ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ವಿಧಾನಸಭೆಯಲ್ಲಿ ಗುರುವಾರ ಏಕವಚನದಲ್ಲೇ ಪರಸ್ಪರ ಬೈದಾದಿಕೊಂಡರು. ಮಂಡ್ಯ ಜಿಲ್ಲೆಯ ಕೆಎಸ್ ಆರ್ ಟಿಸಿ ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣ ಕುರಿತ ಚರ್ಚೆ ವೇಳೆ ಇಬ್ಬರು ನಾಯಕರು ವೈಯಕ್ತಿಕವಾಗಿ ವಾಗ್ದಾಳಿ ನಡೆಸಿದ್ದು, ಸದನ ಕೆಲಕಾಲ ರಣಾಂಗಣವಾಗಿ ಮಾರ್ಪಟ್ಟಿತು.
ಅಧಿಕಾರ ಇಲ್ಲ ಅಂದ್ರೆ ಕುಮಾರಸ್ವಾಮಿ ನನ್ನ ಬಳಿ ಫೈಲ್, ಸಿಡಿ. ಫೆನ್ ಡ್ರೈವ್ ಇದೆ ಎನ್ನುತ್ತಾರೆ. ಇದನೆಲ್ಲ ಇಟ್ಟುಕೊಂಡು ತೇಜೋವಧೆ ಮಾಡುವುದನ್ನು ಬಿಟ್ಟುಬಿಡಿ ಎಂದು ಹೇಳಿದ ಚಲುವರಾಯಸ್ವಾಮಿ, ಸಿದ್ದರಾಮಯ್ಯ ತಾನಾಗಿಯೇ ಜೆಡಿಎಸ್ ಬಿಟ್ಟು ಹೋಗಲಿಲ್ಲ, ಅವರನ್ನು ಪಕ್ಷದಿಂದ ಹೊರ ಹಾಕಲಾಯಿತು. ಹಿಂದಿನ ಚರಿತ್ರೆ ಬಗ್ಗೆ ಮಾತನಾಡಲು ಅವಕಾಶ ನೀಡಿದರೆ ಎಲ್ಲವನ್ನೂ ಬಿಚ್ಚಿಡುತ್ತೇವೆ ಎಂದರು.
ಚಲುವರಾಯಸ್ವಾಮಿ ಅವರ ಹೇಳಿಕೆಯಿಂದ ಆಕ್ರೋಶಗೊಂಡ ಕುಮಾರಸ್ವಾಮಿ, ನನ್ನ ಜೀವನದಲ್ಲಿ ಲಕ್ಷಾಂತರ ಜೀವಗಳನ್ನು ಉಳಿಸಿದ್ದೇನೆ. ಇವರ ರೀತಿ ಕೊಲೆಗಡುಕ ರಾಜಕೀಯ ಮಾಡಿಲ್ಲ ಎಂದಿದ್ದಕ್ಕೆ ಅವರ ವಿರುದ್ಧ ಕಾಂಗ್ರೆಸ್ ಸದಸ್ಯರು ಮುಗಿ ಬಿದ್ದರು. ನಮ್ಮ ಹಂಗಿನಲ್ಲಿ ನೀವು ಮುಖ್ಯಮಂತ್ರಿ ಆಗಿದ್ದು ಎಂದು ಚಲುವರಾಯಸ್ವಾಮಿ ಮತ್ತು ಬಾಲಕೃಷ್ಣ ಕುಟುಕಿದರು.
ಈ ಸದನ ನಿಮ್ಮಪ್ಪಂದು ಅಲ್ಲ. ಮಂತ್ರಿ ಆಗಬೇಕೆಂದು ಆರು ತಿಂಗಳು ಏನೆಲ್ಲ ಮಾಡಿದರು ಎಂಬುದು ಗೊತ್ತಿದೆ ಎಂದು ಕುಮಾರಸ್ವಾಮಿ ಹೇಳಿದಾಗ, ಸದನ ನಿಮ್ಮಪ್ಪಂದೂ ಅಲ್ಲ, ನಮ್ಮ ಅಪ್ಪಂದೂ ಅಲ್ಲ, ಆರೂವರೆ ಕೋಟಿ ಜನರದ್ದು ಎಂದ ಚಲುವರಾಯ ಸ್ವಾಮಿ ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಚಲುವರಾಯಸ್ವಾಮಿ ಜೊತೆಗೆ ಕೆ.ಎಂ. ಶಿವಲಿಂಗೇಗೌಡ, ನರೇಂದ್ರಸ್ವಾಮಿ, ಬಾಲಕೃಷ್ಣ ಮತ್ತಿತರರು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ನಂತರ ಚಲುವರಾಯಸ್ವಾಮಿ ವಾಗ್ದಾಳಿ ಬಳಿಕ ಸಿಎಂ ಸಿದ್ದರಾಮಯ್ಯ ಅವರ ಮುಖ ನೋಡಿದ ಕುಮಾರಸ್ವಾಮಿ, ಶೇಕ್ ಹ್ಯಾಂಡ್, ಹುಸಿ ನಗು ಬೇರೆ, ಇದಕ್ಕೆಲ್ಲ ಕೇರ್ ಮಾಡೊಲ್ಲ. ನಮ್ಮಲ್ಲಿದ್ದವರನ್ನು ಎಳೆದುಕೊಂಡು ಆಟ ಆಡುತ್ತಿದ್ದೀರಾ, ನಮಗೂ ಆಟ ಆಡಲು ಬರುತ್ತದೆ ಎಂದರು. ಇದರಿಂದ ಗರಂ ಆದ ಸಿದ್ದರಾಮಯ್ಯ, ಏಯ್ ನಿಮಗೆ ಹೆದರಲ್ಲ, ನಾನೂ ಕೇರ್ ಮಾಡಲ್ಲ. ನಿಮ್ಮನ್ನು ನೋಡಿ ಹೆದರುವುದು ಇಲ್ಲ ಎಂದರು. ಈ ವೇಳೆ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದ ಹಲವು ಸದಸ್ಯರು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
Advertisement