ರೈತರಿಗೆ 5 ಗಂಟೆ ವಿದ್ಯುತ್: ಡಿಕೆ ಶಿವಕುಮಾರ್ ಹೇಳಿಕೆಗೆ ಕಾಂಗ್ರೆಸ್ ನಾಯಕರ ಕಿಡಿ; ತೆಲಂಗಾಣ ಮುಖಂಡರ ತಪರಾಕಿ

ಕಾಂಗ್ರೆಸ್ ಸರ್ಕಾರವು ರಾಜ್ಯದ ರೈತರಿಗೆ ಐದು ಗಂಟೆ ವಿದ್ಯುತ್ ನೀಡುತ್ತಿದೆ ಎಂದು ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೇಳಿಕೆಯು ಕಾಂಗ್ರೆಸ್ ನಾಯಕರಿಗೆ ಇರಿಸು-ಮುರಿಸು ಉಂಟು ಮಾಡಿದೆ.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಹೈದರಾಬಾದ್: ತೆಲಂಗಾಣದಲ್ಲಿ ವಿಧಾನಸಭೆ ಚುನಾವಣಾ ಸಮರ ಕಾವೇರಿದ್ದು, ರಾಜಕೀಯ ನಾಯಕರು ಬಿರುಸಿನ ಪ್ರಚಾರ ಮೂಲಕ ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ತೆಲಂಗಾಣದಲ್ಲಿ ಹಸ್ತವನ್ನು ಅಧಿಕಾರಕ್ಕೆ ತರಲು ಪಣತೊಟ್ಟಿರುವ ಕೈನಾಯಕರು ಪಕ್ಕದ ಕರ್ನಾಟಕದ ನಾಯಕರ ನೆರವು ಪಡೆದಿದ್ದಾರೆ.

ಕಾಂಗ್ರೆಸ್ ಸರ್ಕಾರವು ರಾಜ್ಯದ ರೈತರಿಗೆ ಐದು ಗಂಟೆ ವಿದ್ಯುತ್ ನೀಡುತ್ತಿದೆ ಎಂದು ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೇಳಿಕೆಯು ಕಾಂಗ್ರೆಸ್ ನಾಯಕರಿಗೆ ಇರಿಸು-ಮುರಿಸು ಉಂಟು ಮಾಡಿದೆ.

ಚುನಾವಣೆಗೆ ಮುನ್ನ ವಿದ್ಯುತ್ ಪೂರೈಕೆಯಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಪ್ರಮುಖ ನಾಯಕರು ಇಂತಹ ಕಾಮೆಂಟ್‌ಗಳನ್ನು ಮಾಡಿರುವುದಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಡಿಕೆ ಶಿವಕುಮಾರ್  ಹೇಳಿಕೆಯ ಲಾಭ ಪಡೆದ ಬಿಆರ್‌ಎಸ್ ನಾಯಕರು ಈ ವಿಷಯದ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಿದ್ದಾರೆ. ಐದು ಗಂಟೆ ವಿದ್ಯುತ್ ಸರಬರಾಜು ಮಾಡುವ ಪಕ್ಷವನ್ನು ಬೆಂಬಲಿಸಬೇಕೇ ಅಥವಾ ರಾತ್ರಿಯಿಡೀ ವಿದ್ಯುತ್ ನೀಡುವ ಪಕ್ಷವನ್ನು ಬೆಂಬಲಿಸಬೇಕೇ ಎಂದು ನಿರ್ಧರಿಸಲು ಜನರಿಗೆ ಮನವಿ ಮಾಡಿದ್ದಾರೆ.

ತೆಲಂಗಾಣ ಕಾಂಗ್ರೆಸ್ ನಾಯಕರು ತಮ್ಮ ನಿಲುವುಗಳನ್ನು ಜನರಿಗೆ ವಿವರಿಸಿ, ಈ ಸೂಕ್ಷ್ಮ ವಿಷಯ ರೈತ ಸಮುದಾಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ, ಹೀಗಾಗಿ ಸಮಸ್ಯೆಯನ್ನು ಮುಕ್ತಗೊಳಿಸಲು ಪ್ರಯತ್ನಿಸಬೇಕು ಮತ್ತು ಎಲ್ಲವನ್ನುಅರ್ಥವಾಗುವ ರೀತಿ ವಿವರಿಸಬೇಕು, ಇಲ್ಲದಿದ್ದರೆ, ಪಕ್ಷದ ಚುನಾವಣಾ ಭವಿಷ್ಯವು ಪರಿಣಾಮ ಬೀರುತ್ತದೆ ಎಂದು  ರಾಜಕೀಯ ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.  ಹಿರಿಯ ನಾಯಕರು ಕಾಂಗ್ರೆಸ್ ಸ್ಟಾರ್ ಪ್ರಚಾರಕರಿಗೆ ವಿದ್ಯುತ್, ನೀರು, ರೈತ ಬಂಧು ಮತ್ತು ಇತರ ಯೋಜನೆಗಳಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಮಾತನಾಡದೆ ಪಕ್ಷದ ಆರು ಭರವಸೆಗಳ ಮೇಲೆ ಗಮನ ಕೇಂದ್ರೀಕರಿಸುವಂತೆ ಸಲಹೆ ನೀಡುತ್ತಿದ್ದಾರೆ.

ಈ ಹಿಂದೆ ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು. ಅಮೇರಿಕಾದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ರಾಜ್ಯದ ರೈತರಿಗೆ ಮೂರು ಗಂಟೆ ವಿದ್ಯುತ್ ಸಾಕು ಎಂದು ಹೇಳಿದ್ದರು, ಈ ಹೇಳಿಕೆ ಬಿಆರ್‌ಎಸ್ ನಾಯಕರಿಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು  ಅವಕಾಶ ಕಲ್ಪಿಸಿಕೊಟ್ಟಂತಾಗಿತ್ತು.

ಅಧಿಕಾರಕ್ಕೆ ಬಂದರೆ ಎಲ್ಲಾ ಯೋಜನೆಗಳನ್ನು ನಿಲ್ಲಿಸುವುದಾಗಿ ಹೇಳುತ್ತಲೇ ಆಡಳಿತ ಪಕ್ಷದ ನಾಯಕರು ಕಾಂಗ್ರೆಸ್ ಅನ್ನು ರೈತ ವಿರೋಧಿ ಪಕ್ಷ ಎಂದು ಬಿಂಬಿಸಿದರು. ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಸಚಿವರಾದ ಕೆ.ಟಿ.ರಾಮರಾವ್, ಟಿ.ಹರೀಶ್ ರಾವ್ ಮತ್ತು ಎಂಎಲ್ ಸಿ ಕವಿತಾ ಅವರು ಕಾಂಗ್ರೆಸ್ ಅನ್ನು ನಿರಂತರವಾಗಿ ಟೀಕಿಸುತ್ತಿದ್ದಾರೆ.

ಕರ್ನಾಟಕದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯವನ್ನು ಲೂಟಿ ಮಾಡುತ್ತಿದೆ. ಅಲ್ಲದೆ ಅಧಿಕಾರಕ್ಕೆ ಬಂದಾಗಿನಿಂದಲೂ ತನ್ನ ಅಸಮರ್ಥತೆಯನ್ನು ಜಗಜ್ಜಾಹೀರು ಮಾಡಿದೆ ಎಂದು ತೆಲಂಗಾಣದ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ.ರಾಮರಾವ್ ಟೀಕಿಸಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ತಾಂಡೂರು ಮತ್ತು ಪರಿಗಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಬಿಆರ್‌ಎಸ್ ಸರ್ಕಾರದ ವಿರುದ್ಧ ಕರ್ನಾಟಕಕ್ಕೆ ಬನ್ನಿ, ರಾಜ್ಯದ ಅಭಿವೃದ್ದಿ ನೋಡಿ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲಿಗೆ ತಿರುಗೇಟು ನೀಡಿರುವ ಅವರು, ಗ್ಯಾರಂಟಿಗಳನ್ನು ಜಾರಿಗೆ ತಂದು ರೈತರನ್ನೂ ಸೇರಿದಂತೆ ಇಡೀ ರಾಜ್ಯವನ್ನು ಕತ್ತಲೆಗೆ ನೂಕಿದೆ. ಅಲ್ಲದೆ ನಿಮ್ಮ ರಾಜ್ಯವೇ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವಾಗ ನೀವು ನಮ್ಮಲ್ಲಿ ಹೇಗೆ ಮತ ಕೇಳಲು ಬಂದಿದ್ದೀರಿ? ಎಂದು ವ್ಯಂಗ್ಯವಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com