ವಿಧಾನಸಭಾ ಚುನಾವಣೆ: 2ನೇ ಪಟ್ಟಿ ಪ್ರಕಟ ಬೆನ್ನಲ್ಲೇ ಕಾಂಗ್ರೆಸ್'ಗೆ ತಲೆನೋವು, 12 ಕ್ಷೇತ್ರಗಳಲ್ಲಿ ಬಂಡಾಯ ನಾಯಕರೇ ಸವಾಲು!

ಚುನಾವಣೆ ಹತ್ತಿರ ಬರುತ್ತಿದ್ದಂತೆ ಯಾವುದೇ ರಾಜಕೀಯ ಪಕ್ಷದಲ್ಲಿ ಟಿಕೆಟ್ ಹಂಚಿಕೆ ನಂತರ ಒಂದಿಷ್ಟು ಅಸಮಾಧಾನ, ಬಂಡಾಯ ಸಹಜವಾಗಿರುತ್ತದೆ. ಅದೇ ರೀತಿ ಕಾಂಗ್ರೆಸ್ ವಿಚಾರದಲ್ಲೂ ಆಗಿದೆ. ಆದರೆ, ನಿರೀಕ್ಷಿಸಿದ ಪ್ರಮಾಣಕ್ಕಿಂತಲೂ ಕೈ ಪಾಳಯದಲ್ಲಿ ಬಂಡಾಯ ಬೆಂಕಿ ಹೆಚ್ಚಾಗಿ ಹೋಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ಯಾವುದೇ ರಾಜಕೀಯ ಪಕ್ಷದಲ್ಲಿ ಟಿಕೆಟ್ ಹಂಚಿಕೆ ನಂತರ ಒಂದಿಷ್ಟು ಅಸಮಾಧಾನ, ಬಂಡಾಯ ಸಹಜವಾಗಿರುತ್ತದೆ. ಅದೇ ರೀತಿ ಕಾಂಗ್ರೆಸ್ ವಿಚಾರದಲ್ಲೂ ಆಗಿದೆ. ಆದರೆ, ನಿರೀಕ್ಷಿಸಿದ ಪ್ರಮಾಣಕ್ಕಿಂತಲೂ ಕೈ ಪಾಳಯದಲ್ಲಿ ಬಂಡಾಯ ಬೆಂಕಿ ಹೆಚ್ಚಾಗಿ ಹೋಗಿದೆ.

ಎರಡನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ ನಂತರ ಕಾಂಗ್ರೆಸ್ ಪಕ್ಷ ಈಗ ಕಾದ ಬಾಣಲೆಯಂತಾಗಿದೆ. 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಟಿಕೆಟ್ ವಂಚಿತರು ಸಿಡಿದಿದ್ದಾರೆ. ಪ್ರತಿಭಟನೆಗಳ ಮೇಲೆ ಪ್ರತಿಭಟನೆಗಳು ನಡೆಸುತ್ತಿದ್ದಾರೆ. ಕೆಪಿಸಿಸಿ ನಾಯಕರ ವಿರುದ್ಧ ಬಹಿರಂಗ ಆಕ್ರೋಶ ಹೊರಹಾಕುತ್ತಿದ್ದಾರೆ.

ಈ ಬಂಡಾಯದ ಲಾಭ ಪಡೆದುಕೊಳ್ಳಲು ಮುಂದಾಗಿರುವ ಜೆಡಿಎಸ್, ಈಗಾಗಲೇ ಹಲವರನ್ನು ಸಂಪರ್ಕಿಸಿಸಿದ್ದು, ಬಂಡಾಯ ನಾಯಕರನ್ನು ಪಕ್ಷಕ್ಕೆ ಆಹ್ವಾನಿಸಿ, ಅವರನ್ನೇ ತನ್ನ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಒಂದೋ ಅವರು ಜೆಡಿಎಸ್ ಅಭ್ಯರ್ಥಿಗಳಾಗಿ ಗೆಲ್ಲುತ್ತಾರೆ ಅಥವಾ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಸಾಧಾರಣ ಅಭ್ಯರ್ಥಿಗಳೆಂದು ಪರಿಗಣಿಸುವ ಸಾಧ್ಯತೆಯನ್ನು ನಾಶಪಡಿಸುತ್ತಾರೆ. ಇದು ಪರೋಕ್ಷವಾಗಿ ಬಿಜೆಪಿಗೂ ಲಾಭವಾಗವನ್ನು ತಂದುಕೊಡಲಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಉದಾಹರಣೆಗೆ ಚಿತ್ರದುರ್ಗದಲ್ಲಿ ಮಾಜಿ ಎಂಎಲ್ ಸಿ ರಘು ಆಚಾರ್ ಅವರನ್ನು ಜೆಡಿಎಸ್ ಎಂಎಲ್ ಸಿ ಟಿಎ ಶರವಣ ಅವರು ಸಂಪರ್ಕಿಸಿದ್ದು,  ರಘು ಆಚಾರ್ ಅವರು ಏಪ್ರಿಲ್ 14 ರಂದು ಜೆಡಿಎಸ್ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

2018 ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಪರಾಭವಗೊಂಡ ನಟ ದೊಡ್ಡಣ್ಣ ಅವರ ಅಳಿಯ ಕೆ.ಸಿ.ವೀರೇಂದ್ರ (ಪಪ್ಪಿ) ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇದೇ ಕ್ಷೇತ್ರದ ಮತ್ತೊಬ್ಬ ಆಕಾಂಕ್ಷಿ ಎಸ್.ಕೆ.ಬಸವರಾಜ್ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಲಾಗಿದೆ.ಕಡೂರಿನಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಶಾಸಕ ವೈಎಸ್ ವಿ ದತ್ತ ಅವರಿಗೆ ಟಿಕೆಟ್ ನೀಡಲಾಗಿಲ್ಲ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ವೈಎಸ್ ವಿ ದತ್ತಾ ಅವರು ತಮ್ಮ ಬೆಂಬಲಿಗರೊಂದಿಗೆ ಭಾನುವಾರ ಸಭೆ ಕರೆದಿದ್ದು, ಸಭೆ ನಡೆಸಿದ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಮೂಲಗಳ ಪ್ರಕಾರ ದತ್ತಾ ಅವರು ಜೆಡಿಎಸ್'ಗೆ ಮರಳಬಹುದು ಎಂದು ಹೇಳಲಾಗುತ್ತಿದೆ.

ಈ ನಡುವೆ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರು, ದತ್ತ ಅವರೊಂದಿಗಿನ ಮಾತುಕತೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದ್ದು, ದತ್ತಾ ಅವರು ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತಾರೆಂಬುದರ ಕುರಿತು ಕುತೂಹಲಗಳು ಮೂಡಿವೆ.

ಕೆಲ ದಿನಗಳ ಹಿಂದಷ್ಟೇ ದತ್ತಾ ಅವರು ಮಾತನಾಡಿದ್ದಾರೆನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲ ವೈರಲ್ ಆಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿಎಂ ಆಗುವ ಸಾಧ್ಯತೆ ಇಲ್ಲ ಎಂದು ಭವಿಷ್ಯ ನುಡಿದ ಆಡಿಯೋ ವೈರಲ್ ಆಗಿತ್ತು. ಇದರಿಂದಾಗಿ ಅವರಿಗೆ ಟಿಕೆಟ್ ನೀಡಲಾಗಿಲ್ಲ ಎಂದು ಹೇಳಲಾಗುತ್ತಿದೆ.

ಈ ನಡುವೆ ಮಾಜಿ ಡಿಸಿಎಂ ಜಿ ಪರಮೇಶ್ವರ ಅವರ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಹಿರಿಯ ನಾಯಕ ಎಸ್ ಶಫಿ ಅಹಮದ್ ರಾಜೀನಾಮೆ ನೀಡಿದ್ದಾರೆ. ಇಕ್ಬಾಲ್ ಅಹ್ಮದ್‍ಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿರುವ ಮಾಜಿ ಶಾಸಕ ಶಫಿ ಅಹ್ಮದ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಇನ್ನು ಕಲಘಟಗಿಯಲ್ಲಿ ಬಂಡಾಯವೆದ್ದಿರುವ ನಾಗರಾಜ್ ಚೆಬ್ಬಿಗೆ ಬದಲಾಗಿ ಮಾಜಿ ಸಚಿವ ಸಂತೋಷ್ ಎಲ್ ಲಾಡ್ ಗೆ ಆದ್ಯತೆ ನೀಡಲಾಗಿದೆ.

ಬೇಲೂರಿನಲ್ಲಿ ಕಾಂಗ್ರೆಸ್ ರಾಜಶೇಖರ್ ಅವರನ್ನು ಬಿಟ್ಟು ಬಿ ಶಿವರಾಮ್ ಅವರನ್ನು ಆಯ್ಕೆ ಮಾಡಲಾಗಿದೆ. ಸವದತ್ತಿಯಲ್ಲಿ ವಿಶ್ವಾಸ್ ವಸಂತ್ ವೈದ್ಯ ಸೌದಾಭ ಚೋಪ್ರಾರಿಂದ ಬಂಡಾಯ ಶುರುವಾಗಿದೆ. ಗೋಕಾಕದಲ್ಲಿ ಅಶೋಕ ಪೂಜಾರಿಯವರಿಂದ ಅಶೋಕ ಕಡಾಡಿ ಬಂಡಾಯ ಎದುರಿಸುತ್ತಿದ್ದಾರೆ.

ಕಿತ್ತೂರಿನಲ್ಲಿ ತಮ್ಮ ಮಗ ಅಥವಾ ಸೊಸೆಗೆ ಟಿಕೆಟ್ ಬಯಸಿದ ಡಿಬಿ ಇನಾಮದಾರ ಅವರು ಲೆಫ್ಟಿನೆಂಟ್ ಬಾಬಾಸಾಹೇಬ್ ಪಾಟೀಲ್ ವಿರುದ್ಧ ಪ್ರಚಾರ ಮಾಡಬಹುದು ಎಂದು ಹೇಳಲಾಗುತ್ತಿದೆ.

ಯಾದಗಿರಿಯಲ್ಲಿ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್‌ಗೆ ಟಿಕೆಟ್‌ ನೀಡಲಾಗಿದೆ. ಈ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿಗಳಾದ ಅಬ್ದುಲ್ ಜಲೀಲ್, ಎಸ್‍ಬಿ ಕಾಮರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಪಕ್ಷದಲ್ಲಿನ ಬಂಡಾಯಕ್ಕೆ ಕಾಂಗ್ರೆಸ್‌ನವರೇ ಕಾರಣ ಎಂದು ಹೇಳಲಾಗುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಆಕಾಂಕ್ಷಿಗಳು 2 ಲಕ್ಷ ಠೇವಣಿ ಮತ್ತು ಅರ್ಜಿ ಶುಲ್ಕವಾಗಿ 5,000 ರೂಪಾಯಿಗಳನ್ನು ಪಾವಲತಿ ಮಾಡುವಂತೆ ಸೂಚಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com