2024ರ ಲೋಕಸಭೆ ಚುನಾವಣೆಗೆ ಬಿಜೆಪಿ ತಂತ್ರ: ರಾಜ್ಯದಾದ್ಯಂತ ಪ್ರವಾಸಕ್ಕೆ ಕಮಲ ಪಾಳಯ ಮುಂದು!

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ, ಇದೀಗ 2024ರ ಲೋಕಸಭೆ ಚುನಾವಣೆಯತ್ತ ಗಮನಹರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ, ಇದೀಗ 2024ರ ಲೋಕಸಭೆ ಚುನಾವಣೆಯತ್ತ ಗಮನಹರಿಸಿದೆ.

ಲೋಕಸಭಾ ಚುನಾವಣೆಗೆ ತಂತ್ರ ರೂಪಿಸಲು ಮುಂದಾಗಿರುವ ರಾಜ್ಯದ ಕಮಲ ಪಾಳಯದ ನಾಯಕರು, ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲು ಮುಂದಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಆರ್.ಅಶೋಕ, ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಸೇರಿದಂತೆ ಬಿಜೆಪಿಯ ನಾಲ್ಕೈದು ತಂಡಗಳು ರಾಜ್ಯಾದ್ಯಂತ ಪ್ರವಾಸ ಆರಂಭಿದ್ದಾರೆ. ಈ ಮೂಲಕ ಪಕ್ಷದ ಬಲ ಹೆಚ್ಚಿಸಲು ಮುಂದಾಗಿದ್ದಾರೆ.

ಪಕ್ಷದ ಕಾರ್ಯಕರ್ತರು ಮತ್ತು ಜಿಲ್ಲಾ ನಾಯಕರನ್ನು ಭೇಟಿ ಮಾಡಲು ತಲಾ ಎರಡು ತಂಡಗಳಲ್ಲಿ ಹೋಗುವುದಾಗಿ ಬಿಜೆಪಿ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

ಈಗಾಗಲೇ ಪೂರ್ವಭಾವಿ ಸಭೆಗಳು ನಡೆದಿದ್ದು, ಅಂತಿಮ ಸಭೆಯಲ್ಲಿ ಯಾವ ನಾಯಕರು ಯಾವ ಕ್ಷೇತ್ರಗಳಿಗೆ ಹೋಗುತ್ತಾರೆ ಎಂಬುದನ್ನು ಶೀಘ್ರದಲ್ಲೇ ನಿರ್ಧರಿಸುವ ಸಾಧ್ಯತೆಗಳಿವೆ. ಪ್ರತಿ ತಂಡವು ಆರು ಜಿಲ್ಲೆಗಳನ್ನು ಕವರ್ ಮಾಡುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಈ ರಾಜ್ಯ ಪ್ರವಾಸದೊಂದಿಗೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಲಿಂಗಾಯತ ಸಮುದಾಯದೊಂದಿಗೆ ಇಲ್ಲ ಎಂಬ ಭಾವನೆಯನ್ನು ಹೋಗಲಾಡಿಸಲು ತಂಡಗಳು ಪ್ರಯತ್ನ ನಡೆಸಲಿದೆ ಎಂದು ಬಿಜೆಪಿ ನಾಯಕ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ.

ಪಕ್ಷದ ಮರುಸಂಘಟನೆ, ಕಾರ್ಯತಂತ್ರ ಹಾಗೂ ಹೋರಾಟಕ್ಕೆ ಸಮಯ ಬಂದಿದೆ. ಯಾವ ತಂಡ ಎಲ್ಲಿಗೆ ಭೇಟಿ ನೀಡಲಿದೆ ಎಂಬುದನ್ನು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯಾದ್ಯಂತ ನಮ್ಮ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇವೆಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದಾರೆ.

ಏತನ್ಮಧ್ಯೆ, ಗುರುವಾರ ಬೆಳಗ್ಗೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತು ಇತರರು ಭಾಗವಹಿಸಲಿದ್ದಾರೆ. ಮಧ್ಯಾಹ್ನದ ವೇಳೆಗೆ ಸೋತ ಅಭ್ಯರ್ಥಿಗಳೊಂದಿಗೆ ಮುಖಂಡರು ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಸಭೆ ವೇಳೆ ವಿರೋಧ ಪಕ್ಷದ ನಾಯಕ ಮತ್ತು ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುವ ಕುರಿತು ಪಕ್ಷವು ಕಾರ್ಯಕರ್ತರಿಂದ ಪ್ರತಿಕ್ರಿಯೆಯನ್ನು ಪಡೆಯಲಿದ್ದು, ಬಳಿಕ ಈ ಕುರಿತು ಅಂತಿಮ ನಿರ್ಧಾರಗಳನ್ನು ಪಕ್ಷ ಕೈಗೊಳ್ಳಲಿದೆ ಎನ್ನಲಾಗಿದೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದು, ಹಲವರ ಬೆಂಬಲ ಕೂಡ ಇದೆ ಎಂದು ಹೇಳಲಾಗುತ್ತಿದೆ. ಈ ರೇಸ್ ನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರೂ ಕೂಡ ಕೇಳಿ ಬರುತ್ತಿದೆ.

ಮಂಡ್ಯ ಮತ್ತು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಒಕ್ಕಲಿಗ ನಾಯಕನನ್ನು ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಮಾಡಬಹುದು ಎಂದು ಕೆಲವರು ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡಿದ್ದೇ ಆದರೆ, ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮತ್ತು ಆರ್.ಅಶೋಕ ರೇಸ್ ನಲ್ಲಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com