ಮಾರ್ಚ್ 4ಕ್ಕೆ ಹುಬ್ಬಳ್ಳಿಗೆ ಕೇಜ್ರಿವಾಲ್ ಭೇಟಿ

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ಮಾರ್ಚ್ 4 ರಂದು ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ.
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್

ಹುಬ್ಬಳ್ಳಿ: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ಮಾರ್ಚ್ 4 ರಂದು ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಆಮ್ ಅದ್ಮಿ ಪಕ್ಷವು ದಾವಣಗೆರೆಯಲ್ಲಿ ಪಕ್ಷದ ಸಮಾವೇಶವನ್ನು ಹಮ್ಮಿಕೊಂಡಿದೆ. ಈ ಸಮಾವೇಶದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಕೇಜ್ರಿವಾಲ್ ಹಾಗೂ ಭಗವಂತ್ ಮಾನ್ ಅವರು ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ.

ರಾಜ್ಯ ವಿಧಾನಸಭಾ ಚುನಾವಣೆಗೂ ರಾಜ್ಯದಲ್ಲಿ ಸಂಚಲನ ಮೂಡಿಸಲು ದಾವಣಗೆರೆಯಲ್ಲಿ ಸಮಾವೇಶ ನಡೆಸುವಂತೆ ಪಕ್ಷದ ಮುಖಂಡರಿಗೆ ಕೇಜ್ರಿವಾಲ್ ಅವರು ಸೂಚನೆ ನೀಡಿದ್ದು,ಸಾರ್ವಜನಿಕರು ಭಾಗವಹಿಸುವಂತೆ ಪ್ರೋತ್ಸಾಹಿಸುವ ಮೂಲಕ ರ್ಯಾಲಿಯನ್ನು ಯಶಸ್ವಿಗೊಳಿಸುವಂತೆ ಜಿಲ್ಲಾ ಘಟಕಗಳಿಗೆ ಸೂಚಿಸಿದ್ದಾರೆಂದು ವರದಿಗಳು ತಿಳಿಸಿವೆ.

ಪಕ್ಷದ ಮುಖಂಡ ವಿಕಾಸ ಸೊಪ್ಪಿನ್ ಅವರು ಮಾತನಾಡಿ, ಜನರೊಂದಿಗೆ ಸಂಪರ್ಕ ಸಾಧಿಸಲು ಪಕ್ಷದ ಮುಖಂಡರಿಂದ ವಿಮಾನ ನಿಲ್ದಾಣದಿಂದ ರಾಣಿ ಚನ್ನಮ್ಮ ವೃತ್ತದವರೆಗೆ ತೆರೆದ ವಾಹನದಲ್ಲಿ ರೋಡ್‌ಶೋ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ಭೇಟಿ ನೀಡಿದ್ದ ಹುಬ್ಬಳ್ಳಿಯ ಆನಂದನಗರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಪಕ್ಷದ ಮುಖಂಡರನ್ನು ಕರೆದುಕೊಂಡು ಹೋಗಲು ಚಿಂತನೆ ನಡೆಸಲಾಗಿದೆ. ನಾಯಕರೂ ಕೂಡ ಶಾಲೆಯ ಸ್ಥಿತಿಗತಿ ತಿಳಿದುಕೊಳ್ಳಲು ಬಯಸಿದ್ದಾರೆ. ಆದರೆ, ಬಿಝಿಯಾದ ವೇಳಾಪಟ್ಟಿಯಿಂದಾಗಿ ಅದು ಸಾಧ್ಯವಾಗುತ್ತದೆಯೇ ಇಲ್ಲವೋ ಎಂಬುದು ತಿಳಿದಿಲ್ಲ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ರೋಡ್ ಶೋನಲ್ಲಿ ಚೆನ್ನಮ್ಮ ವೃತ್ತವನ್ನು ತಲುಪಿದ ನಂತರ, ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಅವರು, ಅಲ್ಪಸಂಖ್ಯಾತರು ಹೆಚ್ಚಾಗಿರುವ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಭಾಗವಾಗಿರುವ ಹಳೇ ಹುಬ್ಬಳ್ಳಿ ಪ್ರದೇಶದ ಸಿದ್ದಾರೂಢ ಮಠ ಮತ್ತು ಫತೇ ಶಾವಲಿ ದರ್ಗಾಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com