ಚುನಾವಣಾ ಅಖಾಡಕ್ಕಿಳಿದ ಕೇಸರಿ ಕಲಿಗಳು: ಬಿಎಸ್'ವೈ ಸ್ಥಾನ ತುಂಬಲು ಬೊಮ್ಮಾಯಿ ಯತ್ನ!

ಮೇ.10ರಿಂದ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ನಡುವಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಬ್ಬರದ ಪ್ರಚಾರಕ್ಕೆ ಭಾನುವಾರ ಚಾಲನೆ ನೀಡಿದರು.
ತುಮಕೂರಿನಲ್ಲಿ ಭಾನುವಾರ ನಡೆದ ರೋಡ್ ಶೋನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
ತುಮಕೂರಿನಲ್ಲಿ ಭಾನುವಾರ ನಡೆದ ರೋಡ್ ಶೋನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

ಬೆಂಗಳೂರು: ಮೇ.10ರಿಂದ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ನಡುವಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಬ್ಬರದ ಪ್ರಚಾರಕ್ಕೆ ಭಾನುವಾರ ಚಾಲನೆ ನೀಡಿದರು.

ಬಸವ ಜಯಂತಿ ನಿಮಿತ್ತ 12ನೇ ಶತಮಾನದ ದಾರ್ಶನಿಕ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರೋಡ್ ಶೋ ನಡೆಸಿದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ತಾನ ತುಂಬಲು ಯತ್ನ ನಡೆಸುತ್ತಿರುವುದು ಕಂಡು ಬಂದಿತು.

ಈಗಾಗಲೇ ಹೈಕಮಾಂಡ್ ಬೊಮ್ಮಾಯಿಯವರನ್ನು ಪಕ್ಷದ ರಾಜ್ಯದ ನಾಯಕನೆಂದು ಬಿಂಬಿಸಿದ್ದು, ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಸ್ಥಾನವನ್ನು ತುಂಬಲು ಯತ್ನಿಸಿರುವ ಬೊಮ್ಮಾಯಿಯವರು, ಯಡಿಯೂರಪ್ಪನವರ ಅನುಪಸ್ಥಿತಿಯಲ್ಲಿ ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ತುಮಕೂರಿನಲ್ಲಿ ರೋಡ್ ಶೋಗಳನ್ನು ನಡೆಸಿದರು. ಈ ವೇಲೆ ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿದರು.

ಪ್ರಚಾರದ ವೇಳೆ ಕರ್ನಾಟಕವನ್ನು ಕಾಂಗ್ರೆಸ್‌ನಿಂದ ಮುಕ್ತಗೊಳಿಸಬೇಕು ಎಂಬ ಹೈಕಮಾಂಡ್ ನಾಯಕರ ಹೇಳಿಕೆಯನ್ನು ಪುನರುಚ್ಚರಿಸಿದ ಬೊಮ್ಮಾಯಿ ಅವರು, ಜೆಡಿಎಸ್‌ಗೆ ಮತ ಹಾಕಿದರೆ ಕಾಂಗ್ರೆಸ್‌ಗೆ ಮತ ಹಾಕಿದಂತೆ ಎಂದು ಮತದಾರರಿಗೆ ಎಚ್ಚರಿಕೆ ನೀಡಿದರು.

ಇದೇ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ ಅವರು, ಕಾಂಗ್ರೆಸ್ ನಾಯಕರು ಹತಾಶೆಗೊಳಗಾಗಿದ್ದಾರೆ. ಹೀಗಾಗಿಯೇ ಬಿಜೆಪಿಯಲ್ಲಿ ಟಿಕೆಟ್ ಸಿಗದವರನ್ನು ಕರೆದುಕೊಂಡು ಹೋಗಿದ್ದಾರೆ. ಕುಂಡಲಿಯಲ್ಲಿರುವ ಗಿಡಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ, ಬಿಜೆಪಿ ಆಳವಾದ ಬೇರು ಬಿಟ್ಟು ಹೆಮ್ಮರವಾಗಿದೆ. ಇದನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದರು.

ಕಾಂಗ್ರೆಸ್ ಆಡಳಿತದಲ್ಲಿ ನೇಕಾರರು ಕಷ್ಟಗಳನ್ನು ಎದುರಿಸುತ್ತಿದ್ದರು. ಆದರೆ, ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಇವರಿಗಾಗಿ ಹಲವು ಯೋಜನೆಗಳನ್ನು ತಂದರು.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ದೊಡ್ಡಬಳ್ಳಾಪುರವನ್ನು ಅಭಿವೃದ್ಧಿಪಡಿಸಲಾಗುತ್ತದೆ, ಶಿಕ್ಷಣ, ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತದೆ ಎಂದರು ಹೇಳಿದರು.

ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅನ್ಯಾಯ ಮತ್ತು ಅನೀತಿಯೊಂದಿಗೆ ಸಂಬಂಧ ಹೊಂದಿದ್ದು, ಅದನ್ನು ಬೇರುಸಹಿತ ಕಿತ್ತೊಗೆಯಬೇಕು. ಹಿಂದಿನ ಸಿದ್ದರಾಮಯ್ಯ ಸರಕಾರ ನಾನಾ ಹಗರಣಗಳನ್ನು ನಡೆಸಿ ರಾಜ್ಯದ ಸಂಪತ್ತನ್ನು ಲೂಟಿ ಮಾಡಿದೆ. ಕಾಂಗ್ರೆಸ್ ಪಕ್ಷವು ಜನರನ್ನು ವಿಭಜಿಸಲು ಮತ್ತು ಸಮಾಜದಲ್ಲಿ ದ್ವೇಷದ ಬೀಜಗಳನ್ನು ಬಿತ್ತಲು ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಜಕ ತಂತ್ರಗಳನ್ನು ಬಳಸಿದೆ. ಎಲ್ಲ ಸಮುದಾಯಗಳಿಗೆ ಸಮಾನವಾಗಿ ಉತ್ತಮ ಆಡಳಿತ ನೀಡುವುದು, ಬಡವರು, ದೀನದಲಿತರ ರಕ್ಷಣೆ, ಸಮಾಜ ಸುಧಾರಕ ಬಸವಣ್ಣ ಮತ್ತು ಡಾ.ಬಿ.ಆರ್.ರವರ ತತ್ವಾದರ್ಶಗಳನ್ನು ಪಾಲಿಸುವುದು ಬಿಜೆಪಿ ಸರ್ಕಾರ ಗುರಿಯಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com