ಬೆಳಗಾವಿ ವಿಧಾನಮಂಡಲ ಅಧಿವೇಶನ: ಹಣಕಾಸು ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಲಿ; ಬಿಜೆಪಿ ಆಗ್ರಹ

ರಾಜ್ಯ ಸರಕಾರ ಸಂಪೂರ್ಣ ದಿವಾಳಿಯಾಗಿದ್ದು, ಹಣಕಾಸಿನ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡುವಂತೆ ಬೆಳಗಾವಿ ಅಧಿವೇಶನದಲ್ಲಿ ಪಟ್ಟು ಹಿಡಿಯುವುದಾಗಿ ಪ್ರತಿಪಕ್ಷ ಬಿಜೆಪಿ ಸೋಮವಾರ ಹೇಳಿದೆ.
ವಿಪಕ್ಷ ನಾಯಕ ಆರ್.ಅಶೋಕ್.
ವಿಪಕ್ಷ ನಾಯಕ ಆರ್.ಅಶೋಕ್.
Updated on

ಬೆಂಗಳೂರು: ರಾಜ್ಯ ಸರಕಾರ ಸಂಪೂರ್ಣ ದಿವಾಳಿಯಾಗಿದ್ದು, ಹಣಕಾಸಿನ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡುವಂತೆ ಬೆಳಗಾವಿ ಅಧಿವೇಶನದಲ್ಲಿ ಪಟ್ಟು ಹಿಡಿಯುವುದಾಗಿ ಪ್ರತಿಪಕ್ಷ ಬಿಜೆಪಿ ಸೋಮವಾರ ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿಪಕ್ಷ  ನಾಯಕ ಆರ್.ಅಶೋಕ್ ಅವರು, “ಗ್ಯಾರಂಟಿ ಯೋಜನೆಗಳ ಅರೆಬರೆ ಜಾರಿಯಿಂದ ಬೊಕ್ಕಸ ಬರಿದಾಗಿದೆ. ಹೀಗಾಗಿ ಬರಗಾಲದಿಂದ ತತ್ತರಿಸುತ್ತಿರವ ರೈತರಿಗೆ ಪರಿಹಾರ ನೀಡಲು ಸಾಧ್ಯವಾಗದೆ ಕೇಂದ್ರದತ್ತ ಬೊಟ್ಟು ತೋರಿಸುತ್ತಿದ್ದಾರೆ. ಇದು ಸಂವೇದನಾ ರಹಿತ ಎಡಬಿಡಂಗಿ ಸರಕಾರ” ಎಂದು ವಾಗ್ದಾಳಿ ನಡೆಸಿದರು

ಪ್ರತಿಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ಅನೇಕ ಜಿಲ್ಲೆಗಳಲ್ಲಿ ಬರಗಾಲದ ಬಗ್ಗೆ ಅಧ್ಯಯನ ಮಾಡುವ ಸಂದರ್ಭದಲ್ಲಿ ಸರ್ಕಾರದ ಬಣ್ಣ ಬಯಲಾಗುತ್ತಿದೆ. ಜನ ಸಂಕಷ್ಟದಲ್ಲಿದ್ದರೂ ತನಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ ಎಂದು ಕಿಡಿಕಾರಿದರು.

ಕೇಂದ್ರದ ವಿರುದ್ಧ ಗೂಬೆ ಕೂರಿಸುವ ಮೊದಲು ರಾಜ್ಯ ಸರ್ಕಾರದ ಪಾತ್ರ, ಹೊಣೆಗಾರಿಕೆ ಏನು ಎಂಬುದನ್ನು ಸ್ಪಷ್ಟವಾಗಿ ತಿಳಿಸಲಿ. ಹಿಂದೆ ನಮ್ಮ ಸರಕಾರ ಅಧಿಕಾರದಲ್ಲಿ ಇದ್ದಾಗ ಮೊದಲು ರೈತರ ಸಂಕಷ್ಟಕ್ಕೆ ಧಾವಿಸಿದ್ದೆವು. ಎನ್ ಡಿಆರ್ ಎಫ್ ಮಾರ್ಗಸೂಚಿಗಿಂತ ದುಪ್ಪಟ್ಟು ಪರಿಹಾರ ನೀಡಿದ್ದೆವು. ನಂತರ ಕೇಂದ್ರದ ನೆರವು ಖಜಾನೆಗೆ ಬಂತು. ಆ ಕೆಲಸ ಮಾಡಲು ಇವರಿಗೇನು ದಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಳವೆ ಬಾವಿ ಕೊರೆಸಲು, ಜಾನುವಾರುಗಳಿಗೆ ಮೇವು ಖರೀದಿಸಲು ಆದೇಶವನ್ನು ಹೊರಡಿಸಿಲ್ಲ. ಕನಿಷ್ಠಪಕ್ಷ ಕೊಳವೆ ಬಾವಿಗಳಿಗೆ ಆದ್ಯತೆ ಮೇರೆಗೆ ವಿದ್ಯುತ್ ಸಂಪರ್ಕ ಕೊಡುತ್ತಿಲ್ಲ. ಕೇಳಿದರೆ ಎಲ್ಲದಕ್ಕೂ ಲಂಚ ಕೊಡಬೇಕು, ಇಲ್ಲದಿದ್ದರೆ ಯಾವುದೇ ಕೆಲಸ ಆಗುತ್ತಿಲ್ಲ ಎಂದು ರೈತರು ದೂರು ನೀಡುತ್ತಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಬರ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ ಎನ್ನುತ್ತಾರೆ, ಅದು ನಿಜವೇ ಆಗಿದ್ದಲ್ಲಿ ತಕ್ಷಣ ಹಣ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಇವರು ಮಾಡಿರುವ ಖರ್ಚು ವೆಚ್ಚ ಮತ್ತು ಹಣಕಾಸಿನ ಸ್ಥಿತಿ ಬಗ್ಗೆ ಶ್ವೇತ ಪತ್ರ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com