ರಾಜ್ಯದಲ್ಲಿ ಕಾಂಗ್ರೆಸ್ 'ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ'ವನ್ನು ಸ್ಥಾಪಿಸಿದೆ: ಬಿವೈ ವಿಜಯೇಂದ್ರ

ಜನರನ್ನು ಲೂಟಿ ಮಾಡಲೆಂದು ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಎಸ್‌ಬಿಐ ಶಾಖೆಯನ್ನು ಸ್ಥಾಪಿಸಿದೆ ಎಂದು ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಸೋಮವಾರ ಕಿಡಿಕಾರಿದ್ದಾರೆ. ದೇಶಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇದೆ. ಕಾಂಗ್ರೆಸ್‌ಗೆ ಎಸ್‌ಬಿಐ ಆಗಿದೆ. ಎಸ್‌ಬಿಐ ಎಂದರೆ 'ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ' ಎಂದು ಅವರು ಹೇಳಿದರು.
ಬಿವೈ ವಿಜಯೇಂದ್ರ
ಬಿವೈ ವಿಜಯೇಂದ್ರ
Updated on

ಬೆಂಗಳೂರು: ಜನರನ್ನು ಲೂಟಿ ಮಾಡಲೆಂದು ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಎಸ್‌ಬಿಐ ಶಾಖೆಯನ್ನು ಸ್ಥಾಪಿಸಿದೆ ಎಂದು ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಸೋಮವಾರ ಕಿಡಿಕಾರಿದ್ದಾರೆ.

ದೇಶಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇದೆ. ಕಾಂಗ್ರೆಸ್‌ಗೆ ಎಸ್‌ಬಿಐ ಆಗಿದೆ. ಎಸ್‌ಬಿಐ ಎಂದರೆ 'ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ' ಎಂದು ಅವರು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕಾಂಗ್ರೆಸ್ ಬಿಬಿಎಂಪಿ ಮತ್ತು ಇತರೆ ಇಲಾಖೆಗಳಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮೂಲಕ ಹಣ ವಸೂಲಿ ಮಾಡಿಸಿ, ಬೇರೆ ರಾಜ್ಯಗಳಿಗೆ ಕಳುಹಿಸುತ್ತಿರುವುದು ಬೆಳಕಿಗೆ ಬಂದಿದೆ. ಕಾಂಗ್ರೆಸ್ ಸರ್ಕಾರದ ಸಚಿವರುಗಳು ಗುತ್ತಿಗೆದಾರರಿಂದ ಹಣ ಸಂಗ್ರಹಿಸುತ್ತಿದ್ದಾರೆ' ಎಂದು ದೂರಿದರು.

ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಏನು ಬೇಕಾದರೂ ಹೇಳಲಿ. ರಾಜ್ಯದಲ್ಲಿ ಲೂಟಿಯ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿ ಲೂಟಿ ಮಾಡಿದ ಹಣದಲ್ಲಿ ಬೇರೆ ರಾಜ್ಯಗಳಲ್ಲಿ ಚುನಾವಣೆ ಗೆಲ್ಲುವ ಪ್ಲಾನ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಹಗಲು ದರೋಡೆಯಲ್ಲಿ ರಾಜ್ಯ ಸರ್ಕಾರ

'ಐದು ರಾಜ್ಯಗಳ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ರಾಜ್ಯದಿಂದ ಹಣ ವಸೂಲಿ ಮಾಡಿ, ಬೇರೆ ರಾಜ್ಯಗಳಿಗೆ ಕಳುಹಿಸುವ ಷಡ್ಯಂತ್ರ ಬಯಲಾಗಿದೆ. ಎರಡು ದಿನಗಳ ಹಿಂದೆ 42 ಕೋಟಿ ರೂ. ನಗದು ವಶ. ನಿನ್ನೆ 45 ಕೋಟಿ ರೂ.ಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರು ಕಳುಹಿಸಿರುವ ನಿಖರ ಮೊತ್ತ ಇನ್ನೂ ತಿಳಿದುಬಂದಿಲ್ಲ. ಮೂಲಗಳ ಪ್ರಕಾರ, ಇದು ಸಾವಿರಾರು ಕೋಟಿ ಎನ್ನಲಾಗಿದೆ. ಪಾರದರ್ಶಕ ಆಡಳಿತ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಭರವಸೆ ನೀಡಿದ ರಾಜ್ಯ ಸರ್ಕಾರ ಹಗಲು ದರೋಡೆಯಲ್ಲಿ ಮುಳುಗಿದೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.

ಐಟಿ ದಾಳಿಗಳು ರಾಜಕೀಯ ಪ್ರೇರಿತವಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಅಂದರೆ, ವಶಪಡಿಸಿಕೊಂಡ ನಗದು ಕಾಂಗ್ರೆಸ್ ಪಕ್ಷದ್ದು ಎಂದು ಒಪ್ಪಿಕೊಂಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ತಮ್ಮ ರಾಜಕೀಯ ಯಜಮಾನರಿಂದ ಕುಮ್ಮಕ್ಕು ಪಡೆಯುವ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಐದು ರಾಜ್ಯಗಳ ಚುನಾವಣೆಗಳಿಂದ ಕರ್ನಾಟಕ ರಾಜ್ಯವನ್ನು ಎಟಿಎಂ ಆಗಿ ಬಳಸಲಾಗುತ್ತದೆ ಎಂದು ಅವರು ತಿಳಿಸಿದರು.

ರೈತರು ಮತ್ತು ಬಡವರ ಬಗ್ಗೆ ಕಾಳಜಿಯಿಲ್ಲ

'ಉತ್ತಮ ಆಡಳಿತ ನೀಡಲು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಯಸುತ್ತಿಲ್ಲ ಎಂದು ನಾವು ಮುನ್ಸೂಚನೆ ನೀಡಿದ್ದೆವು. ಅದು ಈಗ ನಿಜವಾಗುತ್ತಿದೆ. ದೇಶದ ಜನರು ಅದನ್ನು ನೋಡುತ್ತಿದ್ದಾರೆ' ಎಂದು ಅವರು ಸಮರ್ಥಿಸಿಕೊಂಡರು.

ಈ ವರ್ಷ ಮಳೆ ಕೊರತೆ ಮತ್ತು ಅನಾವೃಷ್ಟಿಯ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಪರಿಸ್ಥಿತಿ ಇದ್ದಕ್ಕಿದ್ದಂತೆ ಉದ್ಭವಿಸಿದ್ದಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿಸಲಾಗಿತ್ತು. ಎಲ್ಲವನ್ನೂ ರಾಜಕೀಯಗೊಳಿಸಲಾಗುತ್ತಿದೆ. ರೈತರು ಮತ್ತು ಬಡವರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಬಿಜೆಪಿ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com