ಹಾಸನ ರಾಜಕಾರಣ ರೇವಣ್ಣ ಅವರಿಗೇ ಬಿಟ್ಟಿದ್ದೇನೆ: ಎಚ್.ಡಿ. ಕುಮಾರಸ್ವಾಮಿ

ಹಾಸನ ಜೆಡಿಎಸ್ ಟಿಕೆಟ್ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು, ಹಾಸನ ಜಿಲ್ಲೆಯ ರಾಜಕಾರಣವನ್ನು ರೇವಣ್ಣ ಅವರಿಗೇ ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ
ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಹಾಸನ ಜೆಡಿಎಸ್ ಟಿಕೆಟ್ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು, ಹಾಸನ ಜಿಲ್ಲೆಯ ರಾಜಕಾರಣವನ್ನು ರೇವಣ್ಣ ಅವರಿಗೇ ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಡೂರು ಕ್ಷೇತ್ರದ ಕಾಂಗ್ರೆಸ್ ಪ್ರಮುಖ ಸಿ.ಎಂ. ಧನಂಜಯ ಹಾಗೂ ಕೊಳ್ಳೇಗಾಲ ಕ್ಷೇತ್ರ ನಿವೃತ್ತ ಸರ್ಕಲ್ ಇನ್‌ಸ್ಪೆಕ್ಟರ್ ಪುಟ್ಟಸ್ವಾಮಿ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡ ಬಳಿಕ ಅವರು ಮಾತನಾಡಿದ ಅವರು, ಹಾಸನ ಜಿಲ್ಲೆಯ ರಾಜಕಾರಣವನ್ನು ರೇವಣ್ಣ ಅವರಿಗೇ ಬಿಟ್ಟಿದ್ದೇನೆ. ಪಕ್ಷಕ್ಕೆ ದುಡಿದವರನ್ನು ಎಂದೂ ಕೈಬಿಟ್ಟಿಲ್ಲ. ತಾಳ್ಮೆ ಎನ್ನುವುದು ಇಲ್ಲಿ ಮುಖ್ಯ ಎಂದರು. ಅಂತೆಯೇ ಜೆಡಿಎಸ್‌ನ ಎರಡನೇ ಪಟ್ಟಿ ಅಂತಿಮ ಹಂತದಲ್ಲಿದ್ದು, 60 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಇದೇ ತಿಂಗಳ 11 ಅಥವಾ 14ರಂದು ಪ್ರಕಟಿಸಲಾಗುವುದು ಎಂದರು.

‘ಕಡೂರು ಕ್ಷೇತ್ರದಲ್ಲಿ ಪಕ್ಷಕ್ಕೆ ದುಡಿದಿದ್ದ ಧರ್ಮೇಗೌಡರ ಬದಲು ವೈ.ಎಸ್‌.ವಿ. ದತ್ತ ಅವರಿಗೆ ಟಿಕೆಟ್ ಕೊಟ್ಟೆವು. ದೇವೇಗೌಡರ ಮಾನಸಪುತ್ರ ಎಂದು ಹೇಳಿಕೊಂಡು ಅವರು ಓಡಾಡಿದರು. ದತ್ತ ಅವರು ವಿಧಾನಸಭೆಯಲ್ಲಿ ನಿನಗೆ ನೆರವಾಗುತ್ತಾರೆ ಎಂದು ದೇವೇಗೌಡರು ಹೇಳಿದ್ದರು. ಆದರೆ, ದತ್ತ ನೆರವೂ ಆಗಲಿಲ್ಲ; ಪಕ್ಷಕ್ಕೆ ದ್ರೋಹ ಮಾಡಿ ಹೋದರು’ ಎಂದು ಕಿಡಿಕಾರಿದರು.

ದೇವೇಗೌಡರಿಂದ ರೋಡ್ ಶೋ
ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭದ ಅಂಗವಾಗಿ ಕುಂಬಳಗೋಡಿನಿಂದ ಮೈಸೂರಿನವರೆಗೆ ಬೃಹತ್ ರೋಡ್ ಶೋ ನಡೆಸಲಾಗುವುದು. ಮಾಜಿ ಪ್ರಧಾನಿ ದೇವೇಗೌಡರನ್ನು ತೆರೆದ ವಾಹನದಲ್ಲಿ ಕರೆದುಕೊಂಡು ಹೋಗಲಾಗುವುದು. ಸಮಾವೇಶದಲ್ಲಿ 10 ಲಕ್ಷ ಜನ ಸೇರಲಿದ್ದಾರೆ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಪಾಪದ ಹಣದಲ್ಲಿ ಲುಲು ಮಾಲ್‌
ಇದೇ ವೇಳೆ ‘ಪಾಪದ ಹಣದಲ್ಲಿ ಲುಲು ಮಾಲ್ ಕಟ್ಟಿದ್ದಾರೆ. ಅದರಿಂದ ಬಂದ ಹಣವನ್ನು ಜನರಿಗೆ ನೀಡುತ್ತಿಲ್ಲ’ ಎಂದು ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್‌ ಅವರನ್ನು ಕುರಿತು ಟೀಕಿಸಿದರು. ಜೆಡಿಎಸ್‌ ಕಾರ್ಯಕ್ರಮಗಳನ್ನು ವ್ಯಂಗ್ಯವಾಡಿದ್ದ ಶಿವಕುಮಾರ್ ಅವರ ಹೆಸರು ಹೇಳದೇ, ಪರೋಕ್ಷವಾಗಿ ಟೀಕಿಸಿದ ಅವರು, ‘ನಾನು ಲುಲು ಮಾಲ್ ಕಟ್ಟಿದ್ದಿದ್ದರೆ ಪಂಚರತ್ನ ಯೋಜನೆ ರೂಪಿಸುವ ಬದಲು, ಅದರಿಂದ ಬಂದ ಹಣವನ್ನು ಹಂಚಿ ಚುನಾವಣೆ ಗೆಲ್ಲುತ್ತಿದ್ದೆ’ ಎಂದರು.

ಬಿಜೆಪಿಯ ಒಬ್ಬೊಬ್ಬ ಶಾಸಕರು 40 ಕೋಟಿ–50 ಕೋಟಿ ಇಟ್ಟುಕೊಂಡಿದ್ದಾರೆ. ಜನರ ಹಣವನ್ನು ಲೂಟಿ ಮಾಡಿ, ಈ ಅಕ್ರಮ ಹಣದಲ್ಲಿ ಚುನಾವಣೆ ಗೆಲ್ಲುವುದಾಗಿ ಹೇಳುತ್ತಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com