ಧರ್ಮ ಆಧರಿತ ಮೀಸಲಾತಿ ಸಂವಿಧಾನಕ್ಕೆ ವಿರುದ್ಧ, ಕಾಂಗ್ರೆಸ್ ಪಿಎಫ್ಐನ್ನು ಓಲೈಸುತ್ತಿದೆ: ಯೋಗಿ ಆದಿತ್ಯನಾಥ್

ಕರ್ನಾಟಕ ಚುನಾವಣಾ ಕಣ ರಂಗೇರುತ್ತಿದೆ. ಇದೇ ಮೊದಲ ಬಾರಿಗೆ ಕೇಸರಿ ಪಾಳೆಯದಿಂದ ಸ್ಟಾರ್ ಪ್ರಚಾರಕರಾಗಿ ಬುಲ್ಡೋಜರ್ ಬಾಬಾ ಖ್ಯಾತಿಯ, ಪ್ರಖರ ಹಿಂದುತ್ವವಾದಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸಕ್ಕರೆ ನಾಡು ಮಂಡ್ಯಕ್ಕೆ ಎಂಟ್ರಿಯಾಗಿದೆ. 
ಯೋಗಿ ಆದಿತ್ಯನಾಥ್(ಸಂಗ್ರಹ ಚಿತ್ರ)
ಯೋಗಿ ಆದಿತ್ಯನಾಥ್(ಸಂಗ್ರಹ ಚಿತ್ರ)

ಮಂಡ್ಯ: ಕರ್ನಾಟಕ ಚುನಾವಣಾ ಕಣ ರಂಗೇರುತ್ತಿದೆ. ಇದೇ ಮೊದಲ ಬಾರಿಗೆ ಕೇಸರಿ ಪಾಳೆಯದಿಂದ ಸ್ಟಾರ್ ಪ್ರಚಾರಕರಾಗಿ ಬುಲ್ಡೋಜರ್ ಬಾಬಾ ಖ್ಯಾತಿಯ, ಪ್ರಖರ ಹಿಂದುತ್ವವಾದಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸಕ್ಕರೆ ನಾಡು ಮಂಡ್ಯಕ್ಕೆ ಎಂಟ್ರಿಯಾಗಿದೆ. 

ಕರ್ನಾಟಕದಲ್ಲಿ ತಮ್ಮ ಮೊದಲ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದು,ಕಾಂಗ್ರೆಸ್ ಧರ್ಮಾಧಾರಿತ ಮೀಸಲಾತಿಗೆ ಒತ್ತು ನೀಡುತ್ತಿದ್ದು ಅದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.

ಕಳೆದ ಆರು ವರ್ಷಗಳಲ್ಲಿ ಉತ್ತರ ಪ್ರದೇಶ ರಾಜ್ಯದಲ್ಲಿ ಯಾವುದೇ ದಂಗೆ, ಗಲಭೆಗಳು ನಡೆದಿಲ್ಲ, ಅದಕ್ಕೆ ಕೇಂದ್ರ ಮತ್ತು ರಾಜ್ಯದಲ್ಲಿರುವ ಡಬಲ್ ಎಂಜಿನ್ ಸರ್ಕಾರವೇ ಕಾರಣ, ಕರ್ನಾಟಕದಲ್ಲಿಯೂ ಈ ಬಾರಿ ಕಮಲ ಪಕ್ಷವನ್ನು ಅಧಿಕಾರಕ್ಕೆ ತಂದು ಡಬಲ್ ಎಂಜಿನ್ ಸರ್ಕಾರದ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಮತದಾರರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. 

"ಕಾಂಗ್ರೆಸ್ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ನ್ನು ಓಲೈಸಲು ನೋಡುತ್ತದೆ. ಹೀಗಾಗಿ ಧರ್ಮಾಧರಿತ ಮೀಸಲಾತಿಗೆ ಒತ್ತು ನೀಡುತ್ತಿದ್ದು ಅದು ನಮ್ಮ ದೇಶದ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಜೆಡಿಎಸ್ ನ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ ಸಿಎಂ ಆದಿತ್ಯನಾಥ್ ಹೇಳಿದ್ದಾರೆ.

ಇತರ ಹಿಂದುಳಿದ ವರ್ಗಗಳ 2ಬಿ ವರ್ಗದಡಿಯಲ್ಲಿ ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿಯನ್ನು ಉಲ್ಲೇಖಿಸಿದ ಅವರು, ಕರ್ನಾಟಕದ ಬಿಜೆಪಿ ಸರ್ಕಾರವು ತನ್ನ ಅಧಿಕಾರಾವಧಿಯ ಅಂತ್ಯದಲ್ಲಿ ಧರ್ಮಾಧಾರಿತ ಕೋಟಾಕ್ಕೆ ಸಾಂವಿಧಾನಿಕ ಬೆಂಬಲವಿಲ್ಲ ಎಂದು ಹೇಳಿರುವುದಕ್ಕೆ ಬೆಂಬಲ ಸೂಚಿಸಿದರು.

2B ಮೀಸಲಾತಿಯನ್ನು ರದ್ದುಗೊಳಿಸಿದ ನಂತರ, ಕರ್ನಾಟಕ ಸರ್ಕಾರವು ಶೇಕಡಾ 4 ಮೀಸಲಾತಿಯನ್ನು ಎರಡು ಸಮಾನ ಭಾಗಗಳಾಗಿ ವಿಭಜಿಸಿ ರಾಜ್ಯದ ಎರಡು ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ಕ್ರಮವಾಗಿ 2ಸಿ ಮತ್ತು 2ಡಿ ವಿಭಾಗಗಳಲ್ಲಿ ಶೇಕಡಾ 2ರಷ್ಟು ಮೀಸಲಾತಿಯನ್ನು ಕಲ್ಪಿಸಿದೆ. 

ಭಾರತವನ್ನು 1947 ರಲ್ಲಿ ಧರ್ಮದ ಆಧಾರದ ಮೇಲೆ ವಿಭಜಿಸಲಾಯಿತು. ದೇಶವನ್ನು ಧರ್ಮದ ಆಧಾರದ ಮೀಸಲಾತಿ ನಿರ್ಧರಿಸಲು ಸಾಧ್ಯವಿಲ್ಲ, ನಾವು ಮತ್ತೊಂದು ವಿಭಜನೆಗೆ ಸಿದ್ಧರಿಲ್ಲ ಎಂದು ಆದಿತ್ಯನಾಥ್ ಹೇಳಿದರು.

ಕೇಂದ್ರ ಮತ್ತು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಗಳು ಪಿಎಫ್‌ಐನ್ನು ನಿಷೇಧಿಸಿವೆ. ಈ ಮೂಲಕ ಸಂಘಟನೆಯ ಬೆನ್ನು ಮುರಿದಿದೆ. ಉತ್ತರ ಪ್ರದೇಶದಲ್ಲಿ ಡಬಲ್ ಎಂಜಿನ್ ಸರ್ಕಾರ ಭದ್ರತೆ ಮತ್ತು ಸಮೃದ್ಧಿಯ ಭರವಸೆಯನ್ನು ಜನರಿಗೆ ನೀಡಿದ್ದು ಈಡೇರಿಸಿದೆ. ಅಲ್ಲಿ ಕರ್ಫ್ಯೂ ಇಲ್ಲ ಮತ್ತು ಗಲಭೆಯೂ ಇಲ್ಲ. ಅಲ್ಲಿ ಎಲ್ಲವೂ ಚೆನ್ನಾಗಿದೆ, ಕಳೆದ ಆರು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಯಾವುದೇ ಗಲಭೆ ನಡೆದಿಲ್ಲ ಎಂದು ಸಮರ್ಥಿಸಿಕೊಂಡರು. 

ಬಿಜೆಪಿ ನಂಬಿರುವ 'ಏಕ್ ಭಾರತ್, ಶ್ರೇಷ್ಠ ಭಾರತ' (ಒಂದು ಭಾರತ, ಶ್ರೇಷ್ಠ ಭಾರತ) ಪರಿಕಲ್ಪನೆಯು ಭಾರತವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು. ಕರ್ನಾಟಕದಲ್ಲಿ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com