ಕಾಂಗ್ರೆಸ್ ಸೇರ್ತಾರೆ ಎಂಬ ವದಂತಿ ನಡುವೆ ಸಿಎಂ ಸಿದ್ದರಾಮಯ್ಯ ಭೇಟಿಯಾದ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್!
ಲೋಕಸಭಾ ಚುನಾವಣೆಗೂ ಮುನ್ನಾ ಆಪರೇಷನ್ ಹಸ್ತ' ಮೂಲಕ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಕೆಲ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದ್ದು, ಈ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ.
Published: 20th August 2023 09:31 PM | Last Updated: 21st August 2023 01:29 PM | A+A A-

ಎಸ್.ಟಿ.ಸೋಮಶೇಖರ್, ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನಾ ಆಪರೇಷನ್ ಹಸ್ತ' ಮೂಲಕ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಕೆಲ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದ್ದು, ಈ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ.
2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ 'ಬಾಂಬೆ ಫ್ರೆಂಡ್ಸ್' ನ ಕೆಲವರು ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ. ಅದರಲ್ಲೂ ಬಿಜೆಪಿಯಿಂದ ಅಸಮಾಧಾನಗೊಂಡಿರುವ ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್, ಮಾಜಿ ಸಚಿವರಾದ ಶಿವರಾಮ್ ಹೆಬ್ಬಾರ್, ಡಾ. ಕೆ.ಸುಧಾಕರ್, ಮುನಿರತ್ನ ಮತ್ತಿತರರು ಕಾಂಗ್ರೆಸ್ ನತ್ತ ಮುಖ ಮಾಡಿದ್ದು, ಅವರ ಮನವೊಲಿಸುವ ಕಾರ್ಯದಲ್ಲಿ ಬಿಜೆಪಿ ಹಿರಿಯ ನಾಯಕರಾದ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮತ್ತಿತರರು ನಿರಂತರ ಸಭೆ, ಸಂಪರ್ಕದಲ್ಲಿ ಇದ್ದಾರೆ ಎಂಬ ವದಂತಿ ಹಬ್ಬಿದೆ.
ಇದನ್ನೂ ಓದಿ: ಎಸ್.ಟಿ. ಸೋಮಶೇಖರ್ ಅಸಮಾಧಾನ ತಣಿಸಲು ಬಿಜೆಪಿಯಿಂದ ಇಬ್ಬರು ಮುಖಂಡರ ಉಚ್ಛಾಟನೆ!
ಎಸ್.ಟಿ ಸೋಮಶೇಖರ್ ಅವರ ಅಸಮಾಧಾನವನ್ನು ತಣಿಸುವ ನಿಟ್ಟಿನಲ್ಲಿ ಇಂದು ಯಶವಂತಪುರ ಕ್ಷೇತ್ರದ ಇಬ್ಬರು ಬಿಜೆಪಿ ಮುಖಂಡರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇರೆಗೆ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಮಧ್ಯೆ ಎಸ್.ಟಿ. ಸೋಮಶೇಖರ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಎಸ್.ಟಿ. ಸೋಮಶೇಖರ್ ಇಂದು ತಮ್ಮನ್ನು ಭೇಟಿಯಾಗಿರುವ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು, ಸೋಮಶೇಖರ್ ತಮ್ಮ ಕ್ಷೇತ್ರದ ಅಭಿವೃದ್ಧಿ ವಿಷಯದ ಬಗ್ಗೆ ಚರ್ಚಿಸಿದರು ಎಂದು ಹೇಳಿದ್ದಾರೆ.
ಮಾಜಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಇಂದು ಮುಖ್ಯಮಂತ್ರಿ @siddaramaiah ಅವರನ್ನು ಭೇಟಿ ಮಾಡಿ ತಮ್ಮ ಕ್ಷೇತ್ರದ ಅಭಿವೃದ್ಧಿ ವಿಷಯದ ಬಗ್ಗೆ ಚರ್ಚಿಸಿದರು. pic.twitter.com/Z1OLkqhf0h
— CM of Karnataka (@CMofKarnataka) August 20, 2023
ಇದನ್ನೂ ಓದಿ: ಎಸ್.ಟಿ. ಸೋಮಶೇಖರ್ ಬಿಜೆಪಿ ತೊರೆದು ಪುನಃ ಕಾಂಗ್ರೆಸ್ ಸೇರ್ತಾರಾ? ಯಶವಂತಪುರ ಶಾಸಕ ಹೇಳಿದ್ದು ಹೀಗೆ....
ಆದರೆ, ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ಸೇರ್ತಾರೆ ಎಂಬ ವದಂತಿ ನಡುವೆ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ಮುಂದಿನ ರಾಜ್ಯಕೀಯ ವಿದ್ಯಮಾನಗಳ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ. ಇತ್ತೀಚಿಗೆ ಸೋಮಶೇಖರ್ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಸಭೆಯೊಂದರಲ್ಲಿ ವೇದಿಕೆ ಹಂಚಿಕೊಂಡು ಹಾಡಿ ಹೊಗಳಿದ್ದರು.