷ್ಟ ಸುಖಗಳ ಬಗ್ಗೆ ಚರ್ಚೆಯಾಗಬೇಕಾಗಿದೆ. ಸರ್ಕಾರಕ್ಕೆ ಅಗತ್ಯ ಸಲಹೆ ಸೂಚನೆ ನೀಡುತ್ತಾರೆ ಎನ್ನುವ ಭಾವನೆ ನಮ್ಮದು ಎಂದರು.ಮುಖ್ಯಮಂತ್ರಿ ಅಷ್ಟೇ ವಿರೋಧ ಪಕ್ಷದ ನಾಯಕನ ಸ್ಥಾನ ಅಷ್ಟೇ ಮುಖ್ಯ. ವಿರೋಧ ಪಕ್ಷದ ನಾಯಕನನ್ನು ಶ್ಯಾಡೋ ಸಿಎಂ ಎನ್ನುತ್ತಾರೆ. ನಿಮಗೆ ಆ ಸ್ಥಾನವನ್ನು ಭರ್ತಿ ಮಾಡಲು ಆಗಿಲ್ಲ ಎಂದು ಪ್ರತಿಪಕ್ಷದ ಸದಸ್ಯರನ್ನು ಛೇಡಿಸಿದರು.

ಆಗ ಮಧ್ಯ ಪ್ರವೇಶಿಸಿದ ಬಿಜೆಪಿ ಸದಸ್ಯ ಕೋಟಾ ಶ್ರೀನಿವಾಸಪೂಜಾರಿ, ಕೃಷ್ಣಬೈರೇಗೌಡರ ಹೇಳಿಕೆಗ ಆಕ್ಷೇಪ ವ್ಯಕ್ತಪಡಿಸಿದರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ ನಡೆಯಿತು.ಧರಣಿ ನಿರತ ಬಿಜೆಪಿ ಸದಸ್ಯರು ಆಡಳಿತ ಪಕ್ಷಕ್ಕೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ಹಂತದಲ್ಲಿಮತ್ತೆ ಮಾತು ಮುಂದುವರೆಸಿದ ಸಚಿವ ಕೃಷ್ಣಬೈರೇಗೌಡ, ಸಭಾಪತಿಯವರೇ ನೀವು ಸದನದಲ್ಲಿ ಅತ್ಯಂತ ಹಿರಿಯರಾಗಿದ್ದೀರಿ. 36 ವರ್ಷಗಳ ಅನುಭವ ಈ ಸದನದಲ್ಲಿದೆ. ಇಷ್ಟು ವರ್ಷದ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಿಲ್ಲದೆ ಸದನ ನಡೆದಿದೆಯಾ ನೀವೇ ಹೇಳಿ ಎಂದು ಸಭಾಪತಿ ಬಸವರಾಜಹೊರಟ್ಟಿ ಅವರನ್ನು ಪ್ರಶ್ನಿಸಿದರು.

ಆಗ ಬಿಜೆಪಿಯ ಕೋಟಾ ಶ್ರೀನಿವಾಸಪೂಜಾರಿ, ಅನುಭವಿಯಾದ ಸಚಿವ ಕೃಷ್ಣಬೈರೇಗೌಡ ಅವರು ತಮ್ಮ ಅನುಭವದ ಮಾತು ಆಡುತ್ತಾರೆ ಎಂದು ತಿಳಿದಿದ್ದೆ. ಆದರೆ, ವಿರೋಧ ಪಕ್ಷಗಳ ಸದಸ್ಯರನ್ನು ಛೇಡಿಸುವ ಕೆಲಸ ಮಾಡುತ್ತಿದ್ದಾರೆ. ಸಲಹೆ, ಸೂಚನೆ ನೀಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದೆ. ಅವರ ಮಾತುಗಳು ಪ್ರತಿಪಕ್ಷಗಳ ಸದಸ್ಯರನ್ನು ಕೆರಳಿಸುವಂತಿದೆ ಎಂದು ಹೇಳಿದರು.ಈ ಹಂತದಲ್ಲಿ ಪ್ರತಿಪಕ್ಷದ ಸದಸ್ಯರು ಮತ್ತೆ ಗದ್ದಲ ಎಬ್ಬಿಸಿದರು. ಆಗ ಸಚಿವ ಎಂ.ಸಿ. ಸುಧಾಕರ್, ಆಡಳಿತ ಪಕ್ಷದ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಯು.ಬಿ. ವೆಂಕಟೇಶ್ ಸೇರಿದಂತೆ ಹಲವು ಸದಸ್ಯರು ಕೃಷ್ಣಬೈರೇಗೌಡರ ನೆರವಿಗೆ ಬಂದು ಅವರ ಕ್ರಮವನ್ನು ಸಮರ್ಪಿಸಿಕೊಂಡರು.

ಹೊರಟ್ಟಿ ಸಂಧಾನ, ಧರಣಿ ಹಿಂಪಡೆದ ಬಿಜೆಪಿ
ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿ ಇಂದು ಕೂಡ ಬಿಜೆಪಿ ವಿಧಾನ ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಿದರು. ಸಚಿವ ಕೃಷ್ಣಬೈರೇಗೌಡ, ನಿನ್ನೆ ಇಡೀ ದಿನದ ಕಲಾಪ ವ್ಯರ್ಥವಾಗಿದೆ. ಕೋಟ್ಯಂತರ ರೂ. ವ್ಯಯವಾಗಿದೆ. ಸರ್ಕಾರಕ್ಕೆ ಸಲಹೆ, ಸೂಚನೆ ನೀಡುವುದನ್ನು ಬಿಟ್ಟು ವಿನಾ ಕಾರಣ ಧರಣಿ, ಪ್ರತಿಭಟನೆ ನಡೆಸುತ್ತಿದ್ದಾರೆ. ಜನರ ಬಗ್ಗೆ ಕಿಂಚತ್ತೂ ಕಾಳಜಿ ಇಲ್ಲ. ಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.ಈ ಹಂತದಲ್ಲಿ ಮತ್ತೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ, ಗದ್ದಲ, ಕೋಲಾಹಲ ನಡೆಯಿತು.

ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಧ್ಯ ಪ್ರವೇಶಿಸಿ, ನಿಯಮಾವಳಿಯಂತೆ ಪ್ರಶ್ನಾವಳಿಯನ್ನು ಕೈಗೆತ್ತಿಕೊಳ್ಳಿ. ನಿನ್ನೆ ಕೂಡಾ ಸದನ ವ್ಯರ್ಥವಾಗಿದೆ ಎಂದು ಸಭಾಪತಿಗಳಿಗೆ ಮನವಿ ಮಾಡಿ, ಧರಣಿ ನಿರತ ಬಿಜೆಪಿ ಸದಸ್ಯರೂ ಕೂಡಾ ಧರಣಿ ವಾಪಸ್ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.ಈ ಹಂತದಲ್ಲಿ ಮತ್ತೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ, ಆರೋಪ-ಪ್ರತ್ಯಾರೋಪ ನಡೆದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜಹೊರಟ್ಟಿ ಕಲಾಪವನ್ನು ಕೆಲಕಾಲ ಮುಂದೂಡಿದ ಬಳಿಕ ಕಲಾಪ ಆರಂಭಗೊಂಡಾಗ ಧರಣಿ ವಾಪಸ್ ಪಡೆಯುವಂತೆ ಸಭಾಪತಿ ಬಸವರಾಜ ಹೊರಟ್ಟಿ ಮಾಡಿಕೊಂಡ ಮನವಿ ಸ್ಪಂದಿಸಿದ ಬಿಜೆಪಿ ಸದಸ್ಯರು ಧರಣಿ ವಾಪಸ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com