ಸಿಎಂ ಸಿದ್ದರಾಮಯ್ಯ ಮಹಾನ್ ಸುಳ್ಳುಗಾರ: ಸಿಎನ್ ಅಶ್ವಥ್ ನಾರಾಯಣ್ ವಾಗ್ದಾಳಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾನ್ ಸುಳ್ಳುಗಾರ ಎಂದು ಬಿಜೆಪಿ ಮುಖಂಡ ಡಾ.ಸಿ.ಎನ್.ಅಶ್ವತ್ಥ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.
ಅಶ್ವತ್ಥ ನಾರಾಯಣ
ಅಶ್ವತ್ಥ ನಾರಾಯಣ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾನ್ ಸುಳ್ಳುಗಾರ ಎಂದು ಬಿಜೆಪಿ ಮುಖಂಡ ಡಾ.ಸಿ.ಎನ್.ಅಶ್ವತ್ಥ ನಾರಾಯಣ ವಾಗ್ದಾಳಿ ನಡೆಸಿದ್ದಾರೆ. ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ 
ರಾಜ್ಯದ ಮೇಲೆ ಪ್ರೀತಿ ಇಲ್ಲ. ತಮ್ಮ ಮತ್ತು ತಮ್ಮ ಕುಟುಂಬದ ಮೇಲೆ ಮಾತ್ರ ಪ್ರೀತಿ ಇದೆ. ಅವರು ಲೂಟಿ ಹೊಡೆಯುವುದರಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ  ಏನೂ ಮಾಡಿಲ್ಲ, ಒಂದು ಯೋಜನೆಗೆ ಹೆಸರನ್ನಾದರೂ ಇಟ್ಟಿದ್ದಾರೆಯೇ ಅದು ಇಲ್ಲ, ಅಪಾರ ಅನುಭವದೊಂದಿಗೆ ಆರು ತಿಂಗಳು ಅಧಿಕಾರ ನಡೆಸಿದ ಅವರು ಏನನ್ನೂ ಮಾಡಿಲ್ಲ.  ರಾಜ್ಯದಲ್ಲಿನ  ಬರ ಪರಿಸ್ಥಿತಿ ನೀಗಿಸುವಲ್ಲಿ  ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅವರು ಯಾವುದೇ ಹಣವನ್ನು ಬಿಡುಗಡೆ ಮಾಡಿಲ್ಲ, ಕುಡಿಯುವ ನೀರಿನ ಸಮಸ್ಯೆ ಅಪಾರವಾಗಿದೆ, ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರ ಸಾಲ ಮರುಪಾವತಿಯಾಗುತ್ತಿಲ್ಲ. ಬೆಳೆ ನಷ್ಟ ಪರಿಹಾರವಾಗಿ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ... ಸರ್ಕಾರ ರೈತರ ಕೈಗೆ ಸಿಗದ ಕಾರಣ ಬರ ಪೀಡಿತ ಪ್ರದೇಶದ ಅಧ್ಯಯನ ಕೈಗೊಂಡು ಜನರೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ತಿಳಿಸಿದರು.

ಇದಕ್ಕೂ ಮುನ್ನಾ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಅಶ್ವತ್ಥ ನಾರಾಯಣ, ಬ್ಯಾಂಕಿಂಗ್‌ ವಲಯದ ರಾಷ್ಟ್ರೀಕರಣದ ಬಗ್ಗೆ ಸುಳ್ಳು ಮಾಹಿತಿ ನೀಡಿ ಜನತೆಯ ದಿಕ್ಕು ತಪ್ಪಿಸುತ್ತಿರುವ ಮಹಾನ್‌ ಸುಳ್ಳುಗಾರ ಸಿಎಂ ಸಿದ್ದರಾಮಯ್ಯ ಅವರೇ, ಯುಪಿಎ ಅವಧಿಯಲ್ಲಿ ದೆಹಲಿಯಲ್ಲಿ ಕುಳಿತ ನಿಮ್ಮ ಪ್ರಭಾವಿ ನಾಯಕರು ಬ್ಯಾಂಕಿಗೆ ಕರೆ ಮಾಡುವ ಮೂಲಕವೇ ಕಳ್ಳ ಕಾಕರಿಗೆ ಸಾಲ ಮಂಜೂರು ಮಾಡಿಸುತ್ತಿದ್ದರು ಎನ್ನುವ ಸತ್ಯವನ್ನು ಏಕೆ ಮರೆಮಾಚುತ್ತಿದ್ದೀರಿ? ಅಂದು ಸಾಲ ಪಡೆದ ಕೈ ನಾಯಕರ ಸ್ನೇಹಿತರೆಲ್ಲ ವಿದೇಶಕ್ಕೆ ಓಡಿಹೋಗಿದ್ದಾರೆ ಎನ್ನುವುದನ್ನು ಏಕೆ ಮುಚ್ಚಿಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. 

ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅಂದು ನಿಮ್ಮ ಯುಪಿಎ ಸರ್ಕಾರ ಬರ್ಬಾದ್‌ ಮಾಡಿದ ಬ್ಯಾಂಕಿಂಗ್‌ ವಲಯಕ್ಕೆ ಲಾಭದ ಹಾದಿಯನ್ನು ತೋರಿಸಿದೆ. ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿರುವ  ಮೋದಿ ಸರ್ಕಾರದ ಕ್ರಮದ ಬಗ್ಗೆ ತಮಗೆ ಮಾಹಿತಿ ಇಲ್ಲವೇ? ಇದು ಕನ್ನಡಿಗರಿಗೆ ಬಹುದೊಡ್ಡ ವರದಾನವಲ್ಲವೇ! ಉದ್ಯೋಗ ಮೇಳದ ಮೂಲಕ ಕರ್ನಾಟಕದ ಬ್ಯಾಂಕ್‌ಗಳ ಸಹಿತ ವಿವಿಧ ಬ್ಯಾಂಕ್‌ಗಳಲ್ಲಿನ ಸಾವಿರಾರು ಖಾಲಿ ಹುದ್ದೆಗಳನ್ನು  ಕೇವಲ ಒಂದು ವರ್ಷದಲ್ಲಿ ಭರ್ತಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ಸರ್ಕಾರಿ ವಲಯದ ಬ್ಯಾಂಕ್‌ಗಳ ಅಭಿವೃದ್ಧಿಗಾಗಿ ಕಳೆದ 9 ವರ್ಷಗಳಲ್ಲಿ ಸರ್ಕಾರ ಕೈಗೊಂಡ ಉಪಕ್ರಮದ ಫಲವಾಗಿ ಸರ್ಕಾರಿ ಬ್ಯಾಂಕ್‌ಗಳ ಲಾಭ (2022-23ರಲ್ಲಿ) ರೂ. 1.04 ಲಕ್ಷ ಕೋಟಿಗೆ ಏರಿಕೆ ಆಗಿದೆ. ಸಿದ್ದರಾಮಯ್ಯ ಅವರೇ, ನಿಮ್ಮ ಯುಪಿಎ ಅವಧಿಯಲ್ಲಿ(2013-14ರಲ್ಲಿ) ಈ ಲಾಭ ಕೇವಲ ರೂ. 36,000 ಕೋಟಿ ಮಾತ್ರ ಇತ್ತು! ಈಗ ಮೂರುಪಟ್ಟು ಹೆಚ್ಚಾಗಿದೆ. ಈ ಬಗ್ಗೆ ಜಾಣ ಮೌನವೇಕೆ?! ಎಂದು ವಾಗ್ದಾಳಿ ನಡೆಸಿದ್ದಾರೆ. 

ದೇಶದ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಒಟ್ಟು ಮಾರುಕಟ್ಟೆ ಮೌಲ್ಯ ಮಾರ್ಚ್‌ 2018ರಲ್ಲಿ ಕೇವಲ ರೂ. 4.52 ಲಕ್ಷ ಕೋಟಿ ಇದ್ದಿದ್ದು ಡಿಸೆಂಬರ್‌ 2022ರ ವೇಳೆಗೆ ರೂ. 10.63 ಲಕ್ಷ ಕೋಟಿಗೆ ಏರಿಕೆ ಆಗಿದೆ! PCR 2014ರ ಹಣಕಾಸು ವರ್ಷದಲ್ಲಿ ಕೇವಲ 58.48% ಇದ್ದಿದ್ದು 2023ಕ್ಕೆ 90.72%ಗೆ ಏರಿಕೆ ಆಗಿದೆ. ಇದು ಸಾರ್ವಜನಿಕ ಬ್ಯಾಂಕಿಂಗ್‌ ವಲಯದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕಳೆದ 9 ವರ್ಷಗಳಲ್ಲಿ ಬ್ಯಾಂಕಿಂಗ್‌ ವಲಯ ಲಾಭದ ಹಾದಿಯಲ್ಲಿ ಸಾಗುತ್ತಿದೆ. ಇವೆಲ್ಲವೂ ಕೇವಲ ಒಂದು ದಿನದ ಮ್ಯಾಜಿಕ್‌ ಅಲ್ಲವೇ ಎಂದಿದ್ದಾರೆ. 

17 ಬಾರಿ ಬಜೆಟ್‌ ಮಂಡಿಸಿದ, ಸದ್ಯ ಹಣಕಾಸು ಇಲಾಖೆಯನ್ನು ತಮ್ಮ ಸುಪರ್ದಿಯಲ್ಲಿಯೇ ಇಟ್ಟುಕೊಂಡಿರುವ ಸುಳ್ಳುಗಾರ ಸಿದ್ದರಾಮಯ್ಯ ಅವರೇ, ತಮ್ಮ ಲೆಕ್ಕಾಚಾರ ತಪ್ಪುತ್ತಿರುವುದೇಕೆ? ರಾಜ್ಯವನ್ನು ಅಭಿವೃದ್ಧಿಯ ಹಳಿ ತಪ್ಪಿಸಿರುವ ತಮ್ಮನ್ನು ರಾಜ್ಯದ ಜನತೆ ತಿರಸ್ಕರಿಸುತ್ತಾರೆಂಬ ಭಯದಲ್ಲಿ ಪ್ರಧಾನಿ ಮೋದಿಯವರತ್ತ ಬೊಟ್ಟು ಮಾಡಿ ತಪ್ಪಿಸಿಕೊಳ್ಳುವ ವಿಫಲ ಯತ್ನವನ್ನೇಕೆ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com