ಟಿಕೆಟ್ ವಿಚಾರವಾಗಿ ಗಲಾಟೆ: ಕಾಂಗ್ರೆಸ್ ನಿಂದ 'ಕೆಜಿಎಫ್ ಬಾಬು' ಅಮಾನತು!

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಉದ್ಯಮಿ ಕೆಜಿಎಫ್ ಬಾಬು ಅವರಿಗೆ ಕಾಂಗ್ರೆಸ್ ಪಕ್ಷ ಶಾಕ್ ನೀಡಿದ್ದು, ಪಕ್ಷದಿಂದ ಅಮಾನತು ಮಾಡಿದೆ.
ಕೆಜಿಎಫ್ ಬಾಬು
ಕೆಜಿಎಫ್ ಬಾಬು

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಉದ್ಯಮಿ ಕೆಜಿಎಫ್ ಬಾಬು ಅವರಿಗೆ ಕಾಂಗ್ರೆಸ್ ಪಕ್ಷ ಶಾಕ್ ನೀಡಿದ್ದು, ಪಕ್ಷದಿಂದ ಅಮಾನತು ಮಾಡಿದೆ.

ಹೌದು.. ಪಕ್ಷದ ವಿರೋಧ ಹೇಳಿಕೆಯ ಹಿನ್ನೆಲೆಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೆಜಿಎಫ್ ಬಾಬು ಅವರನ್ನು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ.

ನಿನ್ನೆ ಕೆಪಿಸಿಸಿ ಕಚೇರಿಗೆ ಆಗಮಿಸಿದ ಕೆಜಿಎಫ್‌ ಬಾಬು ಮಾಧ್ಯಮಗಳ ಜೊತೆ ಮಾತನಾಡುವ ಸಂದರ್ಭದಲ್ಲಿ ಕಾಂಗ್ರೆಸ್ ನವರು ಅತಿಯಾದ ಆತ್ಮವಿಶ್ವಾಸದಲ್ಲಿ ಇದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 80 ಸೀಟು ಕೂಡ ಬರಲ್ಲ ಎಂದ‌ು ಕೆಪಿಸಿಸಿ ಕಚೇರಿಯಲ್ಲೇ ಹೇಳಿಕೆ ನೀಡಿದ್ದರು. ಬಾಬು ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಗರಂ‌ ಆದ ಕಾರಣ ಕೆಪಿಸಿಸಿ ಕಚೇರಿಯಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಇದೀಗ ಅವರ ವರ್ತನೆ ವಿರುದ್ಧ ಕ್ರಮ ಕೈಗೊಂಡಿರುವ ಕಾಂಗ್ರೆಸ್ ಶಿಸ್ತು ಸಮಿತಿ ಕೆಜಿಎಫ್ ಬಾಬು ಅವರನ್ನು ಪಕ್ಷದಿಂದ ಅಮಾನತು ಮಾಡಿದೆ.

ಕಾಂಗ್ರೆಸ್ ಪಕ್ಷದ ಶಿಸ್ತುಪಾಲನಾ ಸಮಿತಿಯಿಂದ ತಮಗೆ ಈಗಾಗಲೆ ಕಾರಣ ಕೇಳಿ ನೋಟಿಸ್‌ ಅನ್ನು ಮೂರು ತಿಂಗಳ ಹಿ೦ದೆಯೇ ತಾವು ಪಕ್ಷದ ನೀತಿ ವಿರುದ್ಧವಾಗಿ ಮಾಧ್ಯಮದವರಿಗೆ ವಿವಿಧ ರೀತಿಯ ಹೇಳಿಕೆ ನೀಡುವ ಬಗ್ಗೆ ನೀಡಿರುತ್ತದೆ ಹಾಗೂ ನೀವು ಶಿಸ್ತು ಸಮಿತಿಯ ಕಾರಣ ಕೇಳಿ ನೋಟಿಸ್‌ಗೆ ಸಮಂಜಸ ಉತ್ತರವನ್ನು ನೀಡಿರುವುದಿಲ್ಲ ಎಂದು ಅಮಾನತು ಪತ್ರದಲ್ಲಿ ತಿಳಿಸಲಾಗಿದೆ.

ಮತ್ತೆ ಸುದ್ದಿಗೋಷ್ಠಿ ನಡೆಸಿ ಬಾಬು ಆಕ್ರೋಶ
ಕೆಪಿಸಿಸಿ ಕಚೇರಿಯಲ್ಲಿ ಗಲಾಟೆ ಬಳಿಕ ಪತ್ರಿಕಾಗೋಷ್ಠಿಯನ್ನು ನಡೆಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಿರುದ್ಧ ಕೆಜಿಎಫ್ ಬಾಬು ವಾಗ್ದಾಳಿ ನಡೆಸಿದ್ದರು. ಸಲೀಂ ಅಹ್ಮದ್ ಅಲ್ಪಸಂಖ್ಯಾತ ನಾಯಕರಲ್ಲ. ಕೆಪಿಸಿಸಿ ಕಚೇರಿಯಲ್ಲಿ ಯಾರಿಗೂ ಮರ್ಯಾದೆ ಸಿಗುತ್ತಿಲ್ಲ ಎಂದೆಲ್ಲಾ ಆರೋಪ ಮಾಡಿದ್ದರು. ಈ ನಡುವೆ ಕೆಜಿಎಫ್ ಬಾಬು ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್‌ನ ಎಸ್ ಮನೋಹರ್ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಪತ್ರ ಕೂಡ ಬರೆದಿದ್ದರು. ಇದೀಗ ಕೆಜಿಎಫ್‌ ಬಾಬು ಅವರನ್ನು ಅಮಾನತು ಮಾಡಿ ಕಾಂಗ್ರೆಸ್ ಶಿಸ್ತು ಸಮಿತಿಯ ಅಧ್ಯಕ್ಷ ರೆಹಮಾನ್ ಖಾನ್ ಕ್ರಮ ಕೈಗೊಂಡಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com