'ನನ್ನ ವಿರುದ್ಧದ ಪ್ರಧಾನಿ ಆರೋಪವೆಲ್ಲಾ ಸುಳ್ಳಿನ ಬಂಡಲ್: ಮೋದಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಹಾಗೂ ತಮ್ಮ ವಿರುದ್ಧದ ಪ್ರಧಾನಿ ನರೇಂದ್ರ ಮೋದಿಯವರ ಆರೋಪಗಳನ್ನು ತಿರಸ್ಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿಯಿಂದ ಇಂತಹ ಮಾತನ್ನು ನಿರೀಕ್ಷಿಸಿರಲಿಲ್ಲ, ಅಂತಹ ಮಾತುಗಳಿಗೆ ಸಾಕ್ಷ್ಯಾಧಾರ ನೀಡಲಿ ಎಂದು ಸೋಮವಾರ ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿ ಸಾಂದರ್ಭಿಕ ಚಿತ್ರ
ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿ ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಹಾಗೂ ತಮ್ಮ ವಿರುದ್ಧದ ಪ್ರಧಾನಿ ನರೇಂದ್ರ ಮೋದಿಯವರ ಆರೋಪಗಳನ್ನು ತಿರಸ್ಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿಯಿಂದ ಇಂತಹ ಮಾತನ್ನು ನಿರೀಕ್ಷಿಸಿರಲಿಲ್ಲ, ಅಂತಹ ಮಾತುಗಳಿಗೆ ಸಾಕ್ಷ್ಯಾಧಾರ ನೀಡಲಿ ಎಂದು ಸೋಮವಾರ ಆಗ್ರಹಿಸಿದ್ದಾರೆ.

ಭಾನುವಾರ ಮಧ್ಯಪ್ರದೇಶದ ಖಾಂಡ್ವಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ಕರ್ನಾಟಕವನ್ನು ಹಾಳು ಮಾಡಿದೆ. ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತಗೊಂಡಿದೆ ಎಂದು ಹೇಳಿದ್ದರು. ಅಲ್ಲದೇ ತಾನೆಷ್ಟು ದಿನ ಸಿಎಂ ಎಂಬುದು ಸಿದ್ದುಗೇ ಗೊತ್ತಿಲ್ಲ ಎಂದು ಅವರು ಅನುಮಾನ ವ್ಯಕ್ತಪಡಿಸಿದರು. 

ಕಾಂಗ್ರೆಸ್ ಸರ್ಕಾರ ಇರುವ ಕಡೆಗಳಲ್ಲಿ  ಭ್ರಷ್ಟಾಚಾರ, ಆಂತರಿಕ ಕಚ್ಚಾಟ ಮತ್ತು  ರಾಜ್ಯಗಳನ್ನು ಹಾಳು ಮಾಡುತ್ತಿದೆ . ಆ ರಾಜ್ಯಗಳಲ್ಲಿ ಮುಖ್ಯಮಂತ್ರಿ ಮತ್ತು ಅವರ ಉಪ ಮುಖ್ಯಮಂತ್ರಿಗಳ ನಡುವೆ ಲೂಟಿಗಾಗಿ ಪೈಪೋಟಿ ನಡೆಯುತ್ತಿದೆ ಎಂದು ಆರೋಪಿಸಿದರು. ಇಂತಹ ಹೇಳಿಕೆ ಸುಳ್ಳಿನ ರಾಜಕೀಯ ಮತ್ತು ಚುನಾವಣಾ ಭಾಷಣ ಎಂದು ಸಿಎಂ ಸಿದ್ದರಾಮಯ್ಯ ಹೇಳುವ ಮೂಲಕ ಪ್ರಧಾನಿಗೆ ತಿರುಗೇಟು ನೀಡಿದ್ದಾರೆ. 

ಪ್ರಧಾನಿ ಅವರ ಆರೋಪ ಸುಳ್ಳಿನ ಬಂಡಲ್. ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಪ್ರಧಾನಿ ಹತಾಶರಾಗಿದ್ದಾರೆ. ಅವರು 48 ಬಾರಿ ರಾಜ್ಯಕ್ಕೆ ಬಂದರು, ಆದರೆ ಅವರು ಪ್ರಚಾರಕ್ಕೆ ಹೋದಲ್ಲೆಲ್ಲಾ, ಬಿಜೆಪಿ ಸೋತಿದೆ. ಅದಕ್ಕಾಗಿಯೇ ಇಂದಿನವರೆಗೂ ವಿರೋಧ ಪಕ್ಷದ ನಾಯಕನನ್ನು ನೇಮಿಸಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

ಕಾಂಗ್ರೆಸ್ ನಾಯಕರು ಲೂಟಿ ಮಾಡಿದ್ದಾರೆ ಎಂಬ ಪ್ರಧಾನಿಯವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕರ್ನಾಟಕದಲ್ಲಿ 40 ಪರ್ಸೆಂಟ್ ಕಮಿಷನ್ ಲೂಟಿ ನಡೆದಾಗ ಯಾವ ಪಕ್ಷದ ಸರ್ಕಾರ ಅಧಿಕಾರದಲ್ಲಿತ್ತು? ನಾವು ಅದನ್ನು ತನಿಖೆ ಮಾಡುತ್ತಿದ್ದೇವೆ. ಪ್ರಧಾನಿಯಾಗಿ ನರೇಂದ್ರ ಮೋದಿ ಅದರ ಬಗ್ಗೆ ಸರಿಯಾಗಿ ಮಾತನಾಡಬೇಕು, ಸಾಕ್ಷ್ಯಾಧಾರಗಳು ಅಥವಾ ದಾಖಲೆಗಳಿದ್ದರೆ ಆರೋಪ ಮಾಡಬಹುದು, ಅವರು ಸುಳ್ಳು ಮಾತನಾಡಬಾರದು, ಹಗುರವಾಗಿ ಮಾತನಾಡಬಾರದು. ಯಾವುದೇ ಪುರಾವೆಗಳು ಅಥವಾ ದಾಖಲೆಗಳಿದ್ದರೆ  IB, RAW, CBI, ಗುಪ್ತಚರ ಸಂಸ್ಥೆಗಳಿಗೆ ನೀಡಲಿ ಎಂದರು. 

ದೇಶದ ಪ್ರಧಾನಿಯಿಂದ ಈ ರೀತಿಯ ಹೇಳಿಕೆಯನ್ನು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಇದು ಅವರಿಗೆ ಸರಿಹೊಂದುವುದಿಲ್ಲ ಎಂದ ಸಿದ್ದರಾಮಯ್ಯ. ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರ "ಮಲತಾಯಿ ಧೋರಣೆ" ಹೊಂದಿದೆ. ರಾಜ್ಯಕ್ಕೆ ನೀಡಬೇಕಾದ ಹಣವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಬರ ಪರಿಹಾರ ಹಣ ಬಿಡುಗಡೆ ಮಾಡಲು ಕೇಂದ್ರ ಸರಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com