ಕಾವೇರಿ: ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್‌ ನೀರು ಹರಿಸಲು ಕರ್ನಾಟಕಕ್ಕೆ ಸೂಚನೆ, ಸಿಡಬ್ಲ್ಯೂಆರ್'ಸಿ ಆದೇಶ ಎತ್ತಿಹಿಡಿದ ಸಿಡಬ್ಲ್ಯೂಎಂಎ!

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಕಿತ್ತಾಟಕ್ಕೆ ಕಾರಣವಾಗಿರುವ ಕಾವೇರಿ ನದಿ  ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಭಾರೀ ಹಿನ್ನಡೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಕಿತ್ತಾಟಕ್ಕೆ ಕಾರಣವಾಗಿರುವ ಕಾವೇರಿ ನದಿ  ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಭಾರೀ ಹಿನ್ನಡೆಯಾಗಿದೆ.

ಮಂಗಳವಾರ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರು ನಿಯಂತ್ರಣಾ ಸಮಿತಿ (CWRC) ಹೇಳಿದಷ್ಟೇ ನೀರು ಬಿಡಬೇಕು, ಮಂಗಳವಾರದಿಂದಲೇ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕೆಂದು ತೀರ್ಮಾನ ಮಾಡಲಾಗಿದೆ. ಇದರಿಂದ ಕರ್ನಾಟಕ ಮತ್ತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಈ ನಡುವೆ ಸಿಡಬ್ಲ್ಯುಆರ್‌ಸಿ ನಿರ್ದೇಶನದ ವಿರುದ್ಧ ಮಂಡ್ಯದಲ್ಲಿ ಮಂಗಳವಾರ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲಕಾಲ ಮೈಸೂರು-ಬೆಂಗಳೂರು ಹೆದ್ದಾರಿ ತಡೆಹಿಡಿದರು.

ರಾಜ್ಯ ಸರ್ಕಾರ ಬಹು ನಿರೀಕ್ಷಿತ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಮೈಸೂರಿನಲ್ಲಿ ನಡೆಸುತ್ತಿದ್ದು, ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ಆಗಮಿಸುತ್ತಿದ್ದಾರೆ. ಕಾರ್ಯಕ್ರಮದ ವೇಳೆ ರೈತರು ಪ್ರತಿಭಟನೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಮಂಗಳವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಜಲಸಂಪನ್ಮೂಲ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ರಾಜ್ಯದ ಕಾನೂನು ತಂಡದೊಂದಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಾಲೋಚನೆ ನಡೆಸಿದರು. ತಮಿಳುನಾಡಿಗೆ ನೀರುವ ಬಿಡುಗಡೆ ಮಾಡುವ ಕುರಿತು ಸಿಡಬ್ಲ್ಯುಆರ್‌ಸಿ ನಿರ್ದೇಶನವನ್ನು ಅನುಸರಿಸುವಂತೆ ಸೂಚಿಸಿದರು.

ಸಭೆ ಬಳಿಕ ಸುದ್ದಿಕಾರರೊಂದಿಗೆ ಮಾತನಾಡಿದ ಡಿ,ಕೆ.ಶಿವಕುಮಾರ್ ಅವರು, ಸುಪ್ರೀಂಕೋರ್ಟ್ ಚಾಟಿ ಬೀಸಬೇಕೆಂದು ಬಯಸುತ್ತಿದ್ದೀರಾ? ನಾನು ಅದನ್ನು ಬಯಸುವುದಿಲ್ಲ. ಮುಖ್ಯಮಂತ್ರಿ ಹಾಗೂ ಕಾನೂನು ತಂಡದೊಂದಿಗೆ ಚರ್ಚೆ ನಡೆಸುತ್ತಿದ್ದೇವೆಂದು ಹೇಳಿದರು.

ಕಾವೇರಿ ನದಿ ನೀರು ವಿಚಾರ ಕುರಿತ ನಿರ್ಧಾರ ಕೇಂದ್ರ ಸರ್ಕಾರದ ಬಳಿ ಇದೆ. ಈಗಾಗಲೇ ನಾವು ಅಡ್ವೊಕೇಟ್ ಜನರಲ್ ಅವರಿಂದ ಸಲಹೆಯನ್ನು ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ವಕೀಲರು ಮತ್ತು ಅಧಿಕಾರಿಗಳು ಪ್ರಬಲವಾಗಿ ವಾದ ಮಂಡಿಸುತ್ತಿದ್ದಾರೆ. ರೈತರಿಗೂ ವಾಸ್ತವತೆ ಗೊತ್ತಿದೆ. ಮಂಗಳವಾರ ರಾತ್ರಿಯಿಂದಲೇ ನೀರು ಬಿಡುವಂತೆ ಸಿಡಬ್ಲ್ಯುಎಂಎ ಆದೇಶ ನೀಡಿದೆ. ಆದರೆ, ನಾವು ಇದರ ಸಾಧಕ-ಬಾಧಕಗಳನ್ನು ಪರಿಶೀಲಿಸಬೇಕಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ!

ತಮಿಳುನಾಡು ದಿನಕ್ಕೆ 24,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿದೆ. ಆದರೆ, ಕರ್ನಾಟಕದ ಅಣೆಕಟ್ಟುಗಳಿಗೆ ಒಳಹರಿವು ದುರ್ಬಲವಾಗಿರುವುದರಿಂದ ಅಷ್ಟು ಪ್ರಮಾಣದ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯದ ತಾಂತ್ರಿಕ ಮತ್ತು ಕಾನೂನು ತಂಡ ವಾದಿಸಿದೆ. ಪ್ರಸ್ತುತ, ಕೆಆರ್‌ಎಸ್ ಜಲಾಶಯದಲ್ಲಿ 15 ಟಿಎಂಸಿಯಷ್ಟು ನೀರಿದ್ದು, ಕಬಿನಿಯಲ್ಲಿ ಕೇವಲ 3 ಟಿಎಂಸಿ ನೀರಿದೆ ಎಂದು ಹೇಳಿದ್ದಾರೆ.

ಈ ನಡುವೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ನೀರಾವರಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಖಚಿತಪಡಿಸಿಕೊಳ್ಳಲು, ಕೆಆರ್‌ಎಸ್ ಮತ್ತು ಸುತ್ತಮುತ್ತ ಮತ್ತು ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಈಗಾಗಲೇ ತಮಿಳುನಾಡಿಗೆ ಉತ್ತಮ ಪ್ರಮಾಣದಲ್ಲಿಯೇ ಕಾವೇರಿ ನೀರು ಬಿಡುಗಡೆ ಮಾಡಲಾಗಿದೆ. ನ್ಯಾಯಾಲಯದ ಮುಂದೆ ಅಂಕಿ ಅಂಶಗಳನ್ನು ತೋರಿಸಿದರೆ, ಭಾಗಃ ನೀರು ಬಿಡುಗಡೆ ಮಾಡಲು ನಿರ್ದೇಶನ ನೀಡಬಹುದು ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: ಕಾವೇರಿ ವಿವಾದ: ಮುಂದಿನ 15 ದಿನಗಳವರೆಗೆ ತಮಿಳುನಾಡಿಗೆ ಪ್ರತಿದಿನ 5,000 ಕ್ಯೂಸೆಕ್ಸ್ ನೀರು ಬಿಡುಗಡೆಗೆ ಸಿಡಬ್ಲ್ಯೂ‌ಆರ್ ಸಿ ಶಿಫಾರಸು

ಮಂಡ್ಯದ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಅವರು ಮಾತನಾಡಿ, ತಮಿಳುನಾಡಿಗೆ ನೀರು ಬಿಟ್ಟರೆ ಕರ್ನಾಟಕದ ರೈತರಿಗೆ ತೊಂದರೆಯಾಗುತ್ತದೆ. ಇದು ರಾಜ್ಯದ ಕಾನೂನು ವಿಭಾಗದ ವೈಫಲ್ಯವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಪರಿಸ್ಥಿತಿ ವಿವರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದರಿಂದ ಇಲ್ಲಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 102 ಅಡಿಗೆ ಇಳಿದಿದ್ದು, 15 ದಿನಗಳವರೆಗೆ ಪ್ರತಿದಿನ 5,000 ಕ್ಯೂಸೆಕ್ ಅಂದರೆ 7 ಟಿಎಂಸಿ ಅಡಿ ನೀರು ಬಿಟ್ಟರೆ ನಮ್ಮ ದುಸ್ಥಿತಿ ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಊಹಿಸಿಕೊಳ್ಳಬಹುದು. 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರನ್ನು ಕಾಲುವೆಗಳಿಗೆ ಬಿಡಲಾಗುತ್ತಿತ್ತು. ನಂತರ 15 ದಿನಗಳವರೆಗೆ ನಿಲ್ಲಿಸಲಾಯಿತು. ಜಲಾಶಯದ ಮಟ್ಟ 90 ಅಡಿಗೆ ಇಳಿದರೆ, ಕುಡಿಯುವ ಉದ್ದೇಶಕ್ಕಾಗಿ ನೀರನ್ನು ಸಂಗ್ರಹಿಸಿ, ರೈತರಿಗೆ ನೀರು ಬಿಡುವುದುನ್ನು ನಿಲ್ಲಿಸುತ್ತಾರೆ. ನಮ್ಮ ಮುಂದಿನ ಪ್ರತಿಭಟನೆ ಕುರಿತು ಬುಧವಾರ ಸಭೆ ನಡೆಸಿ ನಿರ್ಧಾರ ಕೈಗೊಳ್ಳಳಾಗುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com