ಅಂದು ಲುಂಗಿ ಏರಿಸಿ 10 ಕೆಜಿ ಅಕ್ಕಿ ಕೊಡ್ತೀವಿ ಅಂದ ಸಿದ್ದರಾಮಯ್ಯ ಇಂದು ಜನರಿಗೆ ಮೋಸ ಮಾಡ್ತಿದ್ದಾರೆ: ರಮೇಶ್ ಜಿಗಜಿಣಗಿ

ಕೇಂದ್ರ ಕೊಡ್ತಿದ್ದ 5 ಕೆ.ಜಿ ಅಕ್ಕಿಯನ್ನು ಕಾಂಗ್ರೆಸ್ ನವರು ಪ್ರಸ್ತಾಪ ಮಾಡಲೇ ಇಲ್ಲ ಎಂದು ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ಬಗ್ಗೆ ಸಂಸದ ರಮೇಶ್ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಮೇಶ್ ಜಿಗಜಿಣಗಿ
ರಮೇಶ್ ಜಿಗಜಿಣಗಿ

ವಿಜಯಪುರ: ಅಂದು ಲುಂಗಿ ಏರಿಸಿ 10 ಕೆಜಿ ಅಕ್ಕಿ ಕೊಡ್ತೀವಿ ಅಂತ ಘೋಷಣೆ ಮಾಡಿದ್ದ ಸಿದ್ದರಾಮಯ್ಯ ಇಂದು ಏಕೆ ಮಾತು ತಪ್ಪುತ್ತಿದ್ದಾರೆ. ಸಿದ್ದರಾಮಣ್ಣ ನನ್ನ ಜೊತೆ ಇದ್ದವನು.ಅವ್ನಿಗೆ ಅಷ್ಟೊಂದು ಯೋಚನೆ ಬೇಡವೇ.  ಕೇಂದ್ರ ಕೊಡ್ತಿದ್ದ 5 ಕೆ.ಜಿ ಅಕ್ಕಿಯನ್ನು ಕಾಂಗ್ರೆಸ್ ನವರು ಪ್ರಸ್ತಾಪ ಮಾಡಲೇ ಇಲ್ಲ ಎಂದು ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ಬಗ್ಗೆ ಸಂಸದ ರಮೇಶ್ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಅಕ್ಕಿ ಬಿಟ್ಟು ತಾವೇ 10 ಕೆ.ಜಿ ಕೊಡ್ತೇವೆ ಎನ್ನೋದನ್ನು ಸ್ಪಷ್ಟವಾಗಿ ಹೇಳಿಲ್ಲ, ಇದು ಸಿದ್ದರಾಮಯ್ಯಗಾದ್ರು ತಿಳಿಬಾರ್ದಾ. ಜನರಿಗೆ ಮೋಸ ಮಾಡಿದ್ದಾರೆ. ಎಲೆಕ್ಷನ್‌ನಲ್ಲಿ ಜನರ ಎದುರು ಸ್ಪಷ್ಟತೆ ನೀಡಿಯೇ ಇಲ್ಲ,  ಮುಚ್ಚಿಟ್ಟು ಮೋಸ ಮಾಡಿದ್ದಾರೆ. ಕೇಂದ್ರ 5 ಕೆ.ಜಿ ಕೊಡುತ್ತೆ ಅಂತಾ ಹೇಳಿದ್ರೆ ಮರ್ಯಾದೆ ಹೋಗುತ್ತಿತ್ತಾ ಎಂದು ಪ್ರಶ್ನಿಸಿದರು.

ನಮಗೆ ಬಡವರೂ ಬೇಕು: ಬಿಜೆಪಿಯವರಿಗೇನು ಬಡವರ ಬಗ್ಗೆ ಕಾಳಜಿಯಿಲ್ಲವೇ, ಬಡವರು ನಮಗೂ ಓಟು ಹಾಕಿದ್ದಾರೆ, ಊಟ ಹಾಕಿದ್ದಾರೆ. ಕೋವಿಡ್ ಸಮಯದಲ್ಲಿ ಕೇಂದ್ರದ ಮೋದಿ ಸರ್ಕಾರ ತಿಂಗಳುಗಟ್ಟಲೆ ಉಚಿತವಾಗಿ ಬಡವರಿಗೆ ಅಕ್ಕಿ ಕೊಟ್ಟಿದೆ. ಈಗ ಕಾಂಗ್ರೆಸ್ ನವರು ಕೇಂದ್ರದ ಮೋದಿ ಸರ್ಕಾರ ನಮಗೆ ಅಕ್ಕಿ ಕೊಡುತ್ತಿಲ್ಲ ಎಂದು ಆರೋಪಿಸುವುದು ಎಷ್ಟು ಸರಿ ಎಂದು ಕೇಳಿದರು.

ಕಾಂಗ್ರೆಸ್ ನವರೇ ಈಗ ಹುನ್ನಾರ ನಡೆಸುತ್ತಿದ್ದಾರೆ. 10 ಕೆ.ಜಿ ಅಕ್ಕಿ ಘೋಷಣೆ ಮಾಡೋವಾಗಲೇ ಇದು ನಡೆದಿದೆ. 10 ಕೆ.ಜಿ ಅಕ್ಕಿ ಕೊಡೊಕೆ ನಾವೇನು ಬೇಡ ಅಂದಿಲ್ಲ. ನಮ್ಮದು ಸೇರಿ 10 ಕೆ.ಜಿ ಅಂತಾದ್ರು ಹೇಳಲಿ ಎಂದರು. ಇಲ್ಲಾ ನಾವು ಕೊಡೊದು ಬಿಟ್ಟು 10 ಕೆ.ಜಿ ಅಂತಾನಾದ್ರು ಹೇಳಿ, ಜನರಿಗೆ ಕ್ಲಿಯರ್ ಆಗುತ್ತೆ. ಕಣ್ಣಿಗೆ ಮಣ್ಣು ಎರಿಚೊ ಕೆಲಸ ಮಾಡಬೇಡಿ ಎಂದರು.

ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿದೆ ಎನ್ನುವ ಸಚಿವ ಸತೀಶ್ ಜಾರಕಿಹೊಳಿ ಆರೋಪಕ್ಕೆ ಕಿಡಿಕಾರಿದ ಅವರು, ಸಚಿವ ಸತೀಶ್ ಜಾರಕಿಹೊಳಿ ಬುದ್ಧಿಯೇ ಅಷ್ಟೇ ಇದೆ. ಈ ಆರೋಪದಿಂದ ಯಾವುದೇ ಉಪಯೋಗ ಇಲ್ಲ ಎಂದರು. ನಮ್ಮ ಮೇಲೆ ನೀವು, ನಿಮ್ಮ ಮೇಲೆ ನಾವು ಗೂಬೆ ಕೂರಿಸೋದು ಸರಿಯಲ್ಲ. ಸರ್ವರ್ ಡೌನ್ ಆಗೋಕೆ ನಮ್ಮವರು, ನಮ್ಮ ಕೇಂದ್ರ ಸರ್ಕಾರ ಕಾರಣ ಅಲ್ಲಾ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com