ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಲೀಟರ್‌ ಹಾಲಿಗೆ 1 ರೂ. ಪ್ರೋತ್ಸಾಹ ಧನ ಹೆಚ್ಚಳ: ಕೊಟ್ಟ ಮಾತು ತಪ್ಪುವುದಿಲ್ಲ ಎಂದ ಸಿದ್ದರಾಮಯ್ಯ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಆದರೆ, ಪ್ರತೀ ಲೀಟರ್‌ ಹಾಲಿಗೆ 1 ರೂಪಾಯಿ ಹೆಚ್ಚಿನ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ನಡೆದ ಕನ್ನಡ ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನಾ ಸಮಾರಂಭದ ನಂತರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಡೋಲು ಬಾರಿಸಿದರು.
ಮೈಸೂರಿನಲ್ಲಿ ಶುಕ್ರವಾರ ನಡೆದ ಕನ್ನಡ ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನಾ ಸಮಾರಂಭದ ನಂತರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಡೋಲು ಬಾರಿಸಿದರು.

ಮಂಡ್ಯ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಆದರೆ, ಪ್ರತೀ ಲೀಟರ್‌ ಹಾಲಿಗೆ 1 ರೂಪಾಯಿ ಹೆಚ್ಚಿನ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.

ಮಂಡ್ಯ ವಿಶ್ವ ವಿದ್ಯಾಲಯ ಆವರಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಮೈಸೂರಿನಲ್ಲಿ ಕಾರ್ಖಾನೆ ಮುಚ್ಚಿದ್ದಕ್ಕೆ ಕಿಡಿಕಾರಿದರು. ಆಲ್ಲದೆ, ಹಾಲಿನ ದರವನ್ನು ಲೀಟರ್‌ಗೆ 5 ರೂಪಾಯಿ ಹೆಚ್ಚಿಸುವ ಭರವಸೆಯನ್ನು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಈಡೇರಿಸಿಲಿಲ್ಲ ಎಂದು ಕಿಡಿಕಾರಿದರು.

ನಾವು ಅಧಿಕಾರಕ್ಕೆ ಬಂದಿದ್ದೇ ಆದರೆ, ಮಂಡ್ಯದಲ್ಲಿ ಹೈನೋದ್ಯಮ ಪ್ರೋತ್ಸಾಹಿಸಿ ರೈತರಿಗೆ ನೆರವಾಗುವ ದೃಷ್ಠಿಯಿಂದ ಈಗಿರುವ 5 ರೂಪಾಯಿ ಪ್ರೋತ್ಸಾಹದೊಂದಿಗೆ ಹೆಚ್ಚುವರಿ 1 ರೂಪಾಯಿ ಸೇರಿಸಿ 6 ರೂಪಾಯಿಗಳ ಪ್ರೋತ್ಸಾಹ ಧನ ನೀಡಲಾಗುವುದು. ಇದರಿಂದ ಹೈನುಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಘೋಷಿದರು.

ನಂತರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೈಶುಗರ್ ಕಾರ್ಖಾನೆಯನ್ನು ವಿಲೇವಾರಿ ಮಾಡಲು ಬಿಜೆಪಿ ಸರ್ಕಾರ ಸಿದ್ಧವಾಗಿತ್ತು. ಕಾರ್ಖಾನೆಯನ್ನು ಸ್ವಾಧೀನಪಡಿಸಿಕೊಳ್ಳಲು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಉತ್ಸುಕರಾಗಿದ್ದರು. ಆದರೆ, ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವುದನ್ನು ನಾನು ಹಾಗೂ ಕೆಲವರು ತೀವ್ರವಾಗಿ ವಿರೋಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಈ ಯೋಜನೆಯನ್ನು ಕೈಬಿಟ್ಟಿತು ಎಂದು ಹೇಳಿದರು.

ಬಿಜೆಪಿ ಸರ್ಕಾರ ಇತ್ತೀಚೆಗೆ ಅತ್ತೂ ಕರೆದು ಕಾರ್ಖಾನೆ ಆರಂಭಿಸಿ ಕೇವಲ 90 ಸಾವಿರ ಟನ್ ಕಬ್ಬನ್ನು ಮಾತ್ರ ಅರೆದಿದ್ದಾರೆ. ವಾಸ್ತವದಲ್ಲಿ ಜಿಲ್ಲೆಯಲ್ಲಿ 3.5 ಲಕ್ಷ ಟನ್ ಕಬ್ಬು ಅರೆಯಬೇಕಿತ್ತು. ಹೀಗಿರುವಾಗ ರೈತರು ಬೇರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡುವ ಅನಿವಾರ್ಯತೆ ಬಂದಿದೆ. ಇಲ್ಲದಿದ್ದರೆ ಕಬ್ಬು ಒಣಗಿ ಇಳುವರಿ ಕಳೆದುಕೊಳ್ಳುವ ಆತಂಕ ರೈತರದ್ದಾಗಿದೆ ಎಂದು ತಿಳಿಸಿದರು.

ಮೈಶುಗರ್ ಕಾರ್ಖಾನೆಯ ನಿರ್ವಹಣೆಗೆ 50 ಕೋಟಿ ರೂ. ಭರವಸೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 30 ಕೋಟಿ ರೂ. ಪಾವತಿಸಿದ್ದಾರೆ. ಕಾರ್ಖಾನೆ ಪುನಶ್ಚೇತನಕ್ಕೆ ಹಣವನ್ನು ಸಾಲವಾಗಿ ಪಡೆಯುವಂತೆ ಸೂಚಿಸಿದ್ದಾರೆ ಎಂದು ಹೇಳಿದರು.

ಮುಂದೆ ನಾವು ಅಧಿಕಾರಕ್ಕೆ ಬಂದ ಮೊದಲ ದಿನವೇ, ಸಂಪುಟ ಸಭೆ ಮಾಡಿ ಉಚಿತ ಅಕ್ಕಿ, 200 ಯುನಿಟ್‌ ವಿದ್ಯುತ್‌ ಮತ್ತು ತಿಂಗಳಿಗೆ 2000 ರೂ. ನೀಡುವ ಆದೇಶ ಹೊರಡಿಸುತ್ತೇವೆ. ಒಂದು ವೇಳೆ ನಾವು ಕೊಟ್ಟ ಮಾತಿಗೆ ತಪ್ಪಿದರೆ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತೇವೆ. ರಾಜಕಾರಣ ಮಾಡುವುದು ಜನರಿಗೆ ಟೋಪಿ ಹಾಕುವುದಕ್ಕಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ರೈತರ ಹಿತಾಸಕ್ತಿ ಕಾಪಾಡಲು ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಕೈಗೊಂಡಿದೆ, ಆದರೆ ಸರ್ಕಾರ ನನ್ನ ಹಾಗೂ ಪಕ್ಷದ ಇತರೆ ನಾಯಕರ ವಿರುದ್ಧ ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣಗಳನ್ನು ದಾಖಲಿಸಿದೆ ಎಂದು ಹೇಳಿದರು.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಮೊದಲು ಅಡಿಗಲ್ಲು ಹಾಕಿದ್ದು ನಾವು. ಆಸ್ಕರ್ ಫರ್ನಾಂಡೀಸ್ ಅವರು ಹೆದ್ದಾರಿ ಸಚಿವರಾಗಿದ್ದ ಸಮಯದಲ್ಲಿ ಸಿದ್ದರಾಮಯ್ಯ ಮತ್ತು ನಾನು ಹೋಗಿ 14 ಸಾವಿರ ಕೋಟಿ ರೂಪಾಯಿಗೆ ಯೋಜನೆಗೆ ಮಂಜುರಾತಿ ಪಡೆದುಕೊಂಡು ಬಂದಿದ್ದೆವು. ಅದನ್ನು ಬಿಜೆಪಿಯವರು ಉದ್ಘಾಟನೆ ಮಾಡುವುದಕ್ಕೆ ರೆಡಿಯಾಗಿದ್ದಾರೆಂದು ಕುಟುಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com