ಸರಣಿ ಸಭೆಗಳ ಬಳಿಕವೂ ಇನ್ನೂ ಅಂತಿಮಗೊಂಡಿಲ್ಲ ವಿಪಕ್ಷ ನಾಯಕನ ಆಯ್ಕೆ; ಸೋಲಿಗೆ 3 ಕಾರಣಗಳ ಕಂಡುಕೊಂಡ ಬಿಜೆಪಿ

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಆತ್ಮಾವಲೋಕನ ಸಭೆ ನಡೆಸಿರುವ ಬಿಜೆಪಿ, ಸೋಲಿಗೆ 3 ಕಾರಣಗಳನ್ನು ಕಂಡುಕೊಂಡಿದೆ. ಆದರೆ, ವಿಪಕ್ಷ ನಾಯಕನ ಆಯ್ಕೆ ಮಾತ್ರ ಇನ್ನೂ ಅಂತಿಮಗೊಂಡಿಲ್ಲ.
ನಗರದಲ್ಲಿ ನಡೆಸ ಸಭೆಯಲ್ಲಿ ಬಿಜೆಪಿ ನಾಯಕರು.
ನಗರದಲ್ಲಿ ನಡೆಸ ಸಭೆಯಲ್ಲಿ ಬಿಜೆಪಿ ನಾಯಕರು.

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಆತ್ಮಾವಲೋಕನ ಸಭೆ ನಡೆಸಿರುವ ಬಿಜೆಪಿ, ಸೋಲಿಗೆ 3 ಕಾರಣಗಳನ್ನು ಕಂಡುಕೊಂಡಿದೆ. ಆದರೆ, ವಿಪಕ್ಷ ನಾಯಕನ ಆಯ್ಕೆ ಮಾತ್ರ ಇನ್ನೂ ಅಂತಿಮಗೊಂಡಿಲ್ಲ.

ನಿನ್ನೆಯಷ್ಟೇ ಬಿಜೆಪಿ ಸರಣಿ ಸಭೆ ನಡೆಸಿದತು. ಬೆಳಿಗ್ಗೆ ನೂತನ ಶಾಸಕರೊಂದಿಗೆ ಸಭೆ ನಡೆದರೆ, ಮಧ್ಯಾಹ್ನ ಪರಾಜಿತ ಅಭ್ಯರ್ಥಿಗಳೊಂದಿಗೆ, ನಂತರ ಕೋರ್ ಕಮಿಟಿ ಸಭೆ ನಡೆಯಿತು.

ಮಧ್ಯಾಹ್ನ ಪರಾಜಿತ ಅಭ್ಯರ್ಥಿಗಳ ಸಭೆ ವೇಳೆ ಸೋಲಿನ ಕುರಿತು ಆತ್ಮಾವಲೋಕನ ನಡೆಯಿತು. ಈ ವೇಳೆ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋಲು ಅನುಭವಿಸಲು ರಾಜ್ಯ ನಾಯಕರು, ಸಚಿವರು ಪ್ರಮುಖ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಯಿತು ಎಂದು ತಿಳಿದುಬಂದಿದೆ.

ನಮ್ಮ ಮೇಲೆ ಇನ್ನೊಬ್ಬರನ್ನು ತಂದು ಕೂರಿಸಿದ್ದು ಸೋಲಿಗೆ ಕಾರಣವಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಕೆಲವು ಪರಾಜಿತ ನಾಯಕರು ಸರ್ಕಾರ ಇದ್ದಾಗ ಸಚಿವರು ಸ್ಪಂದಿಸದೆ ಇದ್ದದ್ದು, ಕ್ಷೇತ್ರಗಳ ಸಮಸ್ಯೆಗಳಿಗೆ ಸೂಕ್ತ ಮತ್ತು ಅಗತ್ಯವಿದ್ದದಷ್ಟು ಅನುದಾನ ನೀಡದೆ ಇದ್ದದ್ದು ಸೋಲಿಗೆ ಕಾರಣವಾಗಿದೆ ಎಂದು ಸಭೆಯಲ್ಲಿ ನೋವನ್ನು ತೋಡಿಕೊಂಡಿದ್ದಾರೆ.

ಈ ನಡುವೆ ಮಧ್ಯಾಹ್ನ ನಡೆದ ಸೋತ ಅಭ್ಯರ್ಥಿಗಳ ಸಭೆಗೆ ಹಿರಿಯ ಮುಖಂಡರಾದ ವಿ.ಸೋಮಣ್ಣ, ಡಾ.ಕೆ.ಸುಧಾಕರ್, ಜೆ.ಸಿ.ಮಾಧುಸ್ವಾಮಿ ಗೈರು ಹಾಜರಾಗಿರುವುದು ಕುತೂಹಲ ಮೂಡುವಂತೆ ಮಾಡಿದೆ.

ಸುಧಾಕರ್ ಉದ್ದೇಶಪೂರ್ವಕವಾಗಿ ವಿದೇಶ ಪ್ರವಾಸ ಕೈಗೊಂಡಿದ್ದರೆ, ನಾಯಕರ ಮೇಲಿನ ಸಿಟ್ಟಿನಿಂದ ವಿ.ಸೋಮಣ್ಣ ಸಭೆಯಲ್ಲಿ ಭಾಗವಹಿಸಿಲ್ಲ ಎಂದು ತಿಳಿದು ಬಂದಿದೆ.

ಇನ್ನುಳಿದಂತೆ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಬಿ.ಸಿ. ನಾಗೇಶ್, ಬಿ.ಸಿ. ಪಾಟೀಲ್, ಶ್ರೀರಾಮುಲು ಮತ್ತು ಕೆ.ಸಿ. ನಾರಾಯಣ ಗೌಡ ಸಭೆಯಲ್ಲಿ ಭಾಗವಹಿಸಿದ್ದರು ಎಂದು ವರದಿಗಳು ತಿಳಿಸಿವೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು, ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ವಿರೋಧ ಪಕ್ಷದ ನಾಯಕ ಯಾರು ಎಂಬ ಬಗ್ಗೆ ಶಾಸಕರಿಂದ ಪ್ರತಿಕ್ರಿಯೆ ಸಂಗ್ರಹಿಸಿದ್ದಾರೆ. ಪರಿಶೀಲನಾ ಸಭೆಯ ನಂತರ ವಿಪಕ್ಷ ನಾಯಕರನ್ನು ಶೀಘ್ರದಲ್ಲೇ ಆಯ್ಕೆ ಮಾಡಲಾಗುವುದು. "ಒಳ ಮೀಸಲಾತಿ, ಜನರು ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳು ಹಾಗೂ ಬಿಜೆಪಿ ಸರ್ಕಾರದ ಬಗೆಗಿನ ನಕಾರಾತ್ಮಕ ಪ್ರಚಾರದಿಂದ ಪಕ್ಷ ಸೋಲು ಕಂಡಿದೆ.

ರಾಜ್ಯದಲ್ಲಿ 1985ರ ಚುನಾವಣೆ ಹೊರತುಪಡಿಸಿ ಬಳಿಕ ಆಡಳಿತ ಪಕ್ಷ ಮತ್ತೆ ಅಧಿಕಾರಕ್ಕೆ ಬಂದ ಉದಾಹಣೆ ಇಲ್ಲ. ಬಿಜೆಪಿ ಎದೆಗುಂದುವ ಪಕ್ಷವಲ್ಲ. 1984ರ ಲೋಕಸಭಾ ಚನಾವಣೆಯಲ್ಲಿ ಕೇವಲ ಎರಡು ಸ್ಥಾನ ಗೆದ್ದಿತ್ತು. ಆದರೆ, ಎದೆಗುಂದದೆ ಪಕ್ಷ ಸಂಘಟನೆ ಮಾಡಲಾಯಿತು. ಈ ಚುನಾವಣೆಯಲ್ಲಿಯೂ ನಮ್ಮ ಪಕ್ಷದ ಮತ ಪ್ರಮಾಣ ಕಡಿಮೆಯಾಗಿಲ್ಲ. ಸ್ಥಾನಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.

ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರಿಗೆ ವಿಶ್ವಾಸ ತುಂಬುವ ಕೆಲಸ ಮಾಡಲಾಗಿದೆ. ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ನಿರ್ಧರಿಸಲಾಗಿದೆ. ಸರ್ಕಾರದ ಒಳ್ಳೆಯ ಕಾರ್ಯಕ್ಕೆ ಸಹಕಾರ ನೀಡಲಾಗುವುದು. ಜನವಿರೋಧಿ ಕಾರ್ಯ ಮುಂದುವರೆಸಿದಾಗ ಮತ್ತು ಹಿಡನ್ ಅಜೆಂಡಾ ಜೊತೆ ರಾಜ್ಯಕ್ಕೆ ಘಾತುಕ ನಿರ್ಣಯ ಕೈಗೊಂಡರೆ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಕೇಂದ್ರ ಸಚಿವರಾದ ಸದಾನಂದಗೌಡ, ಅರುಣ್ ಸಿಂಗ್, ಈಶ್ವರಪ್ಪ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com