ಜಾರ್ಜ್ ಮನೆಯಲ್ಲಿ ತಾವು ನಡೆಸಿದ ಸಿದ್ದಲೀಲೆ ಬಹಿರಂಗ ಮಾಡುವಿರಾ?: ಎಚ್ ಡಿ ಕುಮಾರಸ್ವಾಮಿ

ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ನಡುವಿನ ವಾಗ್ಯುದ್ಧ ಮುಂದುವರೆದಿದ್ದು, ಸಿದ್ದರಾಮಯ್ಯಗೆ ತಿರುಗೇಟು ನೀಡಿರುವ ಎಚ್ ಡಿಕೆ 'ಜಾರ್ಜ್ ಮನೆಯಲ್ಲಿ ತಾವು ನಡೆಸಿದ ಸಿದ್ದಲೀಲೆ ಬಹಿರಂಗ ಮಾಡುವಿರಾ?' ಎಂದು ಸವಾಲೆಸೆದಿದ್ದಾರೆ.
ಎಚ್ ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
ಎಚ್ ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
Updated on

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ನಡುವಿನ ವಾಗ್ಯುದ್ಧ ಮುಂದುವರೆದಿದ್ದು, ಸಿದ್ದರಾಮಯ್ಯಗೆ ತಿರುಗೇಟು ನೀಡಿರುವ ಎಚ್ ಡಿಕೆ 'ಜಾರ್ಜ್ ಮನೆಯಲ್ಲಿ ತಾವು ನಡೆಸಿದ ಸಿದ್ದಲೀಲೆ ಬಹಿರಂಗ ಮಾಡುವಿರಾ?' ಎಂದು ಸವಾಲೆಸೆದಿದ್ದಾರೆ.

ನಿನ್ನೆ ಸಿದ್ದರಾಮಯ್ಯ ಅವರು ಎಚ್ ಡಿ ಕುಮಾರಸ್ವಾಮಿ ಕುರಿತು ಕುಣಿಯಲಾರದವರು ನೆಲಡೊಂಕು ಎಂದು ಹೇಳುವಂತೆ ತಮಗೆ ಸರ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಕಾರಣ, ಬೇರೆಯವರ ಮೇಲೆ ಆರೋಪವನ್ನು ಹೊರಿಸಿರುವುದು ನಿರರ್ಥಕ ಎಂದು ಕಿಡಿಕಾರಿದ್ದರು. ಈ ಹೇಳಿಕೆ ಇದೀಗ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಎಚ್ ಡಿ ಕುಮಾರಸ್ವಾಮಿ ಅವರು, 'ಕುಣಿಯಲಾರದವನಿಗೆ ನೆಲ ಡೊಂಕು ಎನ್ನುವ ಮಾತೇನೋ ಸರಿ. ಆದರೆ, ಕುಣಿಯಲು ಬಿಟ್ಟು ನೆಲ ಅಗೆಯುವ ನಿಮ್ಮ 'ಮೈತ್ರಿದ್ರೋಹ'ಕ್ಕೆ ಏನು ಹೇಳುವುದು ಸಿದ್ದರಾಮಯ್ಯನವರೇ.. ದೋಖಾ  ಮಾಡುವುದೇ ದುರುದ್ದೇಶವಾಗಿದ್ದಾಗ ನೆಲವನ್ನು ಡೊಂಕು ಮಾಡುವುದು ಕಷ್ಟವೇ? 'ಮೀರ್ ಸಾದಿಕ'ನ ಆಧುನಿಕ ಅವತಾರಿ ಆಗಿರುವ ನಿಮಗೆ ಇಂಥ ಕ್ಷುದ್ರವಿದ್ಯೆಗಳೆಲ್ಲ ಕರತಲಾಮಲಕ. ಅದನ್ನೇ ನೀವು ಸುತ್ತಿಬಳಸಿ ಹೇಳುತ್ತಿದ್ದೀರಿ. ಧೈರ್ಯವಾಗಿ, ನೇರವಾಗಿ ಸತ್ಯ ಹೇಳಲು ಭಯವೇ? ಹೇಳಿ, ಕುಮಾರಸ್ವಾಮಿ ಸರಕಾರವನ್ನು ತೆಗೆದಿದ್ದು ನಾನೇ ಎಂದು ಹೇಳಲು ನಿಮಗೆ ಗುಂಡಿಗೆ ಸಾಲದೇ? ಎಂದು ಕಿಡಿಕಾರಿದ್ದಾರೆ.

ಅಲ್ಲದೆ *ಸಿದ್ಧವನದಲ್ಲಿ ಹೆಣೆದ ಸಿದ್ದಸೂತ್ರ ನನಗೆ ಗೊತ್ತಿಲ್ಲದ ಚಿದಂಬರ ರಹಸ್ಯವೇ? ಬೆಕ್ಕು ಕಣ್ಮುಚ್ಚಿ, ಕದ್ದು ಹಾಲು ಕುಡಿದರೆ ಅನ್ಯರಿಗೆ ಕಾಣದು ಎನ್ನುವಷ್ಟು ಕಿಲಾಡಿತನವೇ? ಇದು ಕಿಲಾಡಿತನವೋ ಅಥವಾ ಕಿಡಿಗೇಡಿತನವೋ? ತಮ್ಮ ಇಂಥ ಸಿದ್ದಲೀಲೆಗಳು ನಮಗೇನೂ ಹೊಸತಲ್ಲ. ಯಡಿಯೂರಪ್ಪ ಅವರು ಕಾವೇರಿಯನ್ನು ಖಾಲಿ ಮಾಡಲಿಲ್ಲ ಸರಿ, ಜಾರ್ಜ್ ಅವರಿಗೆ ಹಂಚಿಕೆ ಆಗಿದ್ದ ನಿವಾಸದಲ್ಲಿ ನೀವು ಯಾಕೆ ಇದ್ದಿರಿ? ಪಾಪ.. ಅನ್ಯರ ಹಂಗೇಕೆ ಬೇಕಿತ್ತು ನಿಮಗೆ? ಮಾಜಿ ಮುಖ್ಯಮಂತ್ರಿಗಳಿಗೆ ಪ್ರತ್ಯೇಕ ಭಂಗಲೆಯನ್ನೇ ಹಂಚಿಕೆ ಮಾಡುತ್ತಿದ್ದೆವು. ನೀವು ಕೇಳಬಹುದಿತ್ತು. ಕುತಂತ್ರ, ಕುಯುಕ್ತಿಯೇ ಸಿದ್ದಸೂತ್ರ ಆಗಿರುವಾಗ ಭಂಗಲೆ ಬಿಟ್ಟುಕೊಡುವಷ್ಟು ಉದಾರತೆ ನಿಮಗೆ ಎಲ್ಲಿಂದ ಬರಬೇಕು?

*ಇಷ್ಟಕ್ಕೂ ಇನ್ನೊಬ್ಬರು ಇದ್ದ, ಅದರಲ್ಲೂ ನನ್ನ ಸಂಪುಟದಲ್ಲಿ ಸಚಿವರಾಗಿದ್ದವರಿಗೆ ಹಂಚಿಕೆ ಆಗಿದ್ದ ಭಂಗಲೆಯಲ್ಲಿ ಸೇರಿಕೊಳ್ಳುವುದು ಸಮಾಜವಾದಿಗೆ ಅದೆಂಥ ಸಭ್ಯತೆ? ಅದೆಂಥ ಶೋಭೆ? ಛೀ! ಛೀ!!.. ವೆಸ್ಟ್ ಎಂಡ್ ನಲ್ಲಿ ಇದ್ದ ಕಾರಣವನ್ನು ನಾನು ಈಗಾಗಲೇ ತಿಳಿಸಿದ್ದೇನೆ, ನೂರಾರು ಸಲ. ಆದರೆ, ಜಾರ್ಜ್ ಮನೆಯಲ್ಲಿ ತಾವು ನಡೆಸಿದ ಸಿದ್ದಲೀಲೆಯನ್ನು ಬಹಿರಂಗ ಮಾಡುವಿರಾ? ನಿಮ್ಮ ಅಂತರಂಗವನ್ನು ಒಮ್ಮೆಯಾದರೂ  ಬಹಿರಂಗ ಮಾಡಿ ಸಿದ್ದರಾಮಯ್ಯನವರೇ.. ಎಂದು ಎಚ್ ಡಿಕೆ ವಾಗ್ದಾಳಿ ನಡೆಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com