ಕ್ಷೇತ್ರದ ಅನುದಾನಕ್ಕೆ ಕತ್ತರಿ ಹಾಕಿದ ಕಾಂಗ್ರೆಸ್: ಬಿಜೆಪಿ ತೀವ್ರ ಕಿಡಿ
ಬೆಂಗಳೂರು: ಕಾವೇರಿ ವಿವಾದ ಬಳಿಕ ಅನುದಾನ ವಿಚಾರವಾಗಿ ಬಿಜೆಪಿ ಹಾಗೂ ಆಡಳಿತಾರೂಢ ಕಾಂಗ್ರೆಸ್ ನಡುವೆ ಜಟಾಪಟಿ ಶುರುವಾಗಿದೆ.
ತಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ನಿನ್ನೆಯಷ್ಟೇ ರಾಜರಾಜೇಶ್ವರಿನಗರ ಶಾಸಕ ಎನ್.ಮುನಿರತ್ನ ಅವರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಬಳಿಕ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದರು. ಬಳಿಕ ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದರು.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಅಶ್ವಥ್ ನಾರಾಯಣ್ ಅವರು, ಎಲ್ಲೆಲ್ಲಿ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿಲ್ಲವೊ ಅಲ್ಲಿ ಕಾಮಗಾರಿ ನಡೆಸುವ ಸಲುವಾಗಿ ಬಿಜೆಪಿ ಶಾಸಕರ ಕ್ಷೇತ್ರದ ಹಣಕ್ಕೆ ಕತ್ತರಿ ಹಾಕಲಾಗುತ್ತಿದೆ. ಗುತ್ತಿಗೆದಾರರಿಗೆ ಹಣ ಪಾವತಿಸಲು ವಿಳಂಬ ಮಾಡಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಮಗೆ ಸಮಸ್ಯೆಗಳ ತಂದೊಡ್ಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.
ಅಭಿವೃದ್ಧಿ ಕೆಲಸಗಳಿಗೆ ಹಣ ನೀಡುವಂತೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ಸ್ಥಳೀಯ ಪ್ರದೇಶಾಭಿವೃದ್ಧಿ ಹಣ ಬಿಡುಗಡೆಯಾಗದೇ ಎಲ್ಲ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಪರಿಸ್ಥಿತಿ ಹದಗೆಟ್ಟರೆ ಶಾಸಕ ಮುನಿರತ್ನ ಅವರಂತೆ ಹಲವರು ಪ್ರತಿಭಟನೆ ನಡೆಸಲಿದ್ದಾರೆಂದು ತಿಳಿಸಿದ್ದಾರೆ.
ರಾಜಾಜಿನಗರ ಶಾಸಕ ಮತ್ತು ಮಾಜಿ ಸಚಿವ ಸುರೇಶ್ ಕುಮಾರ್ ಅವರು ಮಾತನಾಡಿ, ಅನುದಾನ ಬಿಡುಗಡೆಯಾಗದೆ ನಿಗದಿತ ಸಮಯಕ್ಕೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಪಾವತಿ ಬಗ್ಗೆ ಖಚಿತತೆ ಇಲ್ಲದ ಕಾರಣ ಗುತ್ತಿಗೆದಾರರು ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಹಲವು ಪ್ರಮುಖ ಅಭಿವೃದ್ಧಿ ಕಾಮಗಾರಿಗಳು ಅಪೂರ್ಣವಾಗಿವೆ ಎಂದು ಹೇಳಿದ್ದಾರೆ.
ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಸರಕಾರದಿಂದ ಹಣ ಬಂದಿಲ್ಲ, ಹಿಂದಿನ ಸರಕಾರ ಮಂಜೂರು ಮಾಡಿದ್ದನ್ನು ಸ್ಥಳೀಯ ಆಡಳಿತ ಅಧಿಕಾರಿಗಳು ಬಿಡುಗಡೆ ಮಾಡಿಲ್ಲ. ''ಹಣದ ಕೊರತೆಯಿಂದಾಗಿ ಹಲವು ಯೋಜನೆಗಳು ಸ್ಥಗಿತಗೊಂಡಿವೆ. ಮನೆಗಳನ್ನು ನಿರ್ಮಿಸಲು ಯೋಜಿಸಿದ್ದೇವೆ. ಆದರೆ, ಅದು ಬಾಕಿ ಉಳಿದಿದೆ ಎಂದು ಹೇಳಿದ್ದಾರೆ.
ಶಾಸಕ ಮಹೇಶ ತೆಂಗಿನಕಾಯಿ ಮಾತನಾಡಿ, ಸುಮಾರು 42 ಕೋಟಿ ರೂ.ವೆಚ್ಚದ ಇನ್ನೊಂದು ರಸ್ತೆ ಕಾಮಗಾರಿ ಬಾಕಿ ಇದ್ದು, ಈ ಬಗ್ಗೆ ಜಿಲ್ಲಾ ಸಚಿವರ ಗಮನಕ್ಕೆ ತಂದಿದ್ದೆವು. ಈ ವೇಳೆ 16-17 ಕೋಟಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಇನ್ನೂ ಬಿಡುಗಡೆಯಾಗಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ