ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ಬೇಡ, ಲೋಕಸಭೆ ಚುನಾವಣೆ ಮೇಲೆ ಗಮನ ಹರಿಸಿ: ಸಚಿವರಿಗೆ ಸಿಎಂ, ಡಿಸಿಎಂ ಕ್ಲಾಸ್!

ಬಹಿರಂಗವಾಗಿ ಸಿಎಂ ಗಾದಿ ಬದಲಾವಣೆ ಕುರಿತು ಚರ್ಚೆ ನಡೆಸುತ್ತಿರುವ ಶಾಸಕ ಮತ್ತು ಸಚಿವರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕ್ಲಾಸ್ ತೆಗೆದುಕೊಂಡಿದ್ದು, ಲೋಕಸಭಾ ಚುನಾವಣೆ ಮೇಲೆ ಗಮನ ಕೇಂದ್ರೀಕರಿಸುವಂತೆ ಸೂಚಿಸಿದ್ದಾರೆ.
ಉಪಾಹರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿಕೆ ಶಿವಕುಮಾರ್
ಉಪಾಹರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಬಹಿರಂಗವಾಗಿ ಸಿಎಂ ಗಾದಿ ಬದಲಾವಣೆ ಕುರಿತು ಚರ್ಚೆ ನಡೆಸುತ್ತಿರುವ ಶಾಸಕ ಮತ್ತು ಸಚಿವರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕ್ಲಾಸ್ ತೆಗೆದುಕೊಂಡಿದ್ದು, ಲೋಕಸಭಾ ಚುನಾವಣೆ ಮೇಲೆ ಗಮನ ಕೇಂದ್ರೀಕರಿಸುವಂತೆ ಸೂಚಿಸಿದ್ದಾರೆ.

ಸರ್ಕಾರ ರಚನೆಯಾಗಿ ಆರು ತಿಂಗಳು ಸಮೀಪಿಸುತ್ತಿರುವ ಹೊತ್ತಿನಲ್ಲಿ ಉಂಟಾದ ಗೊಂದಲಗಳಿಗೆ ತೆರೆ ಎಳೆಯುವುದು ಹಾಗೂ ಸಚಿವರನ್ನು ವಿಶ್ವಾಸಕ್ಕೆ ಪಡೆಯುವ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ (Breakfast Meeting) ಅನ್ನು ಏರ್ಪಡಿಸಿದ್ದರು. ಈ ವೇಳೆ ಸಚಿವರಿಗೆ ಕ್ಲಾಸ್‌ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಅವರು ಸಚಿವರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ಹೇಳಿಕೆಗಳಿಂದ ಪಕ್ಷದ ವರ್ಚಸ್ಸು ಹಾಗೂ ಲೋಕಸಭಾ ಚುನಾವಣೆ ಮೇಲೆ ಬೀರುವ ಪರಿಣಾಮದ ಬಗ್ಗೆ ತಿಳಿಹೇಳಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಪ್ರತಿಯೊಂದು ನಡೆಯೂ ರಾಜ್ಯ ರಾಜಕೀಯದಲ್ಲಿ (Karnataka Politics) ಯಾವ ರೀತಿ ಪರಿಣಾಮ ಬೀರಲಿದೆ ಎಂದು ಮನದಟ್ಟು ಮಾಡಲು ಉಭಯ ನಾಯಕರು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ನಾಯಕರು ಕಾರ್ಯಕರ್ತರಿಗೆ ಸಿಗುತ್ತಿಲ್ಲ: ಸಿದ್ದರಾಮಯ್ಯ ಅಸಮಾಧಾನ
ಮುಖಂಡರು ಮತ್ತು ಕಾರ್ಯಕರ್ತರಿಗೆ ಕೆಲವು ಸಚಿವರು ಲಭ್ಯವಾಗುತ್ತಿಲ್ಲ ಎಂದು ಬಹಳಷ್ಟು ಕಾರ್ಯಕರ್ತರು ನಮಗೆ ದೂರು ನೀಡಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸಿದರೂ ಕಾಟಾಚಾರಕ್ಕೆ ತಯಾರಿ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಹಲವು ಜನ ನಮಗೆ ದೂರು ಕೊಟ್ಟಿದ್ದಾರೆ. ಇದು‌ ನಮ್ಮ ಮಟ್ಟವನ್ನು ದಾಟಿ ಹೈಕಮಾಂಡ್ ಗಮನಕ್ಕೂ ಹೋಗಿದೆ. ಲೋಕಸಭಾ ಚುನಾವಣೆ ತಯಾರಿ ಹೇಗೆ ನಡೆಯುತ್ತಿದೆ? ಹೈ ಕಮಾಂಡ್ ಮೊದಲೇ ನಿಮಗೆ ಒಂದಷ್ಟು ಜವಾಬ್ದಾರಿ ಕೊಟ್ಟಿತ್ತು. ಆದರೆ ನೀವು ಆ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ಅಸಮಾಧಾನವನ್ನು ಹೈಕಮಾಂಡ್‌ ವ್ಯಕ್ತಪಡಿಸಿದೆ.

ಈ ಬಗ್ಗೆ ಪಕ್ಷದ ವರಿಷ್ಠರು ನಮ್ಮ ಜತೆ ಚರ್ಚೆ ನಡೆಸಿದ್ದು, ಕೆಲವೊಂದು ಸೂಚನೆಯನ್ನು ನೀಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್‌ ಸಿಂಗ್ ಸುರ್ಜೇವಾಲಾ‌ ಕಾರ್ಯವೈಖರಿ ಬಗ್ಗೆ ಗರಂ ಆಗಿದ್ದಾರೆ. ಈ ರೀತಿ ಬೇಜವಾಬ್ದಾರಿತನದ ವರ್ತನೆ ಸರಿಯಲ್ಲ. ಇದನ್ನು ಈಗಲೇ ಸರಿಪಡಿಸಿಕೊಳ್ಳಬೇಕು ಎಂದು ಖಾರವಾಗಿ ಹೇಳಿದ್ದಾರೆ. ಈ ಮಾತುಗಳನ್ನು ನಾವು ಹೇಳುತ್ತಿಲ್ಲ. ದೆಹಲಿಯವರು ನಮಗೆ ಹೇಳಿದ್ದನ್ನು ನಾವು ನಿಮಗೆ ಹೇಳುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.

ಬಹಿರಂಗ ಹೇಳಿಕೆ ಬೇಡ: ಡಿಕೆ ಶಿವಕುಮಾರ್
ಇದೇ ವೇಳೆ ಯಾವುದೇ ರೀತಿಯ ಅಸಮಾಧಾನ ಮತ್ತು ಗೊಂದಲದ ವಿಚಾರಗಳು ಇದ್ದರೆ ಪಕ್ಷದ ವೇದಿಕೆಯೊಳಗೆ ಮಾತನಾಡಿ. ಯಾರೂ ಸಹ ಬಹಿರಂಗವಾಗಿ ಮಾತನಾಡಬೇಡಿ. ಸುಖಾ ಸುಮ್ಮನೆ ವಿಪಕ್ಷ ನಾಯಕರಿಗೆ ಅಸ್ತ್ರ ಕೊಡಬೇಡಿ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿ ಹೇಳಿದ್ದಾರೆ ಎನ್ನಲಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು 20ಕ್ಕೂ ಹೆಚ್ಚು ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದು ಮಾತು ಕೊಟ್ಟಿದ್ದೇವೆ. ಇದಕ್ಕೆ ಈಗ ನಿಮ್ಮ ಶ್ರಮದ ಅಗತ್ಯವಿದೆ. ಮತ್ತೊಮ್ಮೆ ನೀವು ಜಿಲ್ಲಾ ಪ್ರವಾಸ ಮಾಡಿ, ನಿಮಗೆ ಕೊಟ್ಟಿರುವ ಕೆಲಸ ಮತ್ತು ನಿಮ್ಮ ವ್ಯಾಪ್ತಿಯ ಲೋಕಸಭಾ ಕ್ಷೇತ್ರ ಗೆಲ್ಲಿಸಿಕೊಂಡು ಬರಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ ಎಂದು ಸೇರಿದ್ದ ಸಚಿವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com