ಕಾವೇರಿ ವಿವಾದ: ರಾಜಕೀಯ ಲಾಭ ಪಡೆಯಲು ಕನ್ನಡಿಗರ ಹಿತವನ್ನೇ ಬಲಿಕೊಟ್ಟಿದ್ದಾರೆ; ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ಆಪ್

ಆಮ್ ಆದ್ಮಿ ಪಕ್ಷ (ಎಎಪಿ) ಮಂಗಳವಾರ ಆಯೋಜಿಸಿದ್ದ ವಿಶೇಷ ದುಂಡು ಮೇಜಿನ ಸಭೆಯಲ್ಲಿ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಕಾವೇರಿ ನೀರು ಬಿಡಬಾರದು ಎಂಬ ನಿರ್ಣಯ ಕೈಗೊಳ್ಳಲಾಯಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಆಮ್ ಆದ್ಮಿ ಪಕ್ಷ (ಎಎಪಿ) ಮಂಗಳವಾರ ಆಯೋಜಿಸಿದ್ದ ವಿಶೇಷ ದುಂಡು ಮೇಜಿನ ಸಭೆಯಲ್ಲಿ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಕಾವೇರಿ ನೀರು ಬಿಡಬಾರದು ಎಂಬ ನಿರ್ಣಯ ಕೈಗೊಳ್ಳಲಾಯಿತು.

ಶಾಸಕರ ಭವನದಲ್ಲಿ ರೈತಪರ ಸಂಘಟನೆಗಳು, ಕನ್ನಡ ಪರ ಹೋರಾಟ ಸಂಘಗಳು, ನಾಡಿನ ನೀರಾವರಿ ತಜ್ಞರು, ಸಾಹಿತಿಗಳು ಹಾಗೂ ಚಿಂತಕರನ್ನೊಳಗೊಂಡ 'ನಮ್ಮ ಜಲ ನಮ್ಮದು - ಬನ್ನಿ ಮಾತಾಡೋಣ' ವಿಶೇಷ ದುಂಡುಮೇಜಿನ ಸಭೆ ಮಂಗಳವಾರ ನಡೆಯಿತು.

ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ರವರು ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಇತರ ನಾಯಕರ ನೇತೃತ್ವದಲ್ಲಿ ಸಭೆ ನಡೆಯಿತು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಅವರು, ‘ಕಾವೇರಿ ನೀರು ನಿಯಂತ್ರಣ ಸಮಿತಿ’ಯ ನಿರ್ದೇಶನದಂತೆ ನೀರು ಬಿಟ್ಟಿದ್ದೇವೆ ಎಂದು ಬೇಜವಾಬ್ದಾರಿಯಿಂದ ಹೇಳುತ್ತಿರುವ ರಾಜ್ಯ ಸರ್ಕಾರ ಅಧಿಕಾರ ಉಳಿಸಿಕೊಳ್ಳಲು ಹಾಗೂ ರಾಜಕೀಯ ಲಾಭ ಪಡೆಯಲು ಕನ್ನಡಿಗರ ಹಿತವನ್ನೇ ಬಲಿ ಕೊಟ್ಟಿದೆ ಎಂದು ಗುಡುಗಿದ್ದಾರೆ.

ಕರ್ನಾಟಕದಲ್ಲಿ ಈ ವರ್ಷ ನಿರೀಕ್ಷೆಯ ಮಳೆಯಾಗದೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಏಕಾಏಕಿ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸುತ್ತೇವೆ. ಕನ್ನಡಿಗರಿಗೆ ಕುಡಿಯುವ ನೀರಿಗೂ ಸಂಕಷ್ಟವಿದೆ ಎಂಬ ಗಂಭೀರ ವಿಚಾರವನ್ನು ಈ ಸಭೆ ಮೂಲಕ ರಾಜ್ಯ ಸರ್ಕಾರದ ಗಮನಕ್ಕೆ ತರುತ್ತಿದ್ದೇವೆ ಎಂದು ಹೇಳಿದರು.

ಕಾವೇರಿ ನೀರು ನಿರ್ವಹಣಾ ಮಂಡಳಿ ನೀಡಿರುವ ನಿರ್ದೇಶನದಂತೆ ಸರ್ಕಾರ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬಾರದು. ಒಂದು ವೇಳೆ ಬಿಟ್ಟಿದ್ದೇ ಆದರೆ, ರೈತರಿಗೆ ಪ್ರತಿಭಟನೆಗೆ ಕರೆ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಅಲ್ಲದೆ, ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ರಾಜ್ಯ ಸರಕಾರ ಕೂಡಲೇ ಮುಂದಾಗಬೇಕು ಎಂದು ಒತ್ತಾಯಿಸಿದರು.

ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಕುಡಿಯುವ ನೀರಿನ ಪ್ರಮಾಣವನ್ನು 30 ಟಿಎಂಸಿ ಅಡಿಗೆ ಪರಿಷ್ಕರಿಸಬೇಕು. ಕೇಂದ್ರ ಸರ್ಕಾರವು ಕಡಿಮೆ ಮಳೆಯ ವರ್ಷದಲ್ಲಿ ನೀರು ಬಿಡುಗಡೆ ಮಾನದಂಡಗಳನ್ನು ತಕ್ಷಣ ಜಾರಿಗೊಳಿಸಬೇಕು ಮತ್ತು ಕಾವೇರಿ ಪ್ರಾಧಿಕಾರವನ್ನು ಸ್ವಾಯತ್ತ ಪ್ರಾಧಿಕಾರವಾಗಿ ರಚಿಸಬೇಕು ಎಂದು ಸಭೆಯ ಮೂಲಕ ಒತ್ತಾಯಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com