
ಬೆಂಗಳೂರು: ವಿದ್ಯುತ್ ದರ ಏರಿಕೆ ವಿರೋಧಿಸಿ KCC&I ಕರೆ ನೀಡಿರುವ ಕರ್ನಾಟಕ ಬಂದ್ ಕುರಿತಂತೆ ರಾಜ್ಯಸರ್ಕಾರವನ್ನು ಬಿಜೆಪಿ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆಯನ್ನು ವಿರೋಧಿಸಿ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ (KCC&I) ಜೂನ್ 22 ರಂದು ಒಂದು ದಿನ ಕರ್ನಾಟಕ ಬಂದ್‌ಗೆ ಕರೆ ನೀಡಿದೆ. ಕೂಡಲೇ ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯುವಂತೆ ಜೂ.10 ರಂದು ಕೆಸಿಸಿಐ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವಾರಗಳ ಗಡುವು ವಿಧಿಸಿತ್ತು. ಒಂದು ವೇಳೆ ದರ ಏರಿಕೆಯನ್ನು ಹಿಂಪಡೆಯದೇ ಇದ್ದಲ್ಲಿ ಎಲ್ಲಾ ಕೈಗಾರಿಕೆಗಳನ್ನೂ ಬಂದ್ ಮಾಡಿ ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಿತ್ತು.
ಆದರೆ ರಾಜ್ಯ ಸರ್ಕಾರದ ಜತೆ ಚರ್ಚೆ ನಡೆಸಿ ಮನವರಿಕೆ ಮಾಡಿಕೊಡುವ ಪ್ರಯತ್ನ ವಿಫಲ ಹಿನ್ನಲೆ ಅನಿವಾರ್ಯವಾಗಿ ಸರ್ಕಾರದ ಗಮನ ಸೆಳೆಯಲು ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಬಂಧ್ ಗೆ ಕರೆ ನೀಡಿದೆ.
ಈ ಬೆಳವಣಿಗೆ ಬೆನ್ನಲ್ಲೇ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕೂಡ ತೀವ್ರ ಕಿಡಿಕಾರಿದ್ದು, ಸರ್ಕಾರ ಅಧಿಕಾರಕ್ಕೆ ಬಂದ ತಿಂಗಳೊಳಗೆ ಅದರ ವಿರುದ್ಧ ರಾಜ್ಯ ಬಂದ್‌ಗೆ ಕರೆ ಬಂದಿರುವುದು, ದೇಶದಲ್ಲೇ ಇದೇ ಮೊದಲು ಎಂದು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, 'ಕಿವುಡು #ATMSarkara ಕ್ಕೆ ಜನರ ಕೂಗೂ ಕೇಳುತ್ತಿಲ್ಲ, ಕೈಗಾರಿಕೋದ್ಯಮಿಗಳ ಆಕ್ರೋಶವೂ ಕಾಣುತ್ತಿಲ್ಲ. ಇದೀಗ ಜೂನ್ 22 ಕ್ಕೆ ಚೇಂಬರ್ಸ್ ಆಫ್ ಕಾಮರ್ಸ್ ‘ಕರ್ನಾಟಕ ಬಂದ್’ಗೆ ಕರೆ ನೀಡಿದೆ! ಒಂದು ನೂತನ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ಅದೇ ಸರ್ಕಾರದ ವಿರುದ್ಧ ರಾಜ್ಯ ಬಂದ್‌ಗೆ ಕರೆ ಬಂದಿರುವುದು, ದೇಶದಲ್ಲೇ ಇದೇ ಮೊದಲು! ಮಾನ್ಯ ಸಿಎಂ ಸಿದ್ದರಾಮಯ್ಯ ರವರೇ, ಬಂದ್ ಆಗುವವರೆಗೂ ಕಾದು ಜನಸಾಮಾನ್ಯರಿಗೆ ತೊಂದರೆ ಕೊಡುತ್ತೀರೋ ಅಥವಾ ಮೊದಲೇ ಪರಿಹಾರ ಕೈಗೊಳ್ಳುತ್ತೀರೋ? ಅಥವಾ, ಇದಕ್ಕೂ ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಅವರ ಪರ್ಮಿಷನ್ ಬೇಕೇ? ಎಂದು ಪ್ರಶ್ನೆ ಮಾಡಿದೆ.
Advertisement