ಕರ್ನಾಟಕ ವಿಧಾನಸಭೆ ಚುನಾವಣೆ: ವಲಸೆ ಮತದಾರರನ್ನು ಓಲೈಸಲು ಇತರ ರಾಜ್ಯಗಳಿಂದ ಯುವ ನಾಯಕರನ್ನು ಕರೆತಂದ ಬಿಜೆಪಿ

ರಾಜ್ಯದಲ್ಲಿ ಕನ್ನಡ ಮಾತನಾಡದ ವಲಸೆ ಮತದಾರರನ್ನು ಓಲೈಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಇತರೆ ರಾಜ್ಯಗಳ ಯುವ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರನ್ನು ನೇಮಿಸಿದೆ.
ಹಾರ್ದಿಕ್ ಪಟೇಲ್
ಹಾರ್ದಿಕ್ ಪಟೇಲ್

ಬೆಂಗಳೂರು: ರಾಜ್ಯದಲ್ಲಿ ಕನ್ನಡ ಮಾತನಾಡದ ವಲಸೆ ಮತದಾರರನ್ನು ಓಲೈಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಇತರೆ ರಾಜ್ಯಗಳ ಯುವ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರನ್ನು ನೇಮಿಸಿದೆ.

ವಿವಿಧ ಕ್ಷೇತ್ರಗಳಲ್ಲಿ ಸುಮಾರು 50 ಕಿರಿಯ ನಾಯಕರನ್ನು ನೇಮಿಸಲಾಗಿದ್ದು, ಅಭ್ಯರ್ಥಿಗಳೊಂದಿಗೆ ಪಕ್ಷದ ಪರ ಪ್ರಚಾರ ನಡೆಸುವಂತೆ ಹೇಳಲಾಗಿದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ. ಈ ಯುವ ನಾಯಕರಲ್ಲಿ ಪಾಟಿದಾರ್ ಚಳವಳಿಯ ನೇತೃತ್ವ ವಹಿಸಿದ್ದ ಗುಜರಾತ್ ಶಾಸಕ ಹಾರ್ದಿಕ್ ಪಟೇಲ್, ವಿಡಿ ಶರ್ಮಾ: ಮಧ್ಯಪ್ರದೇಶ ಬಿಜೆಪಿ ಮುಖ್ಯಸ್ಥ, ಮಹಾರಾಷ್ಟ್ರ ಶಾಸಕ ವಿನೋದ್ ತಾವ್ಡೆ, ಸೂರತ್ ಶಾಸಕ ಪ್ರವೀಣ್ ಘೋಘಾರಿ ಮತ್ತು ಜಾರ್ಖಂಡ್‌ನ ಮನೀಶ್ ಜೈಸ್ವಾಲ್ ಸೇರಿದ್ದಾರೆ.

ಹಿಂದಿ ಮಾತನಾಡುವ ಕೆಲವು ಪ್ರಮುಖ ಕ್ಷೇತ್ರಗಳಾದ ಬಿಟಿಎಂ ಲೇಔಟ್, ಮಹದೇವಪುರ, ಸಿವಿ ರಾಮನ್ ನಗರ, ಬ್ಯಾಟರಾಯನಪುರ ಮತ್ತು ಬೆಂಗಳೂರು ದಕ್ಷಿಣದಲ್ಲಿ ಪಕ್ಷದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಈ ನಾಯಕರು ಬೆಂಗಳೂರಿನಲ್ಲೇ ಬೀಡು ಬಿಟ್ಟಿದ್ದಾರೆ.

ಗುಜರಾತ್ ವಿಧಾನಸಭೆಯ ಸದಸ್ಯ ಹಾರ್ದಿಕ್ ಪಟೇಲ್ ಕಳೆದ 7 ದಿನಗಳಿಂದ ಬೆಂಗಳೂರಿನಲ್ಲಿ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷದ ನಾಯಕತ್ವದಿಂದ ಕರ್ನಾಟಕ ವಿಧಾನಸಭಾ ಚುನಾವಣೆ ಅಂಗವಾಗಿ ಬಿಟಿಎಂ ಲೇಔಟ್ ಕ್ಷೇತ್ರವನ್ನು ಅವರಿಗೆ ನಿಯೋಜಿಸಲಾಗಿದೆ. 

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಬಿಟಿಎಂ ಕ್ಷೇತ್ರದಲ್ಲಿ ಶೇ 25 ಕ್ಕಿಂತ ಹೆಚ್ಚು ಹಿಂದಿ ಮಾತನಾಡುವ ಮತದಾರರಿದ್ದಾರೆ. ಅವರೆಲ್ಲ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಬಯಸಿದ್ದಾರೆ. ನಾವು ಅವರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದೇವೆ ಮತ್ತು ಪ್ರಜ್ಞಾಪೂರ್ವಕವಾಗಿ ಮತ ಚಲಾಯಿಸುವಂತೆ ಕೇಳುತ್ತಿದ್ದೇವೆ ಎಂದರು.

'ಬಿಟಿಎಂ ನಿವಾಸಿಗಳು ಗುಜರಾತ್‌ನಂತಹ ಅಭಿವೃದ್ಧಿಯನ್ನು ಬಯಸುತ್ತಾರೆ' ಮತ್ತು ಪಕ್ಷವು ಕೇವಲ 'ಡಬಲ್ ಎಂಜಿನ್ ಸರ್ಕಾರವನ್ನು ನೋಡುತ್ತಿಲ್ಲ, ಬದಲಿಗೆ ಟ್ರಿಪಲ್ ಎಂಜಿನ್' ಅನ್ನು ನೋಡುತ್ತಿದೆ. ಅಂದರೆ, ಬಿಜೆಪಿಯು ಸ್ಥಳೀಯ, ರಾಜ್ಯ ಮತ್ತು ಕೇಂದ್ರ ಸರ್ಕಾರ ಎಂಬ ಮೂರು ಹಂತಗಳಲ್ಲಿನ ಅಭಿವೃದ್ಧಿಯನ್ನು ನೋಡುತ್ತಿದೆ' ಎಂದರು.

ಮಧ್ಯಪ್ರದೇಶ ಬಿಜೆಪಿ ಮುಖ್ಯಸ್ಥ ವಿಡಿ ಶರ್ಮಾ ಅವರಿಗೆ ಮಲ್ಲೇಶ್ವರಂ ಕ್ಷೇತ್ರವನ್ನು ಹಂಚಿಕೆ ಮಾಡಲಾಗಿದೆ. ತಮ್ಮ ಎರಡು ದಿನಗಳ ಭೇಟಿಯಲ್ಲಿ, 'ನಾವು ಸಣ್ಣ ಗುಂಪುಗಳನ್ನು ರಚಿಸಿದ್ದೇವೆ ಮತ್ತು ಮತದಾರರೊಂದಿಗೆ, ವಿಶೇಷವಾಗಿ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರ ಜೊತೆ ಮಾತುಕತೆ ನಡೆಸಿದ್ದೇವೆ. ತಾವು ಅನೇಕ ಉತ್ತರ ಭಾರತದ ನಿವಾಸಿಗಳು ಮತ್ತು ಉದ್ಯಮಿಗಳೊಂದಿಗೆ ಮಾತನಾಡಿದ್ದೇವೆ. ಅವರೆಲ್ಲರೂ ಬಿಜೆಪಿಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಹೊಂದಿದ್ದಾರೆ' ಎಂದು ಅವರು ಹೇಳಿದರು. 

ಹಿಂದಿ ಮಾತನಾಡುವ ಮತದಾರರ ಮನವೊಲಿಸಲು ಜಾರ್ಖಂಡ್ ಶಾಸಕ ಮನೀಶ್ ಜೈಸ್ವಾಲ್ ಅವರಿಗೆ ಯಶವಂತಪುರ ಕ್ಷೇತ್ರವನ್ನು ನಿಯೋಜಿಸಲಾಗಿದೆ.

ವಲಸಿಗ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಯುವ ನಾಯಕರು ರಾಜ್ಯದ ತಳಮಟ್ಟದ ಕಾರ್ಯಕರ್ತರೊಂದಿಗೆ ಮನೆ ಮನೆಗೆ ಪ್ರಚಾರ ನಡೆಸುತ್ತಿದ್ದಾರೆ ಮತ್ತು ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ತಮಿಳುನಾಡು ಮತ್ತು ಕೇರಳದ ನಾಯಕರನ್ನೂ ನಗರದಲ್ಲಿ ಪ್ರಚಾರಕ್ಕೆ ಅಣಿಗೊಳಿಸಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರು ಬಿಜೆಪಿಗೆ ಮತ ಹಾಕುವಂತೆ ಪತ್ರವನ್ನೂ ಸ್ವೀಕರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com