ಜಾರಕಿಹೊಳಿ ಆಪ್ತರಿಗೆ ದಾರಿ ಮಾಡಿಕೊಡಲು ಸಮರ್ಥ ನಾಯಕರ ನಿರ್ಲಕ್ಷಿಸಿದ ಬಿಜೆಪಿ!

ಸಿಡಿ ಕೇಸ್ ಬಳಿಕ ತಮ್ಮನ್ನು ದೂರವಿಟ್ಟಿದ್ದ ಪಕ್ಷದ ನಾಯಕರು ಪ್ರಮುಖವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಟಿಕೆಟ್ ವಿಚಾರದಲ್ಲಿ ತಿರುಗೇಟು ನೀಡುವಲ್ಲಿ ಮಾಜಿ ಶಾಸಕ ರಮೇಶ್ ಜಾರಕಿಹೊಳಿಯವರು ಯಶಸ್ವಿಯಾಗಿದ್ದಾರೆ.
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಬೆಳಗಾವಿ: ಸಿಡಿ ಕೇಸ್ ಬಳಿಕ ತಮ್ಮನ್ನು ದೂರವಿಟ್ಟಿದ್ದ ಪಕ್ಷದ ನಾಯಕರು ಪ್ರಮುಖವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಟಿಕೆಟ್ ವಿಚಾರದಲ್ಲಿ ತಿರುಗೇಟು ನೀಡುವಲ್ಲಿ ಮಾಜಿ ಶಾಸಕ ರಮೇಶ್ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ತಮ್ಮ ಆಪ್ತರಿಗೆ ಹಾಗೂ ತಮಗೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ರಮೇಶ್ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಪಕ್ಷದಲ್ಲಿನ ತಮ್ಮ ಎದುರಾಳಿಗಳಿಗೆ ತಿರುಗೇಟು ನೀಡಿದ್ದಾರೆ.

ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಬೆಳಗಾವಿ ಭಾಗದಲ್ಲಿ ಮಹೇಶ್ ಕುಮಟಳ್ಳಿ, ಶ್ರೀಮಂತ್ ಪಾಟೀಲ್, ನಾಗೇಶ್ ಮನ್ನೋಳ್ಕರ್, ವಿಠಲ್ ಹಾಲ್ಗೇಕರ್, ಚಿಕ್ಕ ರೇವಣ್ಣ ಸೇರಿದಂತೆ ಜಾರಕಿಹೊಳಿಯವರ ಎಲ್ಲಾ ಆಪ್ತರಿಗೂ ಟಿಕೆಟ್ ನೀಡಿದೆ.

ಚುನಾವಣೆಯಲ್ಲಿ ಗೆಲ್ಲಲು ಸಮರ್ಥರಾಗಿದ್ದ ಬೆಳಗಾವಿ ಗ್ರಾಮಾಂತರದ ಮಾಜಿ ಶಾಸಕ ಸಂಜಯ ಪಾಟೀಲ್, ರಾಮದುರ್ಗದ ಹಾಲಿ ಶಾಸಕ ಮಹದೇವಪ್ಪ ಯಾದವಾಡ, ಅಥಣಿಯ ಎಂಎಲ್‌ಸಿ ಲಕ್ಷ್ಮಣ ಸವದಿ ಮತ್ತು ಖಾನಾಪುರದ ಮಾಜಿ ಶಾಸಕ ಅರವಿಂದ ಪಾಟೀಲ್ ಮತ್ತು ಸೋನಾಲಿ ಸರ್ನೋಬತ್ ಅವರನ್ನು ಬದಿಗಿಟ್ಟು, ಪಕ್ಷವು ಜಾರಕಿಹೊಳಿ ಆಪ್ತರಿಗೆ ಟಿಕೆಟ್ ನೀಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರ ರಚನೆ ಮಾಡಲು ರಮೇಶ್ ಜಾರಕಿಹೊಳಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಅವರೊಂದಿಗೆ ಪಕ್ಷಕ್ಕೆ ಬಂದಿದ್ದ ಬಹುತೇಕ ಶಾಸಕರ ಮೇಲೆ ಬಿಜೆಪಿ ನಂಬಿಕೆ ಇರಿಸಿ ಟಿಕೆಟ್ ನೀಡಿದೆ.

ಕಳೆದ ಕೆಲವು ವಾರಗಳ ಹಿಂದೆ ಹೇಳಿಕೆ ನೀಡಿದ್ದ ಜಾರಕಿಹೊಳಿ ಅವರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಂದ ಎಲ್ಲಾ ಶಾಸಕರಿಗೂ ಟಿಕೆಟ್ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಈ ಹೇಳಿಕೆಯನ್ನು ಲಕ್ಷ್ಮಣ್ ಸವದಿ ನಿರಾಕರಿಸುತ್ತಲೇ ಬಂದಿದ್ದರು. ಆದರೆ, ಕೊನೆಗೂ ತಮಗೆ ಹಾಗೂ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ.

ಈ ಹಿಂದೆ ಜಾರಕಿಹೊಳಿ ಆಪ್ತರಾಗಿದ್ದ ಅಥಣಿಯ ಹಾಲಿ ಶಾಸಕ ಮಹೇಶ ಕುಮಟಳ್ಳಿ ಅವರನ್ನು ರಾಜ್ಯ ಸಚಿವ ಸಂಪುಟದಿಂದ ಹೊರಗಿಡಲಾಗಿತ್ತು. ಆದರೆ, ಅಥಣಿಯಿಂದ ಸ್ಪರ್ಧಿಸಿ ಮಹೇಶ ಕುಮಟಳ್ಳಿ ವಿರುದ್ಧ ಸೋಲು ಕಂಡಿದ್ದ ಸವದಿ ಅವರಿಗೆ ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಡಿಸಿಎಂ ಪೋಸ್ಟ್ ನೀಡಲಾಗಿತ್ತು. ಹೀಗಾಗಿ ಪಕ್ಷದ ಹೈಕಮಾಂಡ್‌ನೊಂದಿಗೆ ಸವದಿ ಅವರ ಸಂಪರ್ಕವನ್ನು ಗಮನಿಸಿದರೆ, ಕುಮಟಳ್ಳಿ ಬದಲಿಗೆ ಸವದಿ ಅವರಿಗೇ ಅಥಣಿ ಕ್ಷೇತ್ರದಿಂದ ಕಣಕ್ಕಿಳಿಸಲಾಗುತ್ತದೆ ಪಕ್ಷದ ಹಲವು ಮುಖಂಡರು ನಂಬಿಕೆ ಇಟ್ಟಿದ್ದರು.

ಆದರೆ, ಕೆಲ ತಿಂಗಳ ಹಿಂದೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದ ಜಾರಕಿಹೊಳಿ, ಪಕ್ಷಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆಂದು ಮೂಲಗಳು ತಿಳಿಸಿವೆ.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಮುಖ ನಾಯಕರಾದ ಸಂಜಯ್ ಪಾಟೀಲ್ ಮತ್ತು ಧನಂಜಯ್ ಜಾಧವ್ ಅವರ ಬದಲಿಗೆ ಜಾರಕಿಹೊಳಿ ಅವರ ಆಪ್ತ ಮನ್ನೋಳ್ಕರ್ ಅವರಿಗೆ ಟಿಕೆಟ್ ನೀಡಲಾಗಿದೆ. ಕ್ಷೇತ್ರದಲ್ಲಿ ಹೆಚ್ಚಿನ ಮರಾಠಿಗರನ್ನು ಸೆಳೆಯಲು ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಮನ್ನೋಳ್ಕರ್ ಅವರನ್ನು ಕಣಕ್ಕಿಳಿಸುವಂತೆ ಪಕ್ಷದ ನಾಯಕತ್ವದ ಮೇಲೆ ಜಾರಕಿಹೊಳಿ ಒತ್ತಡ ಹೇರಿದ್ದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಾಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಬಲ ಅಭ್ಯರ್ಥಿಯಾಗಿದ್ದರೂ ಜಾರಕಿಹೊಳಿ ಶಿಫಾರಸ್ಸಿನ ಮೇರೆಗೆ ಮನ್ನೋಳ್ಕರ್ ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ.

ಇತ್ತೀಚೆಗೆ ನವದೆಹಲಿಯಲ್ಲಿ ಅಮಿತ್ ಶಾ ಮತ್ತು ಬಿಜೆಪಿಯ ಇತರ ಹಲವು ಪ್ರಮುಖ ನಾಯಕರಿಗೆ ಜಾರಕಿಹೊಳಿ ಅವರು ಮನ್ನೋಳ್ಕರ್ ಅವರನ್ನು ಪರಿಚಯಿಸಿದ್ದರು.

ಖಾನಾಪುರ ಹಾಲಿ ಶಾಸಕಿ ಕಾಂಗ್ರೆಸ್‌ನ ಅಂಜಲಿ ನಿಂಬಾಳ್ಕರ್ ವಿರುದ್ಧ ಬಿಜೆಪಿ ವಿಠಲ್ ಹಾಲ್ಗೇಕರ್ ಅವರನ್ನು ಕಣಕ್ಕಿಳಿಸಿದ್ದು, ಮಾಜಿ ಶಾಸಕ ಅರವಿಂದ ಪಾಟೀಲ ಮತ್ತು ಸೋನಾಲಿ ಸರ್ನೋಬತ್ ರೇಸ್‌ನಲ್ಲಿದ್ದರು.

ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಮಾಜಿ ನಾಯಕ ಅರವಿಂದ್ ಪಾಟೀಲ್, ಸವದಿ ಅವರ ಒತ್ತಡದಿಂದ ಬಿಜೆಪಿಗೆ ಬಂದಿದ್ದರು. ಪಕ್ಷದ ಹಲವು ನಾಯಕರು ಅವರನ್ನು ಅಂಜಲಿ ನಿಂಬಾಳ್ಕರ್ ಅವರನ್ನು ಸೋಲಿಸುವ ಸಂಭಾವ್ಯ ನಾಯಕ ಎಂದು ಊಹಿಸಿದ್ದರು, ಆದರೆ ಪಕ್ಷವು ಸವದಿ ಮತ್ತು ಪಾಟೀಲ್ ಇಬ್ಬರನ್ನೂ ಕಡೆಗಣಿಸಿದೆ. ಇನ್ನು ರಾಮದುರ್ಗದಲ್ಲಿ ಜಾರಕಿಹೊಳಿ ಅವರ ಅಪ್ತ ಚಿಕ್ಕ ರೇವಣ್ಣ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಹಾಲಿ ಶಾಸಕ ಯಾದವಾಡ ಸೇರಿದಂತೆ ಹಲವು ಆಕಾಂಕ್ಷಿಗಳನ್ನು ಪಕ್ಷ ನಿರ್ಲಕ್ಷಿಸಿದೆ.

ಬೆಳಗಾವಿಯ 18 ಸ್ಥಾನಗಳಲ್ಲಿ ಬಿಜೆಪಿ ಪ್ರಸ್ತುತ 13 ಸ್ಥಾನಗಳನ್ನು ಹೊಂದಿದ್ದರೂ, ಕೆಲವು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಸಹಾಯದಿಂದ ಎಲ್ಲಾ ಸ್ಥಾನಗಳನ್ನು ಉಳಿಸಿಕೊಳ್ಳುವುದು ಪಕ್ಷಕ್ಕೆ ಸವಾಲಾಗಿ ಪರಿಣಮಿಸುವ ಸಾಧ್ಯತೆಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com