
ಬೆಂಗಳೂರು: ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ' ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.
'ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ' ಕಾಯಿಲೆಯಿಂದ ಬಳಲುತ್ತಿರುವ ರಾಜ್ಯದ 15 ತಿಂಗಳ ಮೌರ್ಯ ಎಂಬ ಪುಟ್ಟ ಕಂದನ ಚಿಕಿತ್ಸೆಗೆ ನೆರವಾಗುವ ದುಬಾರಿ ಚುಚ್ಚುಮದ್ದನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿದ್ದು, ಇದನ್ನು ಮಾನವೀಯ ನೆಲೆಗಟ್ಟಿನಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಆಮದು ಸುಂಕದಿಂದ ವಿನಾಯಿತಿ ನೀಡುವ ಮೂಲಕ ನಾಡಿನ ಕಂದನ ಪ್ರಾಣ ಉಳಿಸಲು ನೆರವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಮನವಿ ಮಾಡಿದ್ದರು.
ಸಿದ್ದರಾಮಯ್ಯ ಮನವಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಡಾ.ಸಿ. ಎನ್. ಅಶ್ವತ್ಥ ನಾರಾಯಣ, ಜಾಣ ಮರೆವಿನ ಖಾಯಿಲೆಯಿಂದ ಬಳಲುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ, 2021ರ ಅಕ್ಟೋಬರ್ 1ರಿಂದಲೇ 'ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ' ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ಬಗೆಯ ಔಷಧಗಳ ಆಮದು ಸುಂಕ ವಿನಾಯಿತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ, ಮಾರ್ಚ್ 2023 ರಿಂದ ಎಲ್ಲಾ ರೀತಿಯ ಅಪರೂಪದ ಖಾಯಿಲೆಗಳಿಗೆ ಅಗತ್ಯವಾದ ಔಷಧಗಳಿಗೂ ವಿನಾಯಿತಿ ನೀಡಲಾಗುತ್ತಿದೆ. ಮುಖ್ಯಮಂತ್ರಿ ಸ್ಥಾನವನ್ನು ಸುಳ್ಳು ವರದಿ ಮಾಡಲು ಬಳಸಿಕೊಳ್ಳುವುದನ್ನು ಬಿಟ್ಟು, ಕೇಂದ್ರ ಸರ್ಕಾರದ ಉಪಕ್ರಮಗಳ ಬಗ್ಗೆ ನಿರ್ಲಕ್ಷ್ಯ ತೋರದೇ ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಿ ಎಂದಿದ್ದಾರೆ.
Advertisement